ದತ್ತಿ ಇಲಾಖೆ ಎಲ್ಲಾ ದೇವಾಲಯ ಇದೀಗ ಆನ್‌ಲೈನ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅಡಿಗೆ ತಂದ ಆಂಧ್ರ ಸರ್ಕಾರ!
ದತ್ತಿ ಇಲಾಖೆಯಡಿಯಲ್ಲಿದ್ದ ಎಲ್ಲಾ ದೇವಸ್ಥಾನ, ಮಂದಿರಗಳನ್ನು ಇದೀಗ ದೇವಾಲಯ ನಿರ್ವಹಣಾ ವ್ಯವಸ್ಥೆ ಅಡಿ ತರುವ ಮಹತ್ವದ ನಿರ್ಧಾರವನ್ನು ಆಂಧ್ರ ಸರ್ಕಾರ ತೆಗೆದುಕೊಂಡಿದೆ. . ವಿಶೇಷ ಅಂದರೆ ಈ ವ್ಯವಸ್ಥೆ ಸಂಪೂರ್ಣವಾಗಿ ಆನ್‌ಲೈನ್ ಸಿಸ್ಟಮ್ ಆಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಆಂಧ್ರ ಪ್ರದೇಶ(ಮಾ.16): ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಆಂಧ್ರ ಪ್ರದೇಶದ ಎಲ್ಲಾ ದೇವಸ್ಥಾನ, ಮಂದಿರಗಳನ್ನು ಏಕೀಕೃತ ದೇವಾಲಯ ನಿರ್ವಹಣಾ ವ್ಯವಸ್ಥೆ(Temple Management System) ಅಡಿಗೆ ತರಲಾಗುವುದು ಎಂದು ಆಂಧ್ರ ಪ್ರದೇಶ ಸರ್ಕಾರ ಘೋಷಿಸಿದೆ.
ಗೋಕರ್ಣ ಮಹಾಬಲೇಶ್ವರ ದೇಗುಲದ ಮೊಬೈಲ್ ಆ್ಯಪ್ ಲೋಕಾರ್ಪಣೆ
ಮುಖ್ಯಮಂತ್ರಿ ವೈ ಎಸ್ ಜಗನ್‌ಮೋಹನ್ ರೆಡ್ಡಿ ಇಂದು(ಮಾ.16)ದೇವಾಲಯ ನಿರ್ವಹಣಾ ವ್ಯವಸ್ಥೆ(TMS)ಆರಂಭಿಸಿದರು. ಈ ಮೂಲಕ ಶಿಥಿಲಗೊಂಡಿರುವ ಹಾಗೂ ಸಮಸ್ಯೆ ಎದುರಿಸುತ್ತಿರುವ ದೇವಸ್ಥಾನಗಳ ಪುನರ್ ನಿರ್ಮಾಣ ಕಾರ್ಯಕ್ಕೂ ಆಂಧ್ರ ಪ್ರದೇಶ ಸರ್ಕಾರ ಮುಂದಾಗಿದೆ.
TMS ವ್ಯವಸ್ಥೆ ಆನ್‌ಲೈನ್ ಮೂಲಕ ನಡೆಯಲಿದೆ. ಹೀಗಾಗಿ ಹೆಚ್ಚಿನ ಪಾರದರ್ಶಕತೆ ಇರಲಿದೆ. ಇದರಿಂದ ದೇವಸ್ಥಾನದಲ್ಲಿನ ಭ್ರಷ್ಟಾಚಾರಗಳಿಗೆ ಕಡಿವಾಣ ಬೀಳಲಿದೆ. ದೇವಸ್ಥಾನದ ಪೂಜಾ ವಿವರಗಳು, ಸೇವೆಗಳು, ದೇವಸ್ಥಾನದ ಆದಾಯ, ಆಸ್ತಿ ನಿರ್ವಹಣೆ ಎಲ್ಲವೂ ಆನ್‌ಲೈನ್ ಮೂಲಕ ಭಕ್ತರಿಗೆ ಸಿಗಲಿದೆ. ಇದರಿಂದ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತ ಸಾಧ್ಯ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದರು.
ಭಕ್ತರು QR ಕೋಡ್ ಬಳಸಿ ಇ ಹುಂಡಿಗೆ ಹಣ ಕಳುಹಿಸಬಹುದು. ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿರ್ವಹಿಸಲಿದೆ ಎಂದು ಜಗನ್ ಹೇಳಿದ್ದಾರೆ.