ಎರಡು ಗುಂಡು ಬಿದ್ದರೂ, ಟೆರರಿಸ್ಟ್ ವಿರುದ್ಧ ಹೋರಾಡಿದ ಸೇನಾ ನಾಯಿ 'ಜೂಮ್'!
ಭಾನುವಾರ ತಡರಾತ್ರಿ ದಕ್ಷಿಣ ಕಾಶ್ಮೀರ ಜಿಲ್ಲೆಯ ತಂಗ್ಪಾವಾ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ಶ್ರೀನಗರ (ಅ.11): ಭಯೋತ್ಪಾದಕರ ಶೋಧ ಕಾರ್ಯಾಚರಣೆಯ ವೇಳೆ ಸೋಮವಾರ ಸೇನಾ ನಾಯಿ ತೀವ್ರವಾಗಿ ಗಾಯಗೊಂಡಿದೆ. ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವಿನ ಮುಖಾಮುಖಿಯ ವೇಳೆ ಆರ್ಮಿ ಅಸಾಲ್ಟ್ ಡಾಗ್ ತೀವ್ರವಾಗಿ ಗಾಯಗೊಂಡಿದ್ದು, ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ತಡರಾತ್ರಿಯ ವೇಳೆ ಭದ್ರತಾ ಪಡೆಗಳು, ಭಯೋತ್ಪಾದಕರು ಇರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿಯ ಆಧಾರದ ಮೇರೆಗೆ ದಕ್ಷಿಣ ಕಾಶ್ಮೀರ ಜಿಲ್ಲೆಯ ತಂಗ್ಪಾವಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಅಸಾಲ್ಟ್ ಡಾಗ್‌ಅನ್ನು ತಮ್ಮೊಂದಿಗೆ ಸೇನಾಪಡೆಗಳು ಕರೆದುಕೊಂಡು ಹೋಗಿದ್ದವು. ಭಾನುವಾರ ತಡರಾತ್ರಿಯಿಂದಲೂ ಕಾರ್ಯಾಚರಣೆ ಆರಂಭಿಸಿದ್ದರೂ, ಭಯೋತ್ಪಾದಕರನ್ನು ಮಟ್ಟಹಾಕಲು ಸಾಧ್ಯವಾಗಿರಲಿಲ್ಲ. ಸೋಮವಾರ ಬೆಳಗಿನ ವೇಳೆ ಸೇನಾಪಡೆ ತಮ್ಮ ಅಸಾಲ್ಟ್ ಡಾಗ್ ಜೂಮ್‌ಅನ್ನು ಭಯೋತ್ಪಾದಕರ ಮನೆಯ ಒಳಗೆ ಕಳಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂಮ್ ಅತೀ ಉತ್ತಮವಾಗಿ ತರಬೇತಿ ಪಡೆದ, ಎದುರಾಳಿಯ ಮೇಲೆ ಉಗ್ರವಾಗಿ ದಾಳಿ ಮಾಡುವ, ಅತ್ಯಂತ ಮೊನಚಾದ ಹಲ್ಲುಗಳನ್ನು ಹೊಂದಿರುವ ಶ್ವಾನ. ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ಅವರನ್ನು ಸದೆಬಡಿಯಲು ಇದಕ್ಕೆ ಸೂಕ್ತ ತರಬೇತಿ ನೀಡಲಾಗಿದೆ' ಎಂದಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ (South Kashmir) ಜೂಮ್ ಅನೇಕ ಸಕ್ರಿಯ ಕಾರ್ಯಾಚರಣೆಗಳ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ. ಅದರಂತೆ ಸೋಮವಾರ ಕೂಡ ಜೂಮ್‌ಗೆ ಭಯೋತ್ಪಾದಕರು ಅಡಗಿರುವ ಮನೆಯಿಂದ ಅವರನ್ನು ಹೊರತರುವ ಕಾರ್ಯವನ್ನು ನೀಡಲಾಗಿತ್ತು ಎಂದು ಸೇನಾಧಿಕಾರಿ ತಿಳಿಸಿದ್ದಾರೆ. ಆದರೆ, ಈ ಕಾರ್ಯಾಚರಣೆಯ ವೇಳೆ ಶ್ವಾನಕ್ಕೆ ಎರಡು ಗುಂಡುಗಳು ತಗುಲಿದ್ದು, ತೀವ್ರವಾಗಿ ಗಾಯಗೊಂಡಿದೆ ಎಂದು ತಿಳಿಸಿದ್ದಾರೆ.
"ಜೂಮ್ ಭಯೋತ್ಪಾದಕರನ್ನು ಗುರುತಿಸಿ ದಾಳಿ ಮಾಡಿತು, ಈ ಸಮಯದಲ್ಲಿ ಶ್ವಾನಕ್ಕೆ ಎರಡು ಗುಂಡೇಟು ತಾಕಿದೆ" ಎಂದು ಅವರು ಹೇಳಿದರು. ತನಗೆ ಗುಂಡುಬಿದ್ದರೂ, ಜೂಮ್ ಹೋರಾಟ ನಡೆಸುವ ಮೂಲಕ ತನ್ನ ಜವಾಬ್ದಾರಿ ನಿರ್ವಹಿಸಿತು. ಇದು ಇಬ್ಬರು ಭಯೋತ್ಪಾದಕರ ಹತ್ಯೆಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನೆಗೆ ‘ಪ್ರಚಂಡ’ ಶಕ್ತಿ: ಭಾರತದ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರಗಳ ರಾಶಿ!
"ತೀವ್ರವಾದ ಗಾಯಗಳ ನಡುವೆಯೂ, ಜೂಮ್ ಸೈನಿಕನಂತೆ ತನ್ನ ಕಾರ್ಯವನ್ನು ಮುಂದುವರೆಸಿದ, ಇದರ ಪರಿಣಾಮವಾಗಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು; ಎಂದು ಅವರು ಹೇಳಿದರು. ಜೂಮ್ ಅನ್ನು ಇಲ್ಲಿನ ಸೇನೆಯ ಪಶು ಆಸ್ಪತ್ರೆಗೆ (Army Vet Hosp Srinaga) ರವಾನಿಸಲಾಗಿದ್ದು, ಸದ್ಯ ಶ್ವಾನಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ( Lashkar-e-Taiba terrorists) ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಅನೇಕ ಸೈನಿಕರು ಗಾಯಗೊಂಡಿದ್ದಾರೆ.
Chief of Defence Staff: ಅನಿಲ್ ಚೌಹಾಣ್ ದೇಶದ ನೂತನ ಸಿಡಿಎಸ್!
ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ (Indian Army Chinar Corps), ಟ್ವಿಟರ್‌ನಲ್ಲಿ ಜೂಮ್‌ನ (Zoom) ಚಿತ್ರವನ್ನು ಹಂಚಿಕೊಂಡು ಶೀಘ್ರ ಚೇತರಿಕೆಗೆ ಹಾರೈಸಿದೆ. "ಭಯೋತ್ಪಾದಕರ ಜೊತೆಗಿನ ಹೋರಾಟದಲ್ಲಿ ಸೇನಾ ನಾಯಿ ತೀವ್ರವಾಗಿ ಗಾಯಗೊಂಡಿದೆ. ಅದನ್ನು ಶ್ರೀನಗರದ ಪಶು ಆಸ್ಪತ್ರೆಗೆ ದಾಖಲಿಸಲಾಗಿದೆ. ಶೀಘ್ರ ಚೇತರಿಕೆಗೆ ಹಾರೈಸುತ್ತೇವೆ' ಎಂದು ಬರೆದುಕೊಂಡಿದೆ. ಇದರ ಬೆನ್ನಲ್ಲಿಯೇ ಶ್ವಾನದ ಶೀಘ್ರ ಚೇತರಿಕೆಗೆ ಸಾಕಷ್ಟು ಹಾರೈಕೆಗಳು ಬಂದವು. ಆ ಬಳಿಕ ಸ್ವತಃ ಚಿನಾರ್ ಕಾರ್ಪ್ಸ್, ಜೂಮ್‌ಅನ್ನು ಪರಿಚಯಿಸುವ ವಿಡಿಯೋವನ್ನು ಕೂಡ ಪೋಸ್ಟ್ ಮಾಡಿತು. ಶ್ವಾನದ ತರಬೇತಿ ಹೇಗಿತ್ತು. ಅದರ ಕೌಶಲಗಳೇನು ಎನ್ನುವ ಬಗ್ಗೆ ಇದರಲ್ಲಿ ಮಾಹಿತಿಯನ್ನು ನೀಡಿದೆ.