ಮುಂಬೈ(ಜ. 28)  ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಾಮಿಗೆ ಪದ್ಮಶ್ರೀ ಪುರಸ್ಕಾರ ದೊರೆತ ನಂತರ ಒಂದಿಷ್ಟು ವಿವಾದ ಹುಟ್ಟಿಕೊಂಡಿದೆ. ಅದ್ನಾನ್ ಸಾಮಿ ಅವರನ್ನು ಪದ್ಮಶ್ರೀಗೆ ಆಯ್ಕೆ ಮಾಡಿರುವುದು ದೇಶದ ಪ್ರಜೆಗಳಿಗೆ ಮಾಡಿರುವ ಅವಮಾನ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲ್ಲಿಕ್ ಹೇಳಿದ್ದಾರೆ.

ಇದೊಂದು ಡ್ಯಾಮೇಜ್ ಕಂಟ್ರೋಲ್ ತಂತ್ರ. 130 ಕೋಟಿ ಭಾರತೀಯರಿಗೆ ಕೇಂದ್ರದ ಎನ್ ಡಿಎ ಸರ್ಕಾರ ಅಪಮಾನ ಮಾಡಿದೆ. ಎನ್ ಆರ್ ಸಿ, ಸಿಎಎ, ಎನ್ ಪಿ ಆರ್ ಕುರಿತು ಜನರು ಕೇಳುತ್ತಿರುವ ಪ್ರಶ್ನೆಗಳಿಂದ ಬಚಾವ್ ಆಗಲು ಕೇಂದ್ರ ಸರ್ಕಾರ ಇಂಥ ಕೆಲಸ ಮಾಡಿದೆ ಎಂದು ಆರೋಪಿಸಿದ್ದಾರೆ.

ಟೀಕಿಸಿದವರಿಗೆ ಸಾಮಿ ಕೊಟ್ಟ ಖಡಕ್ ಉತ್ತರ

ಲಂಡನ್ ನಲ್ಲಿ ಜನ್ಮ ತಾಳಿದ ಸಾಮಿ 2015ರಲ್ಲಿ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿ 2016ರಲ್ಲಿ ಪೌರತ್ವ ಪಡೆದುಕೊಂಡಿದ್ದರು.  ಇದೀಗ ಮಹಾರಾಷ್ಟ್ರದವರಾಗಿರುವ ಗಾಯಕನಿಗೆ 118 ಜನರ ಪಟ್ಟಿಯಲ್ಲಿ ಪದ್ಮಶ್ರೀ ಪುರಸ್ಕಾರ ಸಂದಿತ್ತು.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಟೀಕಿಸಿರುವ ಮಲ್ಲಿಕ್, ಪಾಕಿಸ್ತಾನದ ಮೂಲದ ಯಾವೊಬ್ಬ ವ್ಯಕ್ತಿ ಜೈ ಮೋದಿ ಎಂದು ಕೂಗಿದರೆ ಅವನಿಗೆ ಭಾರತದ ಪೌರತ್ವದ ಜತೆಗೆ ಪದ್ಮಶ್ರೀ ಪುರಸ್ಕಾರ ದೊರೆಯುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಭಾರತದಲ್ಲಿನ ಅದೆಷ್ಟೋ ಮುಸ್ಲಿಮರಿಗೆ ಪದ್ಮಶ್ರೀ ಪುರಸ್ಕಾರ ಪಡೆಯವ ಅರ್ಹತೆ  ಇದೆ.  ಆದರೆ ಅವರನ್ನೆಲ್ಲ ಬಿಟ್ಟು ಸಾಮಿ ಅವರಿಗೆ ನೀಡಲಾಗಿದೆ ಎಂದಿದ್ದಾರೆ.