ಹೈದರಾಬಾದ್‌ನಲ್ಲಿ ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ ಸಲಾಡ್‌ನಲ್ಲಿ ಜೀವಂತ ಬಸವನ ಹುಳು ಪತ್ತೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಹಾರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು.
ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಬೆಂಗಳೂರಿನ ಫ್ರೆಶ್‌ಮೆನು ಸಂಸ್ಥೆಯಿಂದ ಜೊಮ್ಯಾಟೋ ಮೂಲಕ ಆರ್ಡರ್ ಮಾಡಿದ ತಾಜಾ ತರಕಾರಿಗಳ ಸಲಾಡ್‌ನಲ್ಲಿ ಜೀವಂತ ಬಸವನಹುಳು ಪತ್ತೆಯಾಗಿತ್ತು. ಇದೀಗ ಹೈದರಾಬಾದ್‌ನಲ್ಲಿ ಆರ್ಡರ್ ಮಾಡಿದ ಸ್ವಿಗ್ಗಿ ಫುಡ್‌ನಲ್ಲಿಯೂ ಜೀವಂತ ಬಸವನ ಹುಳು ಪತ್ತೆಯಾಗಿದ್ದು, ಯುವತಿ ಬೆಚ್ಚಿ ಬಿದ್ದಿದ್ದಾಳೆ.
ಹೌದು, ಆಹಾರದಲ್ಲಿ ವಿಚಿತ್ರ ವಸ್ತುಗಳು ಅಥವಾ ಜೀವಿಗಳು ಸಿಕ್ಕಿರುವ ಘಟನೆಗಳು ಸಾಮಾನ್ಯವಾಗಿದೆ. ಹೈದರಾಬಾದ್‌ನ ಯುವತಿಯೊಬ್ಬಳು ಆರ್ಡರ್ ಮಾಡಿದ ಆಹಾರದಲ್ಲಿ ಜೀವಂತ ಬಸವನ ಹುಳುವನ್ನು ಕಂಡು ಬೆಚ್ಚಿಬಿದ್ದಿದ್ದಾಳೆ. ಕ್ವಿನೋವಾ ಆವಕಾಡೊ ಸಲಾಡ್‌ನಲ್ಲಿ ಜೀವಂತ ಬಸವನ ಹುಳು ಪತ್ತೆಯಾಗಿದೆ. ಸ್ವಿಗ್ಗಿ ಆ್ಯಪ್ ಮೂಲಕ ಆರ್ಡರ್ ಮಾಡಿದ್ದ ಈ ಸಲಾಡ್‌ನಲ್ಲಿ ಬಸವನ ಹುಳು ಸಿಕ್ಕಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಷೋಯು ಎಂದು ಬರೆದ ಪ್ಯಾಕೆಟ್, ಬಿಲ್‌ನ ಚಿತ್ರ ಮತ್ತು ಸಲಾಡ್‌ನಲ್ಲಿರುವ ಬಸವನ ಹುಳುವನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಹಾರ ತಪಾಸಣಾ ತಂಡಕ್ಕೆ ತಿಳಿಸಬೇಕೆಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ನಕಲಿ ವಿಡಿಯೋ ಎಂದು ಶಂಕಿಸಿದ್ದಾರೆ. ಇನ್ನು ಸುಖಾ ಸುಮ್ಮನೆ ಯಾರೇ ಆಗಲಿ ಆಹಾರದಲ್ಲಿ ಹುಳು ಬಂದಿದೆ ಎಂದು ಹೇಳುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕಡಿಮೆ ಕ್ಯಾಲೋರಿಯ ಹಾಗೂ ತಾಜಾ ಆಗಿರುವ ತರಕಾರಿಗಳು, ಹಣ್ಣುಗಳ ಸಲಾಡ್ ಅನ್ನು ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಈ ಆಹಾರಗಳನ್ನು ನೀಡುವ ಹೋಟೆಲ್‌ಗಳು, ಹಾಗೂ ಫುಡ್ ಕಂಪನಿಗಳು ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡದೇ ಬೇಕಾಬಿಟ್ಟಿಯಾಗಿ ಸಂಸ್ಕರಿಸಿದ ಆಹಾರವನ್ನು ನೀಡಿ ಹೀಗೆ ಪೇಚಿಗೆ ಸಿಲುಕುವಂತೆ ಮಾಡುತ್ತಿವೆ.
ಇದನ್ನೂ ಓದಿ: ಜೊಮ್ಯಾಟೋದಲ್ಲಿ ಆರ್ಡರ್ ಮಾಡಿದ ಫ್ರೆಶ್‌ಮೆನು ಸಲಾಡ್‌ನಲ್ಲಿ ಜೀವಂತ ಬಸವನಹುಳು ಪತ್ತೆ!
ಬೆಂಗಳೂರಿನಲ್ಲಿಯೂ ಜೀವಂತ ಬಸವನಹುಳು ಪತ್ತೆ: ಕಳೆದ ವಾರವಷ್ಟೇ ಜಿಮ್‌ನಲ್ಲಿ ವರ್ಕೌಟ್ ಮಾಡುವ ವ್ಯಕ್ತಿಯೊಬ್ಬರು ಕೊಲೆಸ್ಟ್ರಾಲ್ ಫ್ರೀ ಆಗಿರುವ ಹೈ ಪ್ರೊಟೀನ್ ಫುಡ್ ತರಕಾರಿ ಸಲಾಡ್ ಅನ್ನು ಫ್ರೆಶ್‌ಮೆನುನಿಂದ ಜೊಮ್ಯಾಟೋ ಮೂಲಕ ಆರ್ಡರ್ ಮಾಡಿದ್ದರು. ಆದರೆ, ಜೊಮ್ಯಾಟೋ ಡೆಲಿವರಿ ಬಾಯ್ ಕೊಟ್ಟು ಹೋದ ತರಕಾರಿ ಸಲಾಡ್‌ನ ಬಾಕ್ಸಿನೊಳಗೆ ಸಣ್ಣದಾದ ಜೀವಂತ ಬಸವನ ಹುಳು ಓಡಾಡುತ್ತಿರುವುದು ಪತ್ತೆಯಾಗಿದೆ. ಇದನ್ನು ನೋಡಿದ ವ್ಯಕ್ತಿ ವೀಡಿಯೋ ಹಾಗೂ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಂತರ, ಫ್ರೆಶ್‌ಮೆನು ಸಂಸ್ಥೆಯಿಂದ ಆಹಾರ ಬುಕಿಂಗ್ ಮಾಡಿದ ವ್ಯಕ್ತಿಗೆ ಬೇಷರತ್ ಕ್ಷಮೆ ಕೇಳಿದ್ದು, ಇನ್ನುಮುಂದೆ ಸಂಸ್ಕರಣೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.
