ಮುಂಬೈ(ಏ.08): ಮಹಾರಾಷ್ಟ್ರದ ನಿರ್ಗಮಿತ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರ ‘100 ಕೋಟಿ ರು. ಹಫ್ತಾ ವಸೂಲಿ’ ಹಗರಣಕ್ಕೆ ಬುಧವಾರ ಮಹತ್ವದ ತಿರುವು ಸಿಕ್ಕಿದೆ. ಸಚಿವರಾದ ಅನಿಲ್‌ ದೇಶಮುಖ್‌ ಮತ್ತು ಅನಿಲ್‌ ಪರಬ್‌ ಅವರು ತಮಗೆ ಮಾಸಿಕ ತಲಾ 100 ಕೋಟಿ ರು. ಹಫ್ತಾ ವಸೂಲಿ ಮಾಡುವಂತೆ ಸೂಚಿಸಿದ್ದರು ಎಂದು ಪ್ರಕರಣದ ಮುಖ್ಯ ಆರೋಪಿಯಾದ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ, ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

‘ಅನಿಲ್‌ ದೇಶಮುಖ್‌ ನನಗೆ 1660 ಬಾರ್‌ ಹಾಗೂ ರೆಸ್ಟೋರೆಂಟ್‌ಗಳಿಂದ ತಲಾ 3.5 ಲಕ್ಷ ರು. ಹಫ್ತಾ ವಸೂಲಿಗೆ ಸೂಚಿಸಿದ್ದರು’ ಎಂದು ಎನ್‌ಐಎಗೆ ವಾಝೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಇದರಿಂದಾಗಿ ದೇಶಮುಖ್‌ ಅವರು 100 ಕೋಟಿ ರು. ಹಫ್ತಾ ವಸೂಲಿ ಜವಾಬ್ದಾರಿಯನ್ನು ವಾಝೆ ಅವರಿಗೆ ವಹಿಸಿದ್ದರು ಎಂದು ಮುಂಬೈನ ನಿರ್ಗಮಿತ ಪೊಲೀಸ್‌ ಆಯುಕ್ತ ಪರಮ್‌ಬೀರ್‌ ಸಿಂಗ್‌ ಮಾಡಿದ ಆರೋಪಕ್ಕೆ ಪುಷ್ಟಿಸಿಕ್ಕಂತಾಗಿದೆ ಎಂದು ವಿಶ್ಲೇಷಿಸಲಾಗಿದೆ. ಇದೇ ಪ್ರಕರಣದಲ್ಲಿ ಇತ್ತೀಚೆಗೆ ಅನಿಲ್‌ ದೇಶಮುಖ್‌, ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಇನ್ನು ಮತ್ತೋರ್ವ ಸಚಿವ ಅನಿಲ್‌ ಪರಬ್‌ ಕೂಡಾ ಓರ್ವ ಗುತ್ತಿಗೆದಾರರಿಂದ ಕನಿಷ್ಠ 2 ಕೋಟಿ ರು.ನಂತೆ 50 ಗುತ್ತಿಗೆದಾರರಿಂದ 100 ಕೋಟಿ ರು. ಹಫ್ತಾ ವಸೂಲಿಗೆ ಸೂಚಿಸಿದ್ದರು. ಆದರೆ ಇದು ನನ್ನಿಂದಾಗದ ಕೆಲಸ ಎಂದು ಇಬ್ಬರಿಗೂ ತಿಳಿಸಿದ್ದೆ. ಜೊತೆಗೆ ಹಿರಿಯ ಅಧಿಕಾರಿಯಾಗಿದ್ದ ಪರಮಬೀರ್‌ ಅವರಿಗೂ ಮಾಹಿತಿ ನೀಡಿದ್ದೆ. ಅವರು ಅಂಥ ಕೆಲಸ ಮಾಡದಂತೆ ನನಗೆ ಸೂಚಿಸಿದ್ದರು ಎಂದು ವಾಝೆ ಮಾಹಿತಿ ನೀಡಿದ್ದಾರೆ