* ಆ್ಯಪಲ್‌ನ ಶೇ.56 ಸಿಬ್ಬಂದಿ ರಾಜೀನಾಮೆ ಬಗ್ಗೆ ಒಲವು ಸಾಧ್ಯತೆ* ಕಚೇರಿಗೆ ಬರುವಂತೆ ಪ್ರೇರೇಪಿಸಲು ಗೂಗಲ್‌ನಿಂದ ಇ-ಸ್ಕೂಟರ್‌* ವಾರಕ್ಕೆ 3 ದಿನ ಕಚೇರಿಗೆ ಬನ್ನಿ ಎಂದಿದ್ದಕ್ಕೆ ಟೆಕ್ಕಿಗಳೆಲ್ಲಾ ಗರಂ

ನವದೆಹಲಿ(ಮೇ.05): ಕೋವಿಡ್‌ ಸೋಂಕು ಇಳಿಕೆಯಾಗುತ್ತಿದ್ದಂತೆ ಜಗತ್ತು ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಐಟಿ ಕಂಪನಿಗಳಾದ ಆ್ಯಪಲ್‌, ಗೂಗಲ್‌ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದ ತಮ್ಮ ಉದ್ಯೋಗಿಗಳಿಗೆ ಮತ್ತೆ ಆಫೀಸಿಗೆ ಮರಳಲು ಸೂಚನೆ ನೀಡಿವೆ. ಆದರೆ ಕಳೆದ 2 ವರ್ಷಗಳಿಂದಲೂ ವರ್ಕ್ ಫ್ರಂ ಹೋಮ್‌ನಲ್ಲಿದ್ದ ಉದ್ಯೋಗಿಗಳು ಈ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆ್ಯಪಲ್‌ ಸಿಇಒ ಟಿಮ್‌ ಕುಕ್‌ ಅವರು ಮೇ 23ರಿಂದ ತಮ್ಮ ಉದ್ಯೋಗಿಗಳಿಗೆ ಕನಿಷ್ಠ ವಾರಕ್ಕೆ ಮೂರು ದಿನಗಳ ಕಾಲ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇದಕ್ಕೆ ಶೇ.76 ಉದ್ಯೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಶೇ.56 ರಷ್ಟುಸಿಬ್ಬಂದಿ ಉದ್ಯೋಗಕ್ಕೆ ರಾಜೀನಾಮೆ ನೀಡಲು ಬಯಸಿದ್ದಾರೆ ಎಂಬುದು ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಗೂಗಲ್‌ ಕೂಡಾ ಅಮೆರಿಕದ ಕಚೇರಿಯಲ್ಲಿರುವ ಉದ್ಯೋಗಿಗಳಿಗೆ ಮರಳಿ ಕಚೇರಿಗೆ ಹಾಜರಾಗುಮಂತೆ ಪ್ರೇರೇಪಿಸಲು ಸುಮಾರು 75,000 ರು. ಬೆಲೆ ಬಾಳುವ ಇ-ಸ್ಕೂಟರ್‌ ಒದಗಿಸಲು ಮುಂದಾಗಿದೆ ಎನ್ನಲಾಗಿದೆ.

ವರ್ಕ್ ಫ್ರಂ ಹೋಂ ಮುಂದುವರಿಕೆ: ಐಟಿ ಕಂಪನಿಗಳ ಚಿಂತನೆ

ಕೊರೋನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವರ್ಕ್ ಫ್ರಂ ಹೋಂ ವಿಸ್ತರಿಸಬೇಕೇ ಅಥವಾ ಕಚೇರಿಯಿಂದ ಕೆಲಸ ಆರಂಭಿಸಬಹುದೇ ಎಂಬ ಬಗ್ಗೆ ಇನ್ನೂ ಕೆಲವು ದಿನಗಳ ಕಾಲ ಕಾದು ನೋಡಲು ಪ್ರಸಿದ್ಧ ಮಾಹಿತಿ ತಂತ್ರಜ್ಞಾನ ಕಂಪನಿಗಳು ನಿರ್ಧರಿಸಿವೆ.

ಸೋಂಕು ಇಳಿಕೆಯಾದ ಕಾರಣ ಇಸ್ಫೋಸಿಸ್‌, ಟಿಸಿಎಸ್‌, ನೆಸ್ಟೆ$್ಲೕ ಮತ್ತು ಝೋಮ್ಯಾಟೋ ಮತ್ತಿತರ ಕಂಪನಿಗಳು ವರ್ಕ್ ಫ್ರಂ ಹೋಂ ಸ್ಥಗಿತಗೊಳಿಸಲು ನಿರ್ಧರಿಸಿದ್ದವು. ಆದರೆ ಸದ್ಯ ದೇಶಾದ್ಯಂತ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿರುವ ಕಾರಣ ನಿರ್ಧಾರವನ್ನು ಪುರನ್‌ ಪರಿಶೀಲನೆಗೆ ಒಳಪಡಿಸಿವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಸರ್ಕಾರದ ನಿರ್ದೇಶನಕ್ಕಾಗಿ ನಿರೀಕ್ಷಿಸುತ್ತಿವೆ ಎನ್ನಲಾಗಿದೆ.

ಕೆಲ ಕಂಪನಿಗಳು ಇನ್ನೂ ಕೆಲವು ವಾರಗಳ ಕಾಲ ವರ್ಕ್ ಫ್ರಂ ಹೋಂ ಮುಂದುವರೆಸುವ ಸಾಧ್ಯತೆ ಇದೆ ಎಂದು ಸಿಬ್ಬಂದಿಗೆ ಮಾಹಿತಿ ನೀಡಿವೆ. ನೆಸ್ಟೆ$್ಲೕ ಕಂಪನಿ ಈಗಾಗಲೇ ಹೈಬ್ರಿಡ್‌ ಮಾದರಿ ಕೆಲಸವನ್ನು ಅಳವಡಿಸಿಕೊಂಡಿದ್ದು, ತೀರಾ ಅಗತ್ಯವಿದ್ದಲ್ಲಿ ಮಾತ್ರ ಕಚೇರಿಗೆ ಬರಬಹುದು ಎಂದು ಉದ್ಯೋಗಿಗಳಿಗೆ ತಿಳಿಸಿದೆ.