ನವದೆಹಲಿ(ಮೇ.09): ಭಾರತೀಯ ಬ್ಯಾಂಕ್‌ಗಳಿಂದ ಕೋಟ್ಯಾಂತರ ರೂಪಾಯಿ ಸಾಲ ಪಡೆದು, ಅದನ್ನು ಪಾವತಿಸದೆ ವಿದೇಶಕ್ಕೆ ಪರಾರಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಈ ಪಟ್ಟಿಗೆ ಬಾಸ್ಮತಿ ಅಕ್ಕಿ ವ್ಯಾಪಾರ ನಡೆಸುವ ಕಂಪನಿ ರಾಮ್‌ದೇವ್ ಇಂಟರ್‌ ನ್ಯಾಷನಲ್ ಲಿಮಿಟೆಡ್‌ನ ಮಾಲೀಕನ ಹೆಸರೂ ಸೇರ್ಪಡೆಯಾಗಿದೆ. 

ದೆಹಲಿ ನಿವಾಸಿಯಾಗಿರುವ ಈ ಕಂಪನಿ ಒಡೆಯ ಎಸ್‌ಬಿಐ ಸೇರಿ ಇನ್ನಿತರ ಕೆಲ ಬ್ಯಾಂಕ್‌ಗಳಿಂದ ಸುಮಾರು 400 ಕೋಟಿ ಸಾಲ ಪಡೆದಿದ್ದರೆಂಬ ಆರೋಪ ಕೇಳಿ ಬಂದಿದೆ. ಹೀಗಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಇವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಆದರೀಗ ಅವರು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಸ್‌ಬಿಐ ನೀಡಿರುವ ದೂರಿನ ಮೇರೆಗೆ ಸಿಬಿಐ ಕಂಪನಿ ಮಾಲೀಕ ಹಾಗೂ ಅವರ ನಾಲ್ವರು ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಎಸ್‌ಬಿಐ ನಡೆಸಿದ ತನಿಖೆಯಲ್ಲಿ ಮಾಲೀಕ ಸುಮಾರು ಆರು ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದು, 2016ರಿಂದಲೇ ತಲೆಮರೆಸಿಕೊಂಡಿದ್ದಾರೆಂಬ ಅಂಶ ಬೆಳಕಿಗೆ ಬಂದಿದೆ.

ಚೋಕ್ಸಿ, ಮಲ್ಯ ಸೇರಿ 50 ಸುಸ್ತಿದಾರರ 68 ಸಾವಿರ ಕೋಟಿ ರೂ ಸಾಲ ‘ಮನ್ನಾ’!

2016ರಲ್ಲೇ ಈ ಕಂಪನಿಯನ್ನು ಎನ್‌ಪಿಎ ಎಂದು ಘೋಷಿಸಿತ್ತು. ಇದಾದ ನಾಲ್ಕು ವರ್ಷಗಳ ಬಳಿಕ ಫೆಬ್ರವರಿಯಲ್ಲಿ ಎಸ್‌ಬಿಐ ದೂರು ನಿಡಿತ್ತು. ಇದಾದ ಬಳಿಕ ಏಪ್ರಿಲ್ 28 ರಂದು ಸಿಬಿಐ FIR  ದಾಖಲಿಸಿದೆ.

ಸದ್ಯ ಲಭ್ಯವಾದ ಮಾಹಿತಿ ಅನ್ವಯ ರಾಮ್‌ದೇವ್ ಇಂಟರ್‌ ನ್ಯಾಷನಲ್ ಒಟ್ಟು 414 ಕೋಟಿ ರೂಪಾಯಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ಇದರಲ್ಲಿ 173.11 ಕೋಟಿ ಎಸ್‌ಬಿಐನಿಂದ ಪಡೆದಿದ್ದರೆ, 76.09 ಕೋಟಿ ಕೆನರಾ ಬ್ಯಾಂಕ್, 64.31 ಕೋಟಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, 51.31 ಕೋಟಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, 51.31 ಕೋಟಿ ಕೋ-ಆಪರೇಷನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ 51.31 ಕೋಟಿ ಐಡಿಬಿಐ ಬ್ಯಾಂಕ್‌ನಿಂದ ಎನ್ನಲಾಗಿದೆ.