ಭ್ರಷ್ಟಾಚಾರ ಪ್ರಕರಣದಲ್ಲಿ ಅನಿಲ್ ದೇಶ್‌ಮುಖ್‌ಗೆ ಜಾಮೀನು
ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್‌ಗೆ ಬಾಂಬೆ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.

ಮುಂಬೈ (ಡಿ.12): ಮಹಾರಾಷ್ಟ್ರ ಸರ್ಕಾರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್‌ಗೆ ಬಾಂಬೆ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಅಕ್ರಮ ಹಣ ವರ್ಗಾವರಣೆ ಪ್ರಕರಣ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐನಿಂದ ತನಿಖೆ ಎದುರಿಸುತ್ತಿದ್ದ ಮಹಾರಾಷ್ಟ್ರದ ಮಾಜಿ ಕ್ಯಾಬಿನೆಟ್ ದರ್ಜೆಯ ಸಚಿವ ಕಳೆದೊಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಇವರ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿದ್ದ ಕೋರ್ಟ್ ಡಿಸೆಂಬರ್ 8 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಸೋಮವಾರ ನ್ಯಾಯಮೂರ್ತಿ ಎಂಎಸ್ ಕಾರ್ಣಿಕ್ ತೀರ್ಪು ಪ್ರಕಟ ಮಾಡಿದರು. ಅದರೊಂದಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಒಂದು ವರ್ಷದ ನ್ಯಾಯಾಂಗ ಬಂಧನದ ನಂತರ ಅನಿಲ್ ದೇಶ್‌ಮುಖ್ ಈಗ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಒಂದೇ ಆರೋಪದಲ್ಲಿ ಅನಿಲ್ ದೇಶ್‌ಮುಖ್ ಅವರ ಮೇಲೆ ಎರಡು ತನಿಖೆ ಪ್ರಸ್ತುತ ಜಾರಿಯಲ್ಲಿದ್ದಾರೆ. ಭ್ರಷ್ಟಾಚಾರ ಆರೋಪದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ನಿರ್ವಹನೆ ಮಾಡುತ್ತಿದ್ದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಮಾಡುತ್ತಿದೆ. ಇದರಿಂದಾಗಿ ಅನಿಲ್ ದೇಶ್‌ಮುಖ್‌ಗೆ ಜಾಮೀನು ಅಂದಾಜು 1 ವರ್ಷ ವಿಳಂಬವಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೇಶಮುಖ್ ಅವರಿಗೆ ಬಾಂಬೆ ಹೈಕೋರ್ಟ್ ಅಕ್ಟೋಬರ್ 4 ರಂದು ಜಾಮೀನು ನೀಡಿತ್ತು. ಆದರೆ, ಭ್ರಷ್ಟಾಚಾರ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲು ಸಿಬಿಐ ವಿರೋಧ ವ್ಯಕ್ತಪಡಿಸಿತ್ತು. ಇದರ ವಿಚಾರಣೆ ನಡೆಸಿದ ಕೋರ್ಟ್, ಡಿಸೆಂಬರ್ 8 ರಂದು ವಿಚಾರಣೆ ಮುಕ್ತಾಯ ಮಾಡಿತ್ತು. ಸಿಬಿಐ ಪ್ರಕರಣದಲ್ಲಿ, ವಿಶೇಷ ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿತು ಮತ್ತು ಅದನ್ನು ದೇಶಮುಖ್ ಅವರು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು.
Rajya Sabha Elections: ನವಾಬ್ ಮಲ್ಲಿಕ್ ಮತ್ತು ದೇಶ್‌ಮುಖ್ ಮತದಾನ ಮಾಡಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ದೇಶಮುಖ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್ ಚೌಧರಿ ಮತ್ತು ವಕೀಲ ಅನಿಕೇತ್ ನಿಕಮ್ ಅವರು ಎರಡೂ ಪ್ರಕರಣಗಳು ಪರಸ್ಪರ ಸಂಬಂಧ ಹೊಂದಿದೆ. ಇಡಿ ಪ್ರಕರಣದಲ್ಲಿ ದೇಶಮುಖ್ ಅವರಿಗೆ ಜಾಮೀನು ಈಗಾಗಲೇ ನೀಡಿದೆ. ಆದ್ದರಿಂದ ಸಿಬಿಐ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಬೇಕು ಎಂದು ವಾದ ಮಾಡಿದ್ದರು. ಅವರ ಮೇಲೆ ಹೊರಿಸಿರುವ ಆರೋಪದಲ್ಲಿ ಹೆಚ್ಚೆಂದರೆ 7 ವರ್ಷಗಳ ಕಾಲ ಗರಿಷ್ಠ ಶಿಕ್ಷೆ ಆಗಬಹುದು. ಆದರೆ, ಈಗಾಗಲೇ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದಾರೆ ಎಂದು ಚೌಧರಿ ವಾದ ಮಾಡಿದ್ದಾರೆ. ಮುಂಬೈನ ವಿವಾದಿತ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜ್ ಅವರನ್ನು ಸಿಬಿಐ ಈ ಪ್ರಕರಣದಲ್ಲಿ ಅಪ್ರೂವರ್ ಆಗಿ ಮಾಡಲಾಗಿದೆ ಎಂದು ಚೌಧರಿ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ಇಡಿ ಪ್ರಕರಣದಲ್ಲಿ ದೇಶಮುಖ್‌ಗೆ ಜಾಮೀನು ನೀಡುವಾಗ ವೇಜ್ ಅವರ ಹೇಳಿಕೆಗಳ ಸತ್ಯಾಸತ್ಯತೆಯ ಬಗ್ಗೆ ಹೈಕೋರ್ಟ್ ಅನುಮಾನ ವ್ಯಕ್ತಪಡಿಸಿತ್ತು.
Anil Deshmukh admitted ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆ ದಾಖಲು!
ಸಿಬಿಐ ಪರವಾಗಿ ಹೈಕೋರ್ಟ್‌ನಲ್ಲಿ ವಾದ ಮಾಡಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರುವ ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ ಸಚಿವರು ಭಾಗಿಯಾಗಿದ್ದಾರೆ ಹಾಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ವಾದ ಮಾಡಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀಡಲಾದ ಜಾಮೀನನ್ನು ಉದ್ದೇಶಿತ ಅಪರಾಧದಲ್ಲಿ (ಅಂದರೆ ಭ್ರಷ್ಟಾಚಾರದಂಥ ಪ್ರಕರಣ) ಜಾಮೀನು ನೀಡಲು ಆಧಾರವನ್ನಾಗಿ ಮಾಡಬಾರದು ಎಂದು ಸಿಂಗ್ ವಾದ ಮಂಡಿಸಿದ್ದರು. ದೇಶಮುಖ್ ಅವರಿಗೆ ಸಿಬಿಐ ಎಫ್‌ಐಆರ್ ರದ್ದುಪಡಿಸಲು ಮತ್ತು ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ ಮನವಿಗಳಲ್ಲಿ ಪರಿಹಾರವನ್ನು ನಿರಾಕರಿಸಲಾಗಿದೆ ಎಂದು ಅನಿಲ್ ಸಿಂಗ್ ನ್ಯಾಯಾಲಯದ ಗಮನಕ್ಕೆ ತಂದರು. ಪ್ರಭಾವಿ ವ್ಯಕ್ತಿಯಾಗಿರುವ ದೇಶಮುಖ್ ಅವರು ಪ್ರಕರಣದ ಬಾಕಿ ಇರುವ ತನಿಖೆಗೆ ಅಡ್ಡಿಪಡಿಸಬಹುದು ಎಂಬ ಆತಂಕವನ್ನೂ ಸಿಂಗ್ ವ್ಯಕ್ತಪಡಿಸಿದ್ದರು.