Asianet Suvarna News Asianet Suvarna News

ಆಂಧ್ರ ಪ್ರದೇಶ ಮೇಲ್ಮನೆ ರದ್ದು: ವಿಧಾನಸಭೆಯಲ್ಲಿ ಗೊತ್ತುವಳಿ!

ಆಂಧ್ರ ವಿಧಾನ ಪರಿಷತ್‌ ರದ್ದು: ವಿಧಾನಸಭೆಯಲ್ಲಿ ಗೊತ್ತುವಳಿ| ಟಿಡಿಪಿ ಬಹಿಷ್ಕಾರದ ಮಧ್ಯೆ ಸರ್ವಾನುಮತದಿಂದ ನಿರ್ಣಯ ಅಂಗೀಕಾರ| ಮಹತ್ವದ ಮಸೂದೆಗಳಿಗೆ ಪರಿಷತ್‌ ತಡೆಯೊಡ್ಡಿದ್ದಕ್ಕೆ ಜಗನ್‌ ‘ಪ್ರತೀಕಾರ’

Andhra Pradesh cabinet approves abolition of legislative council
Author
Bangalore, First Published Jan 28, 2020, 12:07 PM IST
  • Facebook
  • Twitter
  • Whatsapp

ಅಮರಾವತಿ[ಜ.28]: ವಿಧಾನಸಭೆ ಅಂಗೀಕರಿಸಿ ಕಳುಹಿಸಿದ ಮಸೂದೆಗಳಿಗೆ ತಡೆಯೊಡ್ಡಿದ ಕಾರಣಕ್ಕೆ ವಿಧಾನ ಪರಿಷತ್ತನ್ನೇ ರದ್ದುಗೊಳಿಸಲು ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಶಾಸನಬದ್ಧ ಗೊತ್ತುವಳಿಯೊಂದನ್ನು ಸೋಮವಾರ ಅಂಗೀಕರಿಸಲಾಗಿದೆ.

ಆಂಧ್ರದಲ್ಲಿ ವಿಧಾನಪರಿಷತ್‌ ರದ್ದತಿಗೆ ಜಗನ್‌ ಮುಂದಾಗಿದ್ದು ಸರಿಯೋ, ತಪ್ಪೋ?

ವಿಧಾನ ಪರಿಷತ್‌ ಅನ್ನು ರದ್ದುಗೊಳಿಸುವ ಕುರಿತು ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯವನ್ನು ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ, ತೆಲುಗು ದೇಶಂ ಪಕ್ಷದ ಬಹಿಷ್ಕಾರ ಹಾಗೂ ವಿಪಕ್ಷಗಳ ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಮಂಡಿಸಿದರು. ಚರ್ಚೆಯ ಬಳಿಕ ಸಂಜೆ 6 ಗಂಟೆಗೆ ನಿರ್ಣಯವನ್ನು ಮತಕ್ಕೆ ಹಾಕಿದಾಗ 175​ ಸದಸ್ಯರ ಪೈಕಿ ಸದನದಲ್ಲಿ ಉಪಸ್ಥಿತರಿದ್ದ 133 ಮಂದಿ ಸದಸ್ಯರು ಗುತ್ತುವಳಿಯ ಪರವಾಗಿ ಮತ ಚಲಾಯಿಸಿದರು. ಸಂವಿಧಾನದ ಪರಿಚ್ಛೇದ 169 (1)ರ ಅಡಿಯಲ್ಲಿ ಗೊತ್ತುವಳಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ಗೊತ್ತುವಳಿಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿದರೆ, ಆಂಧ್ರಪ್ರದೇಶದಲ್ಲಿ ವಿಧಾನ ಪರಿಷತ್‌ ಅಸ್ತಿತ್ವ ಕಳೆದುಕೊಳ್ಳಲಿದೆ.

1985ರಲ್ಲಿ ತೆಲುಗುದೇಶಂ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎನ್‌.ಟಿ. ರಾಮರಾವ್‌ ಅವರು ಕಾಂಗ್ರೆಸ್‌ ಮೇಲಿನ ಸಿಟ್ಟಿನ ಕಾರಣಕ್ಕೆ ಆಂಧ್ರ ವಿಧಾನಪರಿಷತ್ತನ್ನು ರದ್ದುಗೊಳಿಸಿದ್ದರು. ಜಗನ್‌ ತಂದೆ ವೈ.ಎಸ್‌. ರಾಜಶೇಖರ ರೆಡ್ಡಿ ಅವರ ಪ್ರಯತ್ನದಿಂದಾಗಿ 2007ರಲ್ಲಿ ಆಂಧ್ರದಲ್ಲಿ ಮತ್ತೆ ವಿಧಾನಪರಿಷತ್‌ ಅಸ್ತಿತ್ವಕ್ಕೆ ಬಂದಿತ್ತು.

ಮಸೂದೆ ಅಂಗೀಕಾರಕ್ಕೆ ಅಡ್ಡಿ, ಆಂಧ್ರ ಮೇಲ್ಮನೆ ರದ್ದು?

ಆಂಧ್ರ ಮೇಲ್ಮನೆ 58 ಸದಸ್ಯರನ್ನು ಹೊಂದಿದೆ. ಸದ್ಯ 4 ಸ್ಥಾನಗಳು ಖಾಲಿ ಇವೆ. ತೆಲುಗುದೇಶಂ 26, ವೈಎಸ್ಸಾರ್‌ ಕಾಂಗ್ರೆಸ್‌ 9, ಬಿಜೆಪಿಯ 3 ಸದಸ್ಯರಿದ್ದಾರೆ. ಜತೆಗೆ 8 ನಾಮನಿರ್ದೇಶಿತ ಸದಸ್ಯರಿದ್ದಾರೆ. ನಾಮನಿರ್ದೇಶಿತರು ತೆಲುಗುದೇಶಂ ಜತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಜಗನ್‌ ಪಕ್ಷಕ್ಕೆ ಬಲವಿಲ್ಲ. ಆಂಧ್ರಕ್ಕೆ ಮೂರು ರಾಜಧಾನಿ ರಚಿಸುವ ಮಸೂದೆಯನ್ನು ಜಗನ್‌ ಸರ್ಕಾರ ಪರಿಷತ್ತಿಗೆ ಕಳುಹಿಸಿತ್ತು. ಆದರೆ ಆ ವಿಧೇಯಕವನ್ನು ಆಯ್ಕೆ ಸಮಿತಿ ಸುಪರ್ದಿಗೆ ಪರಿಷತ್‌ ಒಪ್ಪಿಸಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ್ದ ಜಗನ್‌, ಮೇಲ್ಮನೆಯು ರಾಜಕೀಯ ಉದ್ದೇಶದಿಂದ ಕೆಲಸ ಮಾಡುತ್ತಿರುವಂತಿದೆ. ಪರಿಷತ್ತನ್ನು ಹೊಂದುವುದು ಕಡ್ಡಾಯವಲ್ಲ. ಹೀಗಾಗಿ ಪರಿಷತ್ತನ್ನು ಮುಂದುವರಿಸಬೇಕೇ, ಬೇಡವೇ ಎಂಬ ಬಗ್ಗೆ ಸೋಮವಾರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.

Follow Us:
Download App:
  • android
  • ios