* ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಹಾಗೂ ಮನಸುಖ್‌ ಹಿರೇನ್ ಕೊಲೆ ಕೇಸ್* ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅರೆಸ್ಟ್!* ಪ್ರಕರಣ ಸಂಬಂಧ ‘ಎನ್‌ಕೌಂಟರ್ ಸ್ಪೆಷಲಿಸ್ಟ್‌‘ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಮನೆ ಮೇಲೆ ದಾಳಿ ನಡೆಸಿದ್ದ NIA* ಅಂಧೇರಿ ಉಪನಗರದ ಪಶ್ಚಿಮ ಭಾಗದ ಜೆ.ಬಿ.ನಗರದಲ್ಲಿರುವ ಮನೆ ಮೇಲೆ ದಾಳಿ

ಮುಂಬೈ(ಜೂ.17): ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಪತ್ತೆಯಾದ ಪ್ರಕರಣ ಹಾಗೂ ಇದೇ ಪ್ರಕರಣಕ್ಕೆ ಸಂಬಂಧಿಸಿದ ಮನ್‌ಸುಖ್ ಹಿರೇನ್ ಕೊಲೆ ಕೇಸ್‌ನ ತನಿಖೆ ನಡೆಸುತ್ತಿರುವ ಎನ್‌ಐಎ, ಮಾಜಿ ACP, ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾರನ್ನು ಬಂಧಿಸಿದೆ. ಜೊತೆಗೆ ಸಾಕ್ಷಿ ಕಲೆ ಹಾಕಲು ಅವರ ಮನೆ ಮೇಲೆ ದಾಳಿ ನಡೆಸಿದೆ.

ಸಚಿನ್ ಹಾಗೂ ವಿನಾಯಕ್ ಜೊತೆ ಆಪ್ತ ಸಂಬಂಧ

ಆಂಟಿಲಿಯಾ ಪ್ರಕರಣದ ಆರೋಪಿ ಮಾಜಿ API ಸಚಿನ್ ವಾಝೆ 2007ರಲ್ಲಿ ಸಸ್ಪೆಂಡ್ ಆದ ಬಳಿಕ, ಪ್ರದೀಪ್ ಶರ್ಮಾರವರೇ ಅವರನ್ನು ಶಿವಸೇನೆಗೆ ಸೇರಿಸಿದ್ದರೆನ್ನಲಾಗಿದೆ. ಅಲ್ಲದೇ ಮಾಜಿ ಕಾನ್ಸ್ಟೇಬಲ್ ವಿನಾಯಕ್ ಶಿಂಧೆ ಹತ್ತು ವರ್ಷ ಪ್ರದೀಪ್ ಶರ್ಮಾರವರ ಎನ್ಕೌಂಟರ್ ತಂಡದಲ್ಲಿದ್ದರೆನ್ನಲಾಗಿದೆ.

Antilia ಕೇಸ್: ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಮೇಲೆ NIA ದಾಳಿ!

ಶಿವಸೇನೆ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ

ಇಂದು ಗುರುವಾರ ಬೆಳಗ್ಗೆ ಸುಮಾರು ಆರು ಗಂಟೆಗೆ ಅಂಧೇರಿ ಉಪನಗರದ ಪಶ್ಚಿಮ ಭಾಗದ ಜೆ.ಬಿ.ನಗರದಲ್ಲಿರುವ ಶರ್ಮಾ ಅವರ ಮನೆ ಮೇಲೆ ಶಸ್ತ್ರ ಸಿಆರ್‌ಪಿಎಫ್‌ ತಂಡದೊಂದಿಗೆ ಎನ್‌ಐಎ ತಂಡ ದಾಳಿ ನಡೆಸಿದೆ. ಈ ವೇಳೆ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ವಶಕ್ಕೆ ಪಡೆದಿದ್ದಾರೆನ್ನಲಾಗಿದೆ. ಪ್ರದೀಪ್ ಶರ್ಮಾ ತೊಂಭತ್ತರ ದಶಕದಲ್ಲಿ ಮುಂಬೈನ ಕ್ರೈಂ ಬ್ರಾಂಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಇವರು ಶಿವಸೇನೆ ಟಿಕೆಟ್ ಪಡೆದು ಚುನಾವಣಾ ಕಣಕ್ಕಿಳಿದಿದ್ದರು.

ಪ್ರಕರಣದ ಹಿನ್ನೆಲೆ

ಉದ್ಯಮಿ ಮುಕೇಶ್ ಅಂಬಾನಿಯವರ ನಿವಾಸದ ಬಳಿ ಪತ್ತೆಯಾದ ಸ್ಕಾರ್ಪಿಯೋ ಕಾರಿಬನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿತ್ತು. ಫೆಬ್ರವರಿ 25 ರಂದು ದಕ್ಷಿಣ ಮುಂಬೈನ ಪೈಡರ್‌ ರೋಡ್‌ನಲ್ಲಿರುವ ಆಂಟಿಲಿಯಾದಿಂದ ಸುಮಾರು 300 ಮೀಟರ್ ದೂರಲ್ಲಿ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾಗಿತ್ತು. ಇದರಲ್ಲಿ ಬೆದರಿಕೆ ಹಾಕಿದ್ದ ಪತ್ರವೂ ಒಂದಿತ್ತು. ಆದರೆ ಮಾರ್ಚ್ 5 ರಂದು ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. ಪೊಲೀಸರು ಈ ಕಾರು ಮಾಲೀಕ ಹಿರೇನ್ ಮನ್‌ಸುಖ್‌ರನ್ನು ಪತ್ತೆ ಹಚ್ಚಿ ಆತನ ಬಳಿ ತಲುಪುವಷ್ಟರಲ್ಲಿ ಆತ ಕೊಲೆಯಾಗಿದ್ದ.