Asianet Suvarna News Asianet Suvarna News

100 ಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ಧತೆ: ವಿಮಾನ, ಹಡಗು, ರೈಲಲ್ಲಿ ಘೋಷಣೆ!

* 100 ಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ಧತೆ

* ಗುರಿ ತಲುಪುತ್ತಿದ್ದಂತೆ ವಿಮಾನ, ಹಡಗು, ರೈಲಲ್ಲಿ ಘೋಷಿಸಲು ಕೇಂದ್ರ ಸರ್ಕಾರ ಸಜ್ಜು

* ಐತಿಹಾಸಿಕ ಸಾಧನೆ ನಿಮಿತ್ತ ದೇಶದ 100 ಸ್ಮಾರಕಗಳಲ್ಲಿ ದೀಪಾಲಂಕಾರಕ್ಕೆ ಸಕಲ ವ್ಯವಸ್ಥೆ

Announcement On Flights Trains In Centre Plan To Mark 100 Crore Doses pod
Author
Bangalore, First Published Oct 16, 2021, 7:45 AM IST
  • Facebook
  • Twitter
  • Whatsapp

 ನವದೆಹಲಿ(ಅ.16): ದೇಶದಲ್ಲಿ 100 ಕೋಟಿ ಕೋವಿಡ್‌ ಲಸಿಕೆ(Covid 19 Vaccine) ವಿತರಿಸಿದ ಸಂದರ್ಭವನ್ನು ಭರ್ಜರಿ ಸಂಭ್ರಮದೊಂದಿಗೆ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅ.18 ಅಥವಾ ಅ.19ರಂದು ಸೃಷ್ಟಿಯಾಗಲಿರುವ 100 ಕೋಟಿ ಲಸಿಕೆ(Vaccine) ವಿತರಣೆಯ ದಾಖಲೆಯ ಸುದ್ದಿಯನ್ನು ವಿಮಾನ, ಹಡಗು, ಮೆಟ್ರೋ ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ

ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಖಾತೆ ಸಚಿವ ಮನ್ಸುಖ್‌ ಮಾಂಡವೀಯ(Health Minister Mansukh Mandaviya), ಗುರುವಾರದವರೆಗೆ 97 ಕೋಟಿ ಡೋಸ್‌ ಲಸಿಕೆಯನ್ನು ವಿತರಿಸಲಾಗಿದೆ. ಇನ್ನು 3-4 ದಿನಗಳಲ್ಲಿ ದೇಶ 100 ಕೋಟಿ ಲಸಿಕೆ ವಿತರಣೆಯ ದಾಖಲೆ ಸ್ಥಾಪಿಸಲಿದೆ. ಆ ಸಂದರ್ಭದಲ್ಲಿ ‘ದೇಶವು 100 ಕೋಟಿ ಡೋಸ್‌ ಮೈಲುಗಲ್ಲನ್ನು ದಾಟಿದೆ’ ಎಂಬ ಸಂದೇಶವನ್ನು ರೈಲು, ವಿಮಾನ, ಹಡಗುಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಜೊತೆಗೆ ಖಾಸಗಿ ವಿಮಾನ ಸಂಸ್ಥೆ ‘ಸ್ಪೈಸ್‌ ಜೆಟ್‌’ನಲ್ಲಿ 100 ಕೋಟಿ ಡೋಸ್‌ ದಾಟಿದ ಪೋಸ್ಟರ್‌ಗಳನ್ನು ಅಳವಡಿಸಲಾಗುವುದು. ಅದರ ಮೇಲೆ ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಆರೋಗ್ಯ ಕಾರ್ಯಕರ್ತರ ಭಾವಚಿತ್ರವಿರಲಿದೆ ಎಂದು ತಿಳಿಸಿದ್ದಾರೆ.

ಜೊತೆಗೆ ಈಗಾಗಲೇ ಶೇ.73 ಅರ್ಹ ಮಂದಿ ಮೊದಲ ಡೋಸ್‌ ಹಾಗೂ ಶೇ.30ರಷ್ಟು ಜನರು ಎರಡೂ ಡೋಸ್‌ ಪಡೆದಿದ್ದಾರೆ. 100 ಕೋಟಿ ಡೋಸ್‌ ದಾಟಿದ ನಂತರ ಬಾಕಿ ಉಳಿದ ಜನರಿಗೆಲ್ಲ ಎರಡನೇ ಡೋಸ್‌ ನೀಡಿಕೆ ತೀವ್ರಗೊಳಿಸಲಾಗುವುದು ಎಂದು ಮಾಂಡವೀಯ ತಿಳಿಸಿದರು. ಇದೇ ವೇಳೆ ಅವರು 8 ರಾಜ್ಯಗಳ 13 ಕೋವಿಡ್‌ ವಾರಿಯರ್‌ಗಳ ಬಗ್ಗೆ ಸಿದ್ಧಪಡಿಸಲಾಗಿರುವ 13 ವಿಡಿಯೋ ಮತ್ತು ಕಾಫಿ ಟೇಬಲ್‌ ಬುಕ್‌ ಒಂದನ್ನು ಬಿಡುಗಡೆ ಮಾಡಿದರು.

ಈ ನಡುವೆ, ದೇಶದ ಆಯ್ದ 100 ಐತಿಹಾಸಿಕ ಸ್ಮಾರಕಗಳಲ್ಲಿ ವಿದ್ಯುತ್‌ ದೀಪ ಬೆಳಗುವ ಮೂಲಕ 100 ಕೋಟಿ ಲಸಿಕೆ ಸಂಭ್ರಮವನ್ನು ಹಂಚಿಕೊಳ್ಳಲೂ ಸರ್ಕಾರ ನಿರ್ಧರಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಹಂಪಿ, ಬದಾಮಿ, ಐಹೊಳೆ, ಪಟ್ಟದಕಲ್ಲು ಕೂಡ ಸೇರಿವೆ. ಹಂಪಿಯಲ್ಲಿ ಈಗಾಗಲೇ ವಿದ್ಯುತ್‌ ದೀಪಗಳನ್ನು ಅಳವಡಿಸಿದ್ದು, ಅದು ವೈಭವದಿಂದ ಕಂಗೊಳಿಸುತ್ತಿದೆ.

ಸಂಭ್ರಮ ಹೇಗೆ?

- 100 ಕೋಟಿ ಗುರಿ ದಾಟುತ್ತಿದ್ದಂತೆ ವಿಮಾನ, ಹಡಗು, ಮೆಟ್ರೋ, ರೈಲು ನಿಲ್ದಾಣಗಳಲ್ಲಿ ಘೋಷಣೆ

- ಖಾಸಗಿ ವಿಮಾನ ಸಂಸ್ಥೆ ಸ್ಪೈಸ್‌ ಜೆಟ್‌ ವಿಮಾನದ ಮೇಲೆ 100 ಕೋಟಿ ಡೋಸ್‌ ಪೋಸ್ಟರ್‌ ಬಿತ್ತರ

- ಹಂಪಿ, ಬದಾಮಿ, ಪಟ್ಟದಕಲ್ಲು, ಐಹೊಳೆ ಸೇರಿ 100 ಸ್ಮಾರಕಗಳಲ್ಲಿ ವಿಶೇಷ ವಿದ್ಯುತ್‌ ದೀಪಾಲಂಕಾರ

- 8 ರಾಜ್ಯಗಳ 13 ಕೋವಿಡ್‌ ವಾರಿಯರ್‌ಗಳ 13 ವಿಡಿಯೋ, ಕಾಫಿ ಟೇಬಲ್‌ ಬುಕ್‌ ಬಿಡುಗಡೆ

ರಾಜ್ಯಗಳಿಗೆ 100 ಕೋಟಿ ಲಸಿಕೆ ಪೂರೈಸಿದ ಕೇಂದ್ರ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100 ಕೋಟಿಗೂ ಅಧಿಕ ಲಸಿಕೆಯನ್ನು ಪೂರೈಕೆ ಮಾಡಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ. ‘ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ ಸದ್ಯ 10.53 ಕೋಟಿ ಲಸಿಕೆಗಳು ವಿತರಣೆಯಾಗದೇ ಬಾಕಿ ಉಳಿದಿವೆ. ರಾಜ್ಯಗಳ ಬಳಿ ಲಸಿಕೆಗಳು ಲಭ್ಯವಿರುವುದರಿಂದ ವಿತರಣೆ ಕುರಿತು ಉತ್ತಮ ಯೋಜನೆಗಳನ್ನು ರೂಪಿಸಲು ಅವುಗಳ ಬಳಿ ಹೆಚ್ಚಿನ ಸಮಯಾವಕಾಶ ಇರುತ್ತದೆ ಎಂದು ಸಚಿವಾಲಯ ಹೇಳಿದೆ.

Follow Us:
Download App:
  • android
  • ios