ನವದೆಹಲಿ[ಡಿ.26]: ಉಗ್ರರ ಅಡಗುತಾಣಗಳನ್ನು ಭೇದಿಸಲು ಮತ್ತು ಉಗ್ರರ ವಿರುದ್ಧದ ಕಾರ್ಯಾಚರಣೆಗೆ ನಡೆಸುವ ಸೈನಿಕರು ಗುಂಡು ನಿರೋಧಕ ಜಾಕೆಟ್‌ ಧರಿಸುವಂತೆ ಇದೀಗ ಸೇನೆಯಲ್ಲಿ ಕಾರ್ಯಾಚರಣೆಗೆ ಬಳಸಲಾಗುವ ಶ್ವಾನಗಳಿಗೂ ಬುಲೆಟ್‌ ಪ್ರೂಫ್‌ ಜಾಕೆಟ್‌ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ಇಂಥ ನಾಯಿಗಳ ಮೇಲೆ ಆಡಿಯೋ ವಿಡಿಯೋ ಕಣ್ಗಾಗಲು ಯಂತ್ರ ಇಟ್ಟು ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಶ್ವಾನ ಪಡೆಯ ಕಮಾಂಡಿಂಗ್‌ ಅಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌ ಹಾಗೂ ಪಶು ವೈದ್ಯ ವಿ. ಕಮಲ್‌ರಾಜ್‌ ಎನ್ನುವವರು ಈ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರದ ಸಹಾಯದಿಂದ ನೈಜ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಸೇನಾ ಕಾರ್ಯಾಚರಣೆಯ ವೇಳೆ ಸೈನಿಕರಿಗೆ ಕಣ್ಣು ಮತ್ತು ಕಿವಿಯಾಗಿ ಈ ಯಂತ್ರ ಕಾರ್ಯನಿರ್ವಹಿಸುತ್ತದೆ ಎಂದು ಕಮಲ್‌ ರಾಜ್‌ ಹೇಳಿದ್ದಾರೆ.

ಒಂದು ವೇಳೆ ಉಗ್ರರು ಒಂದು ಕಟ್ಟಡದಲ್ಲಿ ಅಡಗಿಕೊಂಡಿದ್ದರೆ ಎಂದು ಗೊತ್ತಾದರೆ, ಕಾರ್ಯಾಚರಣೆಗೂ ಮುನ್ನ ಕಟ್ಟಡದ ಕುರಿತ ಮಾಹಿತಿ ಸಂಗ್ರಹಿಸಲು ಆಡಿಯೋ ವಿಡಿಯೋ ಕಣ್ಗಾಗಲು ಯಂತ್ರ ಅಳವಡಿಸಿದ ಶ್ವಾನವನ್ನು ಕಳುಹಿಸಿಕೊಡಲಾಗುತ್ತದೆ. ಈ ಯಂತ್ರ ಉಗ್ರರು ಯಾವ ಸ್ಥಳದಲ್ಲಿ ಅಡಗಿದ್ದಾರೆ. ಕಟ್ಟಡಕ್ಕೆ ಬಾಗಿಲು ಯಾವ ಕಡೆಗಿದೆ ಎಂಬ ಮಾಹಿತಿಯನ್ನು 1 ಕಿ.ಮೀ. ದೂರದಿಂದ ರವಾನಿಸುತ್ತದೆ.

ಉಗ್ರರ ಗುಂಡಿಗೆ ಶ್ವಾನಗಳು ಬಲಿ ಆಗುವುದನ್ನು ತಪ್ಪಿಸಲು ಅವುಗಳಿಗೆ ಬುಲೆಟ್‌ ಪ್ರೂಫ್‌ ಜಾಕೆಟ್‌ ಅಳವಡಿಸಲಾಗುತ್ತದೆ. ಅಲ್ಲದೇ ಈ ಶ್ವಾನಗಳು ಉಗ್ರರ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನೂ ಹೊಂದಿರುತ್ತವೆ. ಈಗಾಗಲೇ ಜಮ್ಮು- ಕಾಶ್ಮೀರದಲ್ಲಿ ಆಡಿಯೋ ವಿಡಿಯೋ ಯಂತ್ರ ಅಳವಡಿಸಿದ ಶ್ವಾನಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.