ಇತ್ತೀಚೆಗೆ ಕರ್ನಾಟಕದ ಏರೋಸ್ಪೇಸ್‌ ಉದ್ಯಮಕ್ಕೆ ಆಂಧ್ರಪ್ರದೇಶಕ್ಕೆ ಬನ್ನಿ. ಬೆಂಗಳೂರು ಸನಿಹದ ಆಂಧ್ರದ ಗಡಿಭಾಗದಲ್ಲೇ ಉದ್ಯಮ ಸ್ಥಾಪನೆಗೆ 8 ಸಾವಿರ ಎಕರೆ ನೀಡುವೆ ಎಂದು ಸಚಿವ ನಾರಾ ಲೋಕೇಶ್‌ ಕರೆ ನೀಡಿದ್ದರು.

ಅಮರಾವತಿ (ಜು.19): ಇತ್ತೀಚೆಗೆ ಕರ್ನಾಟಕದ ಏರೋಸ್ಪೇಸ್‌ ಉದ್ಯಮಕ್ಕೆ ಆಂಧ್ರಪ್ರದೇಶಕ್ಕೆ ಬನ್ನಿ. ಬೆಂಗಳೂರು ಸನಿಹದ ಆಂಧ್ರದ ಗಡಿಭಾಗದಲ್ಲೇ ಉದ್ಯಮ ಸ್ಥಾಪನೆಗೆ 8 ಸಾವಿರ ಎಕರೆ ನೀಡುವೆ ಎಂದು ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರ ಪುತ್ರ, ಸಚಿವ ನಾರಾ ಲೋಕೇಶ್‌ ಕರೆ ನೀಡಿದ್ದರು. ಅವರು ಕರ್ನಾಟಕದ ಗಡಿಭಾಗದಲ್ಲಿರುವ (ಬೆಂಗಳೂರಿನಿಂದ ಸುಮಾರು 125 ಕಿ.ಮೀ. ದೂರ) ಲೇಪಾಕ್ಷಿಯನ್ನು ಉದ್ದೇಶಿಸಿ ಈ ಮಾತು ಹೇಳಿದ್ದಾರೆ ಎಂದು ಈಗ ತಿಳಿದುಬಂದಿದೆ.

‘ಲೋಕೇಶ್ ಅವರ ಸ್ಪಷ್ಟ ಉಲ್ಲೇಖ ಆಂಧ್ರಪ್ರದೇಶದ ಗಡಿಯಾಚೆಗಿನ ಲೇಪಾಕ್ಷಿಯ ಬಗ್ಗೆ. ಅಲ್ಲಿ ಚಂದ್ರಬಾಬು ನಾಯ್ಡು ಸರ್ಕಾರವು ಬಾಹ್ಯಾಕಾಶ ನಗರವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಹೊಂದಿದೆ. ಇದನ್ನು ಸಂಶೋಧನೆ ಮತ್ತು ಅಭಿವೃದ್ಧಿ, ಉಪಗ್ರಹಗಳು ಮತ್ತು ಉಡಾವಣಾ ವಾಹನಗಳ ಉತ್ಪಾದನೆಯ ಕೇಂದ್ರವಾಗಿ ಮಾಡುವ ಉದ್ದೇಶ ನಾಯ್ಡು ಅವರಿಗೆ ಇದೆ’ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹೊಸ ಆಂಧ್ರಪ್ರದೇಶ ಬಾಹ್ಯಾಕಾಶ ನೀತಿ (4.0) ಅಡಿಯಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ. ಇದು ಬೆಂಗಳೂರಿಗೆ ಹತ್ತಿರ ಆಗಿರುವ ಕಾರಣ, ಕರ್ನಾಟಕಕ್ಕೆ ಸಿಗುವ ಲಾಭ ಇದಕ್ಕೆ ಸಿಗಬಹುದಾಗಿದೆ ಎಂದು ವರದಿ ಹೇಳಿದೆ.

ಈ ಬಗ್ಗೆ ಮಾಧ್ಯಮವೊಂದರ ಜತೆ ಮಾತನಾಡಿರುವ ಲೋಕೇಶ್‌, ‘ಆಂಧ್ರಪ್ರದೇಶದ ಬೆಳವಣಿಗೆಯನ್ನು ಉತ್ತೇಜಿಸಲು ಹೆಚ್ಚಿನ ದೊಡ್ಡ ಹೂಡಿಕೆಗಳನ್ನು ಆಕರ್ಷಿಸುತ್ತಿದ್ದೇವೆ. ಇದಕ್ಕಾಗಿ ಶೇ.100ರಷ್ಟು ಯತ್ನ ಮಾಡುವುದು ನಮ್ಮ ಉದ್ದೇಶ. ನಾವು ಒಂದು ನವೋದ್ಯಮದಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ನವೋದ್ಯಮಿಗಳ ರೀತಿಯೇ ಅಭಿವೃದ್ಧಿಯ ದಾಹ ನಮಗಿದೆ. ಕೆಲಸಗಳನ್ನು ಪೂರ್ಣಗೊಳಿಸಲು ಅಧಿಕಾವಧಿ ಕೆಲಸ ಮಾಡುತ್ತಿದ್ದೇವೆ’ ಎಂದಿದ್ದಾರೆ. ಇತ್ತೀಚೆಗೆ ಕರ್ನಾಟಕದ ಬೆಂಗಳೂರು ಏರ್‌ಪೋರ್ಟ್‌ ಪಕ್ಕದ ದೇವನಹಳ್ಳಿಯಲ್ಲಿ ಏರೋಸ್ಪೇಸ್ ಪಾರ್ಕ್‌ ಸ್ಥಾಪನೆ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು.

ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಭೂಸ್ವಾಧೀನ ಕೈಬಿಟ್ಟಿತ್ತು. ಆಗ ಟ್ವೀಟ್‌ ಮಾಡಿದ್ದ ನಾರಾ ಲೋಕೇಶ್‌, ‘ಕರ್ನಾಟಕದ ಏರೋಸ್ಪೇಸ್‌ ಉದ್ಯಮ ಆಂಧ್ರಪ್ರದೇಶವನ್ನು ಏಕೆ ನೋಡಬಾರದು? ನಾವು ನಿಮಗಾಗಿ ಆಕರ್ಷಕ ಏರೋಸ್ಪೇಸ್ ನೀತಿಯನ್ನು ಹೊಂದಿದ್ದೇವೆ, ಅತ್ಯುತ್ತಮ ಪ್ರೋತ್ಸಾಹಕಗಳನ್ನು ನೀಡುತ್ತೇವೆ. 8000 ಎಕರೆಗಳಿಗೂ ಹೆಚ್ಚು ಬಳಸಲು ಸಿದ್ಧವಾದ ಭೂಮಿ (ಬೆಂಗಳೂರಿನ ಹೊರಗೆ) ತಯಾರಿದೆ! ಮಾತುಕತೆಗೆ ಬರುವಂತೆ ಕೋರುತ್ತೇನೆ’ ಎಂದಿದ್ದರು. ಆದರೆ ನಾರಾ ಲೋಕೇಶ್‌ ಆಹ್ವಾನಕ್ಕೆ ಕರ್ನಾಟಕ ಸಚಿವ ಎಂ.ಬಿ. ಪಾಟೀಲ ತಿರುಗೇಟು ನೀಡಿ, ‘ಏರೋಸ್ಪೇಸ್‌ಗೆ ಅನ್ಯ ಜಾಗ ನೀಡುತ್ತೇವೆ. ಬಿಟ್ಟುಕೊಡಲು ನಾವು ಸಿದ್ಧರಿಲ್ಲ’ ಎಂದಿದ್ದರು.