ಅಮರಾವತಿ(ಮೇ.19): ಕೊರೋನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಹಲವು ದೇಗುಲಗಳನ್ನು ಆಂಧ್ರಪ್ರದೇಶ ಸರ್ಕಾರವು ಕೋವಿಡ್‌ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಿದೆ. ಈ ಮೂಲಕ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಸೋಂಕು ನಿಗ್ರಹಕ್ಕೆ ಮಹತ್ವದ ಹೆಜ್ಜೆ ಇಟ್ಟಂತಾಗಿದೆ.

ಅಣ್ಣಾವರಂ, ದ್ವಾರಕಾದ ತಿರುಮಲ, ವಿಜಯವಾಡ, ಕಾನಿಪಾಕಂ, ಶ್ರೀಕಾಳಹಸ್ತಿ, ಶ್ರೀಕಾಕುಲಂ, ಮಹಾನಂದಿ, ಸಿಂಹಾಚಲಂ, ಶ್ರೀಶೈಲಂ ಮತ್ತು ಪೇದಕಾಕಿನಿ ದೇವಾಲಯಗಳಲ್ಲಿ ಈಗಾಗಲೇ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಸಿದ್ಧತೆಗಳನ್ನು ರಾಜ್ಯ ಮುಜರಾಯಿ ಇಲಾಖೆ ಮಾಡಿಕೊಂಡಿದೆ. ರಾಜ್ಯದ 16 ಪ್ರಮುಖ ದೇವಾಲಯಗಳಲ್ಲಿ 1000 ಹಾಸಿಗೆಯ ವ್ಯವಸ್ಥೆ ಹಾಗೂ ಸಣ್ಣ ದೇವಸ್ಥಾನಗಳಲ್ಲಿ 25 ಹಾಸಿಗೆಗಳನ್ನು ಸಿದ್ಧ ಮಾಡಿಕೊಳ್ಳಲಾಗಿದ್ದು, ಸೋಂಕಿತರಿಗೆ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ.

ಮತ್ತೊಂದೆಡೆ ಆಂಧ್ರಪ್ರದೇಶ ಸರ್ಕಾರ ಈಗಾಗಲೇ 13 ಜಿಲ್ಲೆಗಳಲ್ಲಿ 52,471 ಹಾಸಿಗೆಗಳ ಸಾಮರ್ಥ್ಯದ 115 ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆದಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona