ಪಟ್ಟಣಂತಿಟ್ಟದಲ್ಲಿ ಪಟ್ಟಕ್ಕೆ ಆ್ಯಂಟನಿ v/s ಆ್ಯಂಟನಿ ಹಣಾಹಣಿ: ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್‌ ಸಾಹಸ

ಕ್ಷೇತ್ರದಲ್ಲಿ ಕ್ರಿಶ್ಚಿಯನ್‌ ಮತದಾರರು ಶೇ.40ರಷ್ಟಿರುವುದನ್ನು ಮನಗಂಡ ಬಿಜೆಪಿ ಈ ಬಾರಿ ಹಿರಿಯ ಕಾಂಗ್ರೆಸ್‌ ನಾಯಕ ಎ.ಕೆ. ಆ್ಯಂಟನಿ ಅವರ ಪುತ್ರ ಅನಿಲ್ ಅವರನ್ನು ಬುಟ್ಟಿಗೆ ಹಾಕಿಕೊಂಡು ತನ್ನ ಟಿಕೆಟ್‌ ನೀಡಿದೆ.

Anil vs Anto Keralas Pathanamthitta to witness battle of the Antony gvd

ಪಟ್ಟಣಂತಿಟ್ಟ (ಏ.05): ಹಿಂದೂಗಳ ಆರಾಧ್ಯದೈವ ಶಬರಿಮಲೆ ಅಯ್ಯಪ್ಪ ನೆಲೆಸಿರುವ ಪಟ್ಟಣಂತಿಟ್ಟ ಕ್ಷೇತ್ರದಲ್ಲಿ ಸಂಸದರ ಪಟ್ಟಕ್ಕೇರಲು ಆ್ಯಂಟನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹೌದು, ಕ್ಷೇತ್ರದಲ್ಲಿ ಕ್ರಿಶ್ಚಿಯನ್‌ ಮತದಾರರು ಶೇ.40ರಷ್ಟಿರುವುದನ್ನು ಮನಗಂಡ ಬಿಜೆಪಿ ಈ ಬಾರಿ ಹಿರಿಯ ಕಾಂಗ್ರೆಸ್‌ ನಾಯಕ ಎ.ಕೆ. ಆ್ಯಂಟನಿ ಅವರ ಪುತ್ರ ಅನಿಲ್ ಅವರನ್ನು ಬುಟ್ಟಿಗೆ ಹಾಕಿಕೊಂಡು ತನ್ನ ಟಿಕೆಟ್‌ ನೀಡಿದೆ. ಮತ್ತೊಂದೆಡೆ ಕಾಂಗ್ರೆಸ್‌ನಿಂದ ಆ್ಯಂಟೋ ಆ್ಯಂಟನಿ ಸತತ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಲ್ಲದೆ ಆಡಳಿತಾರೂಢ ಸಿಪಿಎಂ ಮಾಜಿ ಹಣಕಾಸು ಸಚಿವರಾದ ಥಾಮಸ್‌ ಐಸಾಕ್‌ ಅವರನ್ನು ಕಣಕ್ಕಿಳಿಸಿರುವುದು ಕಣವನ್ನು ಮತ್ತಷ್ಟು ರಂಗೇರಿಸಿದೆ.

ಹೇಗಿದೆ ವಾತಾವರಣ: ಕ್ರಿಶ್ಚಿಯನ್ನರು ಪ್ರಬಲವಾಗಿರುವ ಕ್ಷೇತ್ರದಲ್ಲಿ ಕಳೆದ ಬಾರಿ ಬೇರೆ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕೈ ಸುಟ್ಟುಕೊಂಡಿದ್ದ ಬಿಜೆಪಿ ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ. ಕಾಂಗ್ರೆಸ್‌ ನಾಯಕ ಎ.ಕೆ. ಆ್ಯಂಟನಿ ಪುತ್ರನನ್ನು ಪಕ್ಷಕ್ಕೆ ಬರಮಾಡಿಕೊಂಡು ಟಿಕೆಟ್‌ ನೀಡುವ ಮೂಲಕ ಈ ಚುನಾವಣೆಯನ್ನು ಕಾಂಗ್ರೆಸ್‌ v/s ಕಾಂಗ್ರೆಸ್‌ ಆಗಿ ಪರಿವರ್ತಿಸಿದೆ. ಅಲ್ಲದೆ ಪ್ರಬಲ ಕ್ರಿಶ್ಚಿಯನ್‌ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಮೊದಲ ದಿನದಿಂದಲೇ ಪ್ರಧಾನಿ ಮೋದಿ ಇಲ್ಲಿಗೆ ಪ್ರಚಾರಕ್ಕೆ ಬಂದಾಗ ಅವರನ್ನು ಓಲೈಸುವ ನಿಟ್ಟಿನಲ್ಲಿ ಕೇರಳದಲ್ಲಿ ಕ್ರಿಶ್ಚಿಯನ್‌ ಪಾದ್ರಿಗಳಿಗೂ ರಕ್ಷಣೆಯಿಲ್ಲ ಎಂದು ಅಬ್ಬರಿಸಿದ್ದರು. ಜೊತೆಗೆ ರೈತರನ್ನು ಸೆಳೆಯುವ ನಿಟ್ಟಿನಲ್ಲಿ ರಬ್ಬರ್‌ ರಫ್ತಿಗೆ ಬೆಂಬಲ ಬೆಲೆಯನ್ನು ಕೆಜಿಗೆ 5 ರು. ಹೆಚ್ಚಿಸಿದೆ. ಹಾಗೂ ಈ ಬಾರಿ ಶಬರಿಮಲೆಯಲ್ಲಿ ಅವ್ಯವಸ್ಥೆ ಆಗಿದ್ದರ ವಿರುದ್ಧ ಆಡಳಿತ ಪಕ್ಷದ ಮೇಲೆ ಹರಿಹಾಯ್ದು ಅಲ್ಪಸಂಖ್ಯಾತ ಹಿಂದೂ ಮತಗಳನ್ನು ಸೆಳೆಯುತ್ತಿದೆ. ಜೊತೆಗೆ ಕಾಂಗ್ರೆಸ್‌ ನಾಯಕರ ಪುತ್ರನೇ ಬಂದಿರುವುದು ಬಿಜೆಪಿಗೆ ಆನೆಬಲ ಬಂದಂತಾಗಿದ್ದು, ಈ ಬಾರಿ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಮೋದಿ ವರ್ಸಸ್‌ ಯಾರು ಎಂಬ ಪ್ರಶ್ನೆಯೇ ಅಪ್ರಸ್ತುತ: ಶಶಿ ತರೂರ್‌

ಥಾಮಸ್‌ ಐಸಾಕ್‌: ಆಡಳಿತಾರೂಢ ಪಕ್ಷದ ಶಾಸಕರು ಕ್ಷೇತ್ರದಲ್ಲಿರುವುದು ಥಾಮಸ್‌ ಬಲವನ್ನು ಹೆಚ್ಚಿಸಿದೆ. ಅಲ್ಲದೆ ಬಿಜೆಪಿ 5 ರು. ರಬ್ಬರ್‌ ಬೆಂಬಲ ಬೆಲೆ ಹೆಚ್ಚಿಸಿದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ 10 ರು. ಸಹಾಯಧನ ಏರಿಸಿ ಅವರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಒಟ್ಟಿನಲ್ಲಿ ಕಳೆದ ಬಾರಿ ಕೇವಲ 40 ಸಾವಿರ ಮತಗಳ ಅಂತರ ಮೊದಲ ಮೂರು ಅಭ್ಯರ್ಥಿಯ ನಡುವೆ ಇತ್ತು. ಅದರಲ್ಲಿ ಕಾಂಗ್ರೆಸ್‌ ವಿಜಯಿಯಾಗಿದ್ದರೆ ಸಿಪಿಎಂ ಎರಡನೇ ಮತ್ತು ಬಿಜೆಪಿ ಮೂರನೇ ಸ್ಥಾನ ಗಳಿಸಿತ್ತು. ಈ ಬಾರಿ ಬಿಜೆಪಿಗೆ ಕಾಂಗ್ರೆಸ್‌ ನಾಯಕನ ಪುತ್ರ ಮತ್ತು ಹಾಲಿ ಸಂಸದನ ಹೆಸರಿನ ವ್ಯಕ್ತಿಯನ್ನೇ ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಮತ ವಿಭಜನೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಇದರಿಂದ ಯಾರಿಗೆ ಲಾಭವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಏನಂತಾರೆ ಹ್ಯಾಟ್ರಿಕ್ ಸಂಸದ?: ಕ್ಷೇತ್ರವು 2009ರಲ್ಲಿ ರಚನೆಯಾದಂದಿನಿಂದಲೂ ಸಂಸದನಾಗಿರುವ ಕಾಂಗ್ರೆಸ್‌ ಪಕ್ಷದ ಆ್ಯಂಟೋ ಆ್ಯಂಟನಿ ಈ ಬಾರಿ ನಾಲ್ಕನೇ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಒಂದೆಡೆ ಬಿಜೆಪಿಯ ಆಪರೇಷನ್‌ ವಿರುದ್ಧ ಹರಿಹಾಯುತ್ತಾ ಮತಗಳನ್ನು ಸೆಳೆಯುತ್ತಿದ್ದಾರೆ. ಆದರೆ ಅವರ ಗೆಲುವಿನ ಓಟಕ್ಕೆ ತಡೆ ನೀಡುವಂತಹ ಹೇಳಿಕೆ ಅವರಿಂದ ಇತ್ತೀಚೆಗೆ ಹೊರಬಿದ್ದಿರುವುದು ತುಸು ಆತಂಕ ಸೃಷ್ಟಿಸಿದೆ. ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಆ್ಯಂಟೋ ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲ ಎಂದು ಅರ್ಥ ಬರುವಂತೆ ಪ್ರತಿಕ್ರಿಯೆ ನೀಡಿದ್ದರು. ಇದನ್ನು ಬಿಜೆಪಿ ಚುನಾವಣೆಯಲ್ಲಿ ಪ್ರಮುಖ ದಾಳವಾಗಿ ಬಳಸಿಕೊಂಡಿದ್ದು, ಇವರಿಗೆ ಮುಳುವಾಗುವ ಸಾಧ್ಯತೆಯಿದೆ.

ಸ್ಟಾರ್‌ ಕ್ಷೇತ್ರ
ಪಟ್ಟಣಂತಿಟ್ಟ ಕೇರಳ
ಮತದಾನ ಏಪ್ರಿಲ್ 16
ವಿಧಾನಸಭಾ ಕ್ಷೇತ್ರಗಳು - 5 (ಎಲ್‌ಡಿಎಫ್‌-5)

2019ರ ಚುನಾವಣೆ ಫಲಿತಾಂಶ
ಗೆಲುವು ಆ್ಯಂಟೋ ಆ್ಯಂಟನಿ ಕಾಂಗ್ರೆಸ್‌
ಸೋಲು ವೀಣಾ ಜಾರ್ಜ್‌ ಸಿಪಿಎಂ

ಪ್ರಮುಖ ಅಭ್ಯರ್ಥಿಗಳು
ಕಾಂಗ್ರೆಸ್‌ ಆ್ಯಂಟೋ ಆ್ಯಂಟನಿ
ಬಿಜೆಪಿ ಅನಿಲ್‌ ಕೆ ಆ್ಯಂಟನಿ
ಸಿಪಿಎಂ ಥಾಮಸ್ ಐಸಾಕ್‌

ದಕ್ಷಿಣ ರಾಜ್ಯಗಳ ಸಮರ ತೀವ್ರ: ಕರ್ನಾಟಕ ಬಳಿಕ ಈಗ ಕೇಂದ್ರದ ವಿರುದ್ಧ ತ.ನಾಡು ಸುಪ್ರೀಂಗೆ

ಚುನಾವಣಾ ವಿಷಯ
-ಕ್ರಿಶ್ಚಿಯನ್ನರ ಅಸ್ಮಿತೆ
-ರಬ್ಬರ್‌ ರಫ್ತು ಮಾಡಲು ಸಹಾಯಧನ
-ಶಬರಿಮಲೆ ದರ್ಶನದಲ್ಲಿ ಅವ್ಯವಸ್ಥೆ
-ಪುಲ್ವಾಮಾ ಕುರಿತು ಲಘು ಹೇಳಿಕೆ

Latest Videos
Follow Us:
Download App:
  • android
  • ios