ಆ್ಯಪ್‌ನಲ್ಲಿ ಶ್ರೀಕ್ಷೇತ್ರದ ಸಂಪೂರ್ಣ ಮಾಹಿತಿ, ಸೇವಾ ವಿವರ ಲಭ್ಯ| ಒಂದು ಬಾರಿ ರಿಜಿಸ್ಟರ್‌ ಮಾಡಿದರೆ ಭಕ್ತಾದಿಗಳಿಗೆ ಮುಂದೆ ವಿಶೇಷ ದಿನಗಳ ಹಾಗೂ ಕಾರ್ಯಕ್ರಮಗಳ ಮಾಹಿತಿ ರವಾನೆ| 

ಗೋಕರ್ಣ(ಮಾ.13): ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಅಧಿಕೃತ ಮೊಬೈಲ್‌ ಆ್ಯಪ್‌ನ್ನು ಅಶೋಕೆಯ ಮೂಲ ಮಠದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶುಕ್ರವಾರ ಲೋಕಾರ್ಪಣೆ ಮಾಡಿದ್ದಾರೆ. 

ಶಿವರಾತ್ರಿಯ ಶುಭ ಸಂದರ್ಭದಲ್ಲಿ ಕಾರ್ಯಾರಂಭವಾದ ಇದರಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದರೂ ಆ್ಯಪ್‌ನ ಮೂಲಕ ಶ್ರೀ ದೇವರ ಸೇವೆ ಮಾಡಲು ಮಾಹಿತಿ ತಿಳಿಯಬಹುದಾಗಿದೆ. ಮಹಾಬಲೇಶ್ವರನಿಗೆ ಸಲ್ಲುವ ದಿನನಿತ್ಯದ ಸೇವೆಗಳು, ಕಾಣಿಕೆ, ಅಮೃತಾನ್ನ ಸೇವೆಗಳು ಈಗ ಭಕ್ತಾದಿಗಳು ಇರುವಲ್ಲಿಂದಲೇ ಆನ್‌ಲೈನ್‌ ಮೂಲಕ ಪಾವತಿ ಮಾಡಿ ಮಹಾಬಲನ ಕೃಪೆಗೆ ಪಾತ್ರರಾಗಬಹುದಾಗಿದೆ. ಮೊಬೈಲ್‌ ಆ್ಯಪ್‌ನ್ನು ಡೌನ್‌ಲೋಡ್‌ ಮಾಡಲು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ‘ಶ್ರೀ ಗೋಕರ್ಣ’ ಎಂದು ಹುಡುಕಿದರೆ ಸಿಗುತ್ತದೆ.

ಕಾರ್ಯಕ್ರಮದಲ್ಲಿ ಆಕ್ಸಿಸ್‌ ಬ್ಯಾಂಕ್‌ ಕುಮಟಾ ಶಾಖೆಯ ಮ್ಯಾನೇಜರ್‌ ಮಂಜುನಾಥ್‌ ಗಡಿಯಾರ್‌, ಶ್ರೀ ಮಠದ ಡಿ.ಡಿ. ಶರ್ಮಾ, ಗಣೇಶ ಜೆ. ಎಲ್‌. ಮತ್ತು ಸಿಬ್ಬಂದಿ ಹಾಗೂ ದೇವಸ್ಥಾನ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು. ಈಗಾಗಲೇ ಹಲವಾರು ವರ್ಷಗಳಿಂದ ದೇವಾಲಯದ ಮಾಹಿತಿಯನ್ನು ಜಗತ್ತಿಗೆ ನೀಡುತ್ತಾ ಇದೆ. ಈಗ ಅದರಲ್ಲಿಯೇ ಹೊಸದಾಗಿ ಆನ್‌ಲೈನ್‌ ಮೂಲಕ ವಿವಿಧ ಸೇವೆಗೆ ಪಾವತಿ ಮಾಡುವ ಅವಕಾಶ ನೀಡಲಾಗಿದೆ.

ಗೋಕರ್ಣ ಮಹಾಬಲೇಶ್ವರ ದೇವಾಲಯ ಹಸ್ತಾಂತರ; ಸುಪ್ರೀಂ ತೀರ್ಪಿಗೆ ಕಾಯಲೇಬೇಕು

ಶ್ರೀಗೋಕರ್ಣ ಆಂಡ್ರಾಯ್ಡ್‌ ಮೊಬೈಲ್‌ ಆ್ಯಪ್‌ ಶ್ರೀ ಕ್ಷೇತ್ರದ ಭಕ್ತಾದಿಗಳಿಗೆ ಮಾಹಿತಿಯನ್ನು ಹತ್ತಿರದಿಂದ ತಲುಪಿಸಲು ಸಮಾಜಮುಖಿ ತಾಣವಾಗಿದ್ದು, ಇದರ ವೈಶಿಷ್ಟ್ಯಗಳು ಈ ಕೆಳಗಿನಂತಿದೆ.

ಮೊಬೈಲ್‌ ಆ್ಯಪ್‌ನ ವೈಶಿಷ್ಟ್ಯ

1. ಶ್ರೀಗೋಕರ್ಣದ ಸಂಪೂರ್ಣ ಮಾಹಿತಿ.
2. ನಿಯಮಗಳು ಹಾಗೂ ದೇವಾಲಯದ ದರ್ಶನದ ವೇಳೆ ಮತ್ತಿತರ ಮಾಹಿತಿ
3. ಸೇವಾ ವಿವರಗಳು
4. ಆನ್‌ ಲೈನ್‌ ಮೂಲಕ ಪಾವತಿ ಮಾಡಿ ವಿವಿಧ ಸೇವೆ ಹಾಗೂ ದೇಣಿಗೆ ಮಾಡುವ ಅವಕಾಶ.
ಒಂದು ಬಾರಿ ರಿಜಿಸ್ಟರ್‌ ಮಾಡಿದರೆ ಭಕ್ತಾದಿಗಳಿಗೆ ಮುಂದೆ ವಿಶೇಷ ದಿನಗಳ ಹಾಗೂ ಕಾರ್ಯಕ್ರಮಗಳ ಮಾಹಿತಿಗಳು ರವಾನೆಯಾಗುತ್ತದೆ.