ಚೀನಾ ಗಡಿಗೆ ರಾಹುಲ್ ಸೂಚನೆ ಮೇರೆಗೆ ಸೇನೆ ಕಳಿಸಿದ್ದಲ್ಲ: ಜೈಶಂಕರ್ ತಿರುಗೇಟು
ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಾ ಅತಿಕ್ರಮಣ ವಿಷಯ ಪ್ರಸ್ತಾಪಿಸಿ ಭಾರತ ಸರ್ಕಾರ ನಿದ್ದೆ ಮಾಡುತ್ತಿದೆ’ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿರುಗೇಟು ನೀಡಿದ್ದಾರೆ.
ನವದೆಹಲಿ: ‘ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಾ ಅತಿಕ್ರಮಣ ವಿಷಯ ಪ್ರಸ್ತಾಪಿಸಿ ಭಾರತ ಸರ್ಕಾರ ನಿದ್ದೆ ಮಾಡುತ್ತಿದೆ’ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿರುಗೇಟು ನೀಡಿದ್ದಾರೆ. ‘ಚೀನಾ ಜೊತೆಗಿನ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ, ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದಲ್ಲಿ ಸೇನೆಯನ್ನು ಭಾರತ ಸರ್ಕಾರ ನಿಯೋಜಿಸಿದೆ. ಅವರೇನೂ ರಾಹುಲ್ ಗಾಂಧಿ ಸೂಚನೆ ಮೇರೆಗೆ ಅಲ್ಲಿಗೆ ಹೋಗಿಲ್ಲ’ ಎಂದು ಬಲವಾಗಿ ಕುಟುಕಿದ್ದಾರೆ. ಇದಲ್ಲದೆ ಭಾರತದ ಸೈನಿಕರು ಗಡಿಯಲ್ಲಿನ ವಸ್ತುಸ್ಥಿತಿ ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದೂ ದೃಢ ಸ್ವರದಲ್ಲಿ ಹೇಳಿದ್ದಾರೆ.
ಸಂಸತ್ತಿನಲ್ಲಿ ಹಾಗೂ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್ (JaiShankar), ‘ಭಾರತದ ಗಡಿಗೆ ಚೀನಾ ಸೇನೆ ನಿಯೋಜನೆಗೆ ತಿರುಗೇಟು ನೀಡಲು ಭಾರತೀಯ ಸೇನೆ (Indian Army) ಕೂಡಾ ಬೃಹತ್ ಪ್ರಮಾಣದಲ್ಲಿ ತನ್ನ ಸೇನೆಯನ್ನು ನಿಯೋಜಿಸಿದೆ. 2020ರ ಬಳಿಕ ಈ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸುತ್ತಾ ಬರಲಾಗಿದೆ. ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿಕ ಇಂಥ ನಿಯೋಜನೆ ದೇಶದ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಪ್ರಮಾಣದ್ದು, ಯಾವುದೇ ದೇಶಕ್ಕೂ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು (LOC) ಏಕಪಕ್ಷೀಯವಾಗಿ ಬದಲಾಯಿಸಲು ಬಿಡುವುದಿಲ್ಲ. ಇದು ಭಾರತೀಯ ಸೇನೆಯ ಬದ್ಧತೆ’ ಎಂದರು.
ಚೀನಾದ ತವಾಂಗ್ ತಂಟೆಗೆ ಬ್ರೇಕ್; ತಿರುಗೇಟಿನ ಬಳಿಕ ಕೆಂಪು ಸೈನಿಕರು ವಾಪಸ್: ಸಂಸತ್ತಿಗೆ ಕೇಂದ್ರ ಮಾಹಿತಿ
ಮತ್ತೊಂದೆಡೆ, ‘ಚೀನಾ ಯೋಧರು (China Soldier), ಭಾರತೀಯ ಯೋಧರಿಗೆ ಪೆಟ್ಟು ನೀಡಿದ್ದಾರೆ’ ಎಂಬ ರಾಹುಲ್ ಆರೋಪವನ್ನು ರಾಜ್ಯಸಭೆಯಲ್ಲಿ ಕಟುವಾಗಿ ಟೀಕಿಸಿದ ಜೈಶಂಕರ್, ‘ಯಾವುದೇ ವಿಷಯವಾಗಿ ರಾಜಕೀಯವಾಗಿ ನಾವು ಭಿನ್ನ ಅಭಿಪ್ರಾಯ ಹೊಂದಿರಬಹುದು. ಆದರೆ 13 ಸಾವಿರ ಅಡಿಗಳ ಎತ್ತರದಲ್ಲಿ ದೇಶದ ಗಡಿ ಕಾಯುತ್ತಿರುವ ದೇಶದ ಹೆಮ್ಮೆಯ ಯೋಧರ ಬಗ್ಗೆ ರಾಹುಲ್ (Rahul Gandhi) ಅವರ ಇಂಥ ಪದ ಬಳಕೆ ಸರಿಯಲ್ಲ. ನಮ್ಮ ಯೋಧರ ಕುರಿತ ಇಂಥ ಟೀಕೆ ಸರಿಯಲ್ಲ’ ಎಂದು ಹೇಳಿದರು.
ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ, ‘ಚೀನಾದಿಂದ ಎದುರಾಗಿರುವ ಅಪಾಯವನ್ನು ನಾನು ಕಾಣಬಲ್ಲೆ, ಈ ವಿಷಯದಲ್ಲಿ ನಾನು 2- 3 ವರ್ಷಗಳಿಂದಲೂ ಸ್ಪಷ್ಟವಾಗಿದ್ದೇನೆ. ಆದರೆ ಈ ವಿಷಯವನ್ನು ಮುಚ್ಚಿಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಪೂರ್ಣ ಪ್ರಮಾಣದ ಯುದ್ಧಕ್ಕೆ ಚೀನಾ ಸನ್ನದ್ಧವಾಗುತ್ತಿದ್ದು, ಅದಕ್ಕೆ ಅರುಣಾಚಲಪ್ರದೇಶ ಮತ್ತು ಲಡಾಖ್‌ನಲ್ಲಿ ಸಿದ್ಧತೆ ನಡೆಸಲಾಗಿದೆ. ಆದರೆ ಕೇಂದ್ರ ಸರ್ಕಾರ ನಿದ್ದೆ ಮಾಡುತ್ತಿದೆ’ ಎಂದು ಆರೋಪಿಸಿದ್ದರು.
ಚೀನಾ ಗಡಿಯಲ್ಲಿ 1748 ಕಿ.ಮೀ ಹೆದ್ದಾರಿ
ಭಾರತದ ಗಡಿ ಪ್ರದೇಶದಲ್ಲಿ ಚೀನಾ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಭಾರೀ ಒತ್ತು ನೀಡಿರುವ ಬೆನ್ನಲ್ಲೇ, ಭಾರತ ಸರ್ಕಾರ ಕೂಡಾ ಚೀನಾ ಗಡಿಯಲ್ಲಿ 1748 ಕಿ.ಮೀ ಉದ್ದದ ಗಡಿ ಹೆದ್ದಾರಿ ನಿರ್ಮಿಸಲು ನಿರ್ಧರಿಸಿದೆ. ಅರುಣಾಚಲ ಪ್ರದೇಶವು ಟಿಬೆಟ್, ಚೀನಾ, ಮ್ಯಾನ್ಮಾರ್‌ನೊಂದಿಗೆ ಹಂಚಿಕೊಂಡಿರುವ ಗಡಿಯಲ್ಲಿ ಈ ಹೆದ್ದಾರಿ ನಿರ್ಮಿಸಲಾಗುವುದು. ಈ ಹೆದ್ದಾರಿ ಚೀನಾ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 20 ಕಿ.ಮೀ ದೂರದಲ್ಲಿ ಇರಲಿದ್ದು, ತುರ್ತು ಸಂದರ್ಭದಲ್ಲಿ ಭಾರತೀಯ ಸೇನೆಯನ್ನು ಗಡಿ ಪ್ರದೇಶಕ್ಕೆ ತುರ್ತಾಗಿ ಕೊಂಡೊಯ್ಯಲು ನೆರವಾಗಲಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಈ ಹೆದ್ದಾರಿ ನಿರ್ಮಿಸಲಿದೆ.
ಚೀನಾಗೆ ಕರಾಟೆ ಪಂಚ್ ನೀಡಲು ಸಿದ್ಧತೆ: ITBP ಯೋಧರಿಗೆ ತರಬೇತಿ..!
1748 ಕಿ.ಮೀ ಪೈಕಿ 800 ಕಿ.ಮೀ ಸಂಪೂರ್ಣವಾಗಿ ಹೊಸದಾಗಿ ನಿರ್ಮಾಣವಾಗಲಿರುವ ರಸ್ತೆಯಾಗಲಿದೆ. ಇಲ್ಲಿ ಹಾಲಿ ಯಾವುದೇ ರಸ್ತೆ ಸಂಪರ್ಕ ಇಲ್ಲ. ಹೊಸ ಹೆದ್ದಾರಿಯು ಬೊಮ್ಡಿಲಾ ಪ್ರದೇಶದಲ್ಲಿ ಆರಂಭವಾಗಿ, ನಫ್ರಾ, ಹುರಿ, ಮೊನಿಗೋಂಗ್ ಮೂಲಕ ಹಾದು, ಚೀನಾ ಸಮೀಪದ ಜಿಡೋ, ಚೆನ್‌ಕ್ವೆಂಟ್ಲಿ ದಾಟಿ, ಭಾರತ ಮತ್ತು ಮ್ಯಾನ್ಮಾರ್‌ನ ಬಳಿ ಬರುವ ವಿಜಯನಗರ ಪ್ರದೇಶದಲ್ಲಿ ಅಂತ್ಯಗೊಳ್ಳಲಿದೆ. 2024-25ರಲ್ಲಿ ಯೋಜನೆ ಜಾರಿಗೆ ಅಗತ್ಯವಾದ ಎಲ್ಲಾ ಆದೇಶಗಳು ಜಾರಿಯಾಗಿ, 2026-27ರ ವೇಳೆಗೆ ಪೂರ್ಣಗೊಳಿಸುವ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರ ಇದೆ.
ಪಿಒಕೆ, ಅಕ್ಸಾಯ್‌ಚಿನ್ ಭಾರತದ್ದೆಂದು ಚಿತ್ರಿಸಿದ ರಷ್ಯಾ, ಭೂಪಟ ಬಿಡುಗಡೆ