* ಪ್ರಧಾನಿ ಆಂಧ್ರ ಪ್ರವಾಸ ವೇಳೆ ಘಟನೆ* ಮೋದಿ ಕಾಪ್ಟರ್‌ ಬಳಿ ಬಲೂನ್‌, ಹಾರಾಟ: ಭಾರಿ ಭದ್ರತಾಲೋಪ* ಕಾಂಗ್ರೆಸ್‌ ಕಾರ್ಯಕರ್ತರ ಕೃತ್ಯ, ನಾಲ್ವರ ಬಂಧನ

ವಿಜಯವಾಡ(ಜು.05): ಪ್ರಧಾನಿ ನರೇಂದ್ರ ಮೋದಿ ಅವರ ಸೋಮವಾರ ಆಂಧ್ರಪ್ರದೇಶ ಪ್ರವಾಸದ ವೇಳೆ ಭಾರೀ ಭದ್ರತಾ ಲೋಪ ಎಸಗಲಾಗಿದೆ. ಮೋದಿ ಅವರು ಸಂಚರಿಸುತ್ತಿದ್ದ ಕಾಪ್ಟರ್‌ ಸಮೀಪದಲ್ಲೇ, ಹೈಡ್ರೋಜನ್‌ ತುಂಬಿದ್ದ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ಗಂಭೀರ ಲೋಪ ಎಸಗಿದ್ದಾರೆ. ಅಲ್ಲದೆ ಪ್ರಧಾನಿ ಭೇಟಿ ನೀಡಿದ್ದ ವೇಳೆ ಕಪ್ಪು ಬಲೂನ್‌ಗಳೊಂದಿಗೆ ವಿಮಾನ ನಿಲ್ದಾಣಕ್ಕೆ ಬಲವಂತವಾಗಿ ಪ್ರವೇಶಿಸುವ ಯತ್ನ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಇತರೆ ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ಹೊತ್ತಿರುವ ಎಸ್‌ಪಿಜಿ, ಈ ಬಗ್ಗೆ ರಾಜ್ಯ ಸರ್ಕಾರದಿಂದ ವರದಿ ಕೇಳಲು ನಿರ್ಧರಿಸಿದೆ. ಬಿಜೆಪಿ ಕೂಡಾ ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಏನಾಯ್ತು?:

ಅಲ್ಲೂರಿ ಸೀತಾರಾಮ ರಾಜು ಅವರ ಕಂಚಿನ ಪ್ರತಿಮೆ ಉದ್ಘಾಟಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಜಯವಾಡಕ್ಕೆ ಆಗಮಿಸಿದ್ದರು. ಆದರೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಸೇರಿದಂತೆ ನೀಡಿದ್ದ ಹಲವು ಭರವಸೆ ಈಡೇರಿಸಲು ಮೋದಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಪ್ರತಿಭಟನೆಗೆ ಕರೆ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಬಂದೋಬಸ್‌್ತ ಮಾಡಲಾಗಿತ್ತು.

ಸೋಮವಾರ ಮಧಾಹ್ನ ಮೋದಿ ಕಾರ್ಯಕ್ರಮ ಮುಗಿಸಿ ವಿಜಯವಾಡ ಸಮೀಪದ ಗನ್ನಾವರಂ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಪ್ರಯಾಣ ಕೈಗೊಳ್ಳುವ ವೇಳೆ ಕೆಲ ಕಾಂಗ್ರೆಸ್‌ ನಾಯಕರು ಕಪ್ಪು ಬಲೂನ್‌ ಹಿಡಿದು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ, ಪ್ರಕರಣ ದಾಖಲಾಗಿದೆ. ಇದೇ ವೇಳೆ ಇನ್ನು ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಸಮೀಪದ ಹಳ್ಳಿಯೊಂದರ ಕಟ್ಟಡಗಳ ಮೇಲೇರಿ ಹೈಡ್ರೋಜನ್‌ ತುಂಬಿದ ಬಲೂನ್‌ಗಳ ಗೊಂಚಲನ್ನು ಹಾರಿಬಿಟ್ಟಿದ್ದಾರೆ. ಅವು ಮೋದಿ ಸಾಗುವ ಹೆಲಿಕಾಪ್ಟರ್‌ ಮಾರ್ಗದಲ್ಲೇ ಹಾರಾಡುತ್ತಿದ್ದದ್ದು ಕಂಡುಬಂದಿದೆ. ಅದರೆ ಅದೃಷ್ಟವಶಾತ್‌ ಯಾವದು ತೊಂದರೆ ಇಲ್ಲದೆ ಮೋದಿ ಕಾಪ್ಟರ್‌ ಸಂಚಾರ ಮುಂದುವರೆಸಿದೆ.

ಬಿಜೆಪಿ ಗರಂ:

ಈ ಘಟನೆಯನ್ನು ಉದ್ದೇಶಪೂರ್ವಕ ಕೃತ್ಯ ಎಂದು ಆರೋಪಿಸಿರುವ ಬಿಜೆಪಿ, ಪ್ರಧಾನಿ ಮೋದಿ ಅವರ ದೇಹಕ್ಕೆ ಹಾನಿ ಮಾಡಲು ಕಾಂಗ್ರೆಸ್‌ ಪದೇ ಪದೇ ಇಂಥ ಸಂಚು ರೂಪಿಸುತ್ತಿದೆ. ಈ ಹಿಂದೆ ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಚನ್ನಿ ಸರ್ಕಾರ ಇದ್ದಾಗಲೂ ಇಂಥದ್ದೇ ಭದ್ರತಾ ಲೋಪ ಕಂಡುಬಂದಿತ್ತು. ಇದೀಗ ಮತ್ತೆ ಕಾಂಗ್ರೆಸ್‌ ಕಾರ್ಯಕರ್ತರೇ ಅಂಥ ಕೃತ್ಯ ಎಸಗಿದ್ದಾರೆ. ಒಂದು ವೇಳೆ ಬಲೂನ್‌ನಲ್ಲಿ ಸ್ಫೋಟಕವಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲಾ ಪ್ರಶ್ನಿಸಿದ್ದಾರೆ.

ಈ ಹಿಂದೆ ಪಂಜಾಬಿಗೆ ಮೋದಿ ಭೇಟಿ ನೀಡುವ ವೇಳೆ ಪ್ರತಿಭಟನಾಕಾರರು ರಸ್ತೆ ತಡೆ ಹಿಡಿದಿದ್ದರಿಂದ ಪ್ರಧಾನಿಯವರ ಬೆಂಗಾವಲು ಪಡೆ ಸುಮಾರು 15-20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿತ್ತು. ಇದು ಭಾರೀ ಭದ್ರತಾ ಲೋಪ ಎನಿಸಿತ್ತು.