1984ರ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್‌ಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ನವದೆಹಲಿ (ಆ.4): 1984 ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ಪುಲ್ ಬಂಗಾಶ್ ಪ್ರದೇಶದಲ್ಲಿ ನಡೆದ ಹತ್ಯೆಗಳ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್‌ಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ಜಾಮೀನು ಮಂಜೂರು ಮಾಡುವ ವೇಳೆ ಟೈಟ್ಲರ್‌ಗೆ ಕೆಲವು ಷರತ್ತುಗಳನ್ನು ವಿಧಿಸಿದರು. ಸಾಕ್ಷ್ಯಾಧಾರಗಳನ್ನು ಹಾಳು ಮಾಡದಂತೆ ಅಥವಾ ಕೋರ್ಟ್ ಅನುಮತಿಯಿಲ್ಲದೆ ದೇಶವನ್ನು ತೊರೆಯದಂತೆ ಟೈಟ್ಲರ್‌ಗೆ ನ್ಯಾಯಾಲಯ ಸೂಚಿಸಿದೆ. ನ್ಯಾಯಾಲಯದ ನಿರೀಕ್ಷಣಾ ಜಾಮೀನಿನ ಕಾರಣದಿಂದಾಗಿ ಟೈಟ್ಲರ್ ಅವರನ್ನು ಬಂಧಿಸಲು ಸಾಧ್ಯವಿಲ್ಲ. 1 ಲಕ್ಷ ಜಾಮೀನು ಬಾಂಡ್ ಮೇಲೆ ಅವರಿಗೆ ಜಾಮೀನು ನೀಡಲಾಗಿದೆ. ಶನಿವಾರದಂದು ಅವರು ನ್ಯಾಯಾಲಯಕ್ಕೆ ಹಾಜರಾಗುವ ಮುನ್ನವೇ ಅವರಿಗೆ ಜಾಮೀನು ಮಂಜೂರಾಗಿದೆ, ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಚಾರ್ಜ್‌ಶೀಟ್ ಅನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡ ನಂತರ ಅವರಿಗೆ ಸಮನ್ಸ್ ನೀಡಲಾಗಿತ್ತು.
1984ರ ನವೆಂಬರ್ 1 ರಂದು, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದ ಒಂದು ದಿನದ ನಂತರ, ಮೂರು ಜನರನ್ನು ಕೊಂದು ಗುರುದ್ವಾರವನ್ನು ಸುಟ್ಟು ಹಾಕಲಾಗಿತ್ತು.
ಮೇ 20 ರಂದು ಸಲ್ಲಿಸಲಾದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ, ಟೈಟ್ಲರ್ 1984ರ ನವೆಂಬರ್ 1 ರಂದು ಪುಲ್ ಬಂಗಾಶ್ ಗುರುದ್ವಾರ, ಆಜಾದ್ ಮಾರ್ಕೆಟ್‌ನಲ್ಲಿ ಉದ್ರಿಕ್ತ ಗುಂಪನ್ನು ಪ್ರಚೋದಿಸಿದ್ದಲ್ಲದೆ, ಇದರ ಪರಿಣಾಮವಾಗಿ ಅವರು ಗುರುದ್ವಾರವನ್ನು ಸುಟ್ಟುಹಾಕಿದ್ದರು. ಮೂರು ಸಿಖ್ಖರಾದ ಠಾಕೂರ್ ಸಿಂಗ್, ಬಾದಲ್ ಸಿಂಗ್ ಮತ್ತು ಗುರು ಚರಣ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು. ಸಿಬಿಐ ಟೈಟ್ಲರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 147 (ಗಲಭೆ), 109 (ಪ್ರಚೋದನೆ), ಸೆಕ್ಷನ್ 302 (ಕೊಲೆ) ಯ ಅಡಿಯಲ್ಲಿ ಆರೋಪಗಳನ್ನು ಹೊರಿಸಿದೆ.
ಸಿಖ್ ವಿರೋಧಿ ದಂಗೆ: ಕಾಂಗ್ರೆಸ್ ನಾಯಕ ಟೈಟ್ಲರ್ ವಿರುದ್ಧ ಸಿಬಿಐ ಆರೋಪಪಟ್ಟಿ
ಆದರೆ, ತನ್ನ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಟೈಟ್ಲರ್ ಪದೇ ಪದೇ ವಾದ ಮಾಡಿದ್ದರು. ಏಪ್ರಿಲ್ 11 ರಂದು, ಪ್ರಕರಣದಲ್ಲಿ ಲಭ್ಯವಿರುವ ಆಡಿಯೋ ಸಾಕ್ಷ್ಯಗಳೊಂದಿಗೆ ಹೊಂದಿಸಲು ಸಿಬಿಐ ಟೈಟ್ಲರ್ ಅವರ ಧ್ವನಿ ಮಾದರಿಗಳನ್ನು ಸಂಗ್ರಹಿಸಿತ್ತು. ತನ್ನ ಧ್ವನಿ ಮಾದರಿಯನ್ನು ಸಿಬಿಐಗೆ ಸಲ್ಲಿಸಿದ ನಂತರ ಜಗದೀಶ್ ಟೈಟ್ಲರ್ ತನ್ನ ವಿರುದ್ಧ ಸಾಕ್ಷ್ಯಾಧಾರಗಳಿದ್ದರೆ ನೇಣುಗಂಬಕ್ಕೇರಲು ಬದ್ಧ ಎಂದು ಹೇಳಿದ್ದರು.
