ಅನಿಲ್ ಅಂಬಾನಿ ಸಮೂಹದ ಸಾಲ ವಂಚನೆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ವಾಗ್ವಾದ ನಡೆದಿದೆ. ಅಂಬಾನಿ ಅವರನ್ನು ಏಕೆ ಬಂಧಿಸಿಲ್ಲ ಎಂದು ಅರ್ಜಿದಾರರು ಪ್ರಶ್ನಿಸಿದ್ದು, ತನಿಖಾ ವಿಳಂಬ ಮತ್ತು ದಿವಾಳಿತನ ಪ್ರಕ್ರಿಯೆಯ ದುರುಪಯೋಗದ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ನವದೆಹಲಿ (ಏ.30): ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ (ADAG) ಕಂಪನಿಗಳು ನಡೆಸಿವೆ ಎನ್ನಲಾದ ಸಾಲದ ವಂಚನೆಯ ತನಿಖೆಯ ಕುರಿತಾದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ತೀವ್ರ ವಾಗ್ವಾದ ನಡೆಯಿತು. ಅರ್ಜಿದಾರರ ಪರ ವಕೀಲರು ಅನಿಲ್ ಅಂಬಾನಿ ಬಂಧನದ ಬಗ್ಗೆ ಪ್ರಶ್ನಿಸಿದಾಗ, "ಯಾರೋ ಒಬ್ಬ ವ್ಯಕ್ತಿಯನ್ನು ಏಕೆ ಬಂಧಿಸಿದ್ದೀರಿ, ಬಂಧಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ," ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಕ್ರಿಯಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರ ಪೀಠವು ಈ ವಿಚಾರಣೆಯನ್ನು ನಡೆಸಿತು.

Add Asianetnews Kannada as a Preferred SourcegooglePreferred

ಪ್ರಶಾಂತ್ ಭೂಷಣ್ ಅವರ ವಾದವೇನು?

ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, "ಜಾರಿ ನಿರ್ದೇಶನಾಲಯವು (ED) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಕೆಳ ಹಂತದ ನೌಕರರನ್ನು ಮಾತ್ರ ಬಂಧಿಸಿದೆ. ಆದರೆ, ಸೆಬಿ (SEBI) ತನ್ನ ವರದಿಯಲ್ಲಿ ಈ ವಂಚನೆಯ 'ಮಾಸ್ಟರ್ ಮೈಂಡ್' ಅಥವಾ ಕಿಂಗ್‌ಪಿನ್ ಎಂದು ಗುರುತಿಸಿರುವ ಅನಿಲ್ ಅಂಬಾನಿ ಅವರನ್ನು ಮಾತ್ರ ಬಂಧಿಸಿಲ್ಲ," ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಕೆಲವು ಎ ಅಥವಾ ಬಿ ವ್ಯಕ್ತಿಗಳನ್ನು ಏಕೆ ಬಂಧಿಸಿಲ್ಲ ಎಂದು ಉತ್ತರಿಸಲು ನನಗೆ ಸಾಧ್ಯವಾಗುವುದಿಲ್ಲ," ಎಂದು ಹೇಳಿದರು. ಇದೇ ವೇಳೆ, ತನಿಖೆಯ ವೇಳೆ ಹೆಚ್ಚಿನ ಸಾಕ್ಷ್ಯಗಳು ಪತ್ತೆಯಾದ ಹಿನ್ನೆಲೆಯಲ್ಲಿ ಎರಡು ಹೊಸ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅವರು ಕೋರ್ಟ್‌ಗೆ ತಿಳಿಸಿದರು.

ತನಿಖೆಯ ವಿಳಂಬಕ್ಕೆ ಕೋರ್ಟ್ ಅಸಮಾಧಾನ

ಈ ಹಿಂದೆ ತನಿಖೆಯನ್ನು ನಾಲ್ಕು ವಾರಗಳಲ್ಲಿ ಮುಗಿಸುವುದಾಗಿ ಏಜೆನ್ಸಿಗಳು ಹೇಳಿದ್ದವು. ಆದರೆ ಹೊಸದಾಗಿ ಎರಡು ಎಫ್‌ಐಆರ್ ದಾಖಲಿಸಿರುವ ಕಾರಣ ತನಿಖೆ ಪೂರ್ಣಗೊಂಡಿಲ್ಲ ಎಂದು ಇಂದು ತಿಳಿಸಲಾಯಿತು. ಸುಮಾರು 40,000 ಕೋಟಿ ರೂಪಾಯಿಗಳ ಸಾಲದ ವಂಚನೆ ನಡೆದಿದೆ ಎಂಬ ಆರೋಪದ ಬಗ್ಗೆ ಇ.ಡಿ ಮತ್ತು ಸಿಬಿಐ ಸಲ್ಲಿಸಿರುವ ಹೊಸ ಸ್ಥಿತಿಗತಿ ವರದಿಗಳನ್ನು ಪರಿಶೀಲಿಸಲು ನ್ಯಾಯಾಲಯವು ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿದೆ.

ಕಡಿಮೆ ಬೆಲೆಗೆ ಸಾಲ ತೀರಿಸುವ ಹುನ್ನಾರ?

ಅನಿಲ್ ಅಂಬಾನಿ ಸಮೂಹದ ಕೆಲವು ಕಂಪನಿಗಳ 2,983 ಕೋಟಿ ರೂಪಾಯಿ ಮೌಲ್ಯದ ಸಾಲವನ್ನು ದಿವಾಳಿತನ ಪ್ರಕ್ರಿಯೆಯಲ್ಲಿ (Insolvency proceedings) ಕೇವಲ 26 ಕೋಟಿ ರೂಪಾಯಿಗಳಿಗೆ ಇತ್ಯರ್ಥಪಡಿಸಲಾಗಿದೆ ಎಂಬ ಇ.ಡಿ ವರದಿಯನ್ನು ನ್ಯಾಯಾಲಯವು ಗಮನಿಸಿದೆ. ಈ ವ್ಯವಹಾರಗಳಿಗೆ 8 ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC) "ಪ್ರಾಜೆಕ್ಟ್ ಹೆಲ್ಪ್" ಮೂಲಕ ನೆರವು ನೀಡಿರುವುದನ್ನು ಪೀಠವು ಗಂಭೀರವಾಗಿ ಪರಿಗಣಿಸಿದೆ. ಬ್ಯಾಂಕ್‌ಗಳಿಂದ ಸಾಲ ಪಡೆದು ದಿವಾಳಿಯಾದ ಕಂಪನಿಗಳು, ತಮ್ಮ ಆಸ್ತಿಗಳನ್ನು ಹರಾಜು ಮಾಡುವಾಗ ಕುಟುಂಬ ಸದಸ್ಯರಿಗೆ ಅಥವಾ ಸ್ನೇಹಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಐಬಿಸಿ (IBC) ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಸಿಜೆಐ ಸೂರ್ಯ ಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ.

ವಿಚಾರಣೆಯ ವೇಳೆ ಸಾಲಗಾರರೊಬ್ಬರ ಪರ ವಕೀಲರು ಒಂದು ನಿರ್ದಿಷ್ಟ ಪ್ರಕರಣವನ್ನು ಪ್ರಸ್ತಾಪಿಸಿದರು: "ತಿಂಗಳಿಗೆ 8.5 ಕೋಟಿ ಟೋಲ್ ಸಂಗ್ರಹಿಸುವ ಲಾಭದಾಯಕ ಕಂಪನಿಯೊಂದು ದಿವಾಳಿತನಕ್ಕೆ ಅರ್ಜಿ ಸಲ್ಲಿಸುತ್ತದೆ. ನಂತರ ಅದರ 584 ಕೋಟಿ ಸಾಲವನ್ನು ಕೇವಲ 85 ಕೋಟಿ ಪಾವತಿಸುವ ಮೂಲಕ ಮುಗಿಸಲಾಗುತ್ತದೆ. ಇದು ಸಾಲ ನೀಡಿದವರಿಗೆ ಮಾಡುವ ವಂಚನೆ," ಎಂದು ವಿವರಿಸಿದರು. ನ್ಯಾಯಾಲಯವು ಈ ಬಗ್ಗೆ ಪ್ರತಿಕ್ರಿಯಿಸಿ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿರುವುದರಿಂದ ವೈಯಕ್ತಿಕ ವ್ಯಾಜ್ಯಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ ತನಿಖಾ ಏಜೆನ್ಸಿಗಳಿಗೆ ಈ ಬಗ್ಗೆ ಮಾಹಿತಿ ನೀಡಲು ಯಾವುದೇ ತಡೆ ಇಲ್ಲ ಎಂದು ತಿಳಿಸಿತು.