ಇಂದು ತಾಯಂದಿರ ದಿನದಂದು, ಆನಂದ್ ಮಹೀಂದ್ರಾ ಅವರು ಇಡ್ಲಿ ಅಮ್ಮ ತಮ್ಮ ಹೊಸ ಮನೆಗೆ ಪ್ರವೇಶಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ

ನವದೆಹಲಿ (ಮೇ. 08): ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮಿಳುನಾಡಿನ ಇಡ್ಲಿ ಅಮ್ಮನಿಗೆ ಮನೆಯನ್ನು (Idli Amma) ಉಡುಗೊರೆಯಾಗಿ ನೀಡುವ ಭರವಸೆಯನ್ನು ಈಡೇರಿಸಿದ್ದಾರೆ. ಈ ಮೂಲಕ ಮತ್ತೆ ಜನರ ಮೆಚ್ಚುಗೆಗೆ ಮಹೀಂದ್ರಾ ಪಾತ್ರರಾಗಿದ್ದಾರೆ. 2021ರ ಏಪ್ರಿಲ್‌ನಲ್ಲಿ ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದ ಮಹೀಂದ್ರಾ, ಜನರಿಗೆ ಅವರ ಪ್ರಸಿದ್ಧ ಮನೆ-ಬೇಯಿಸಿದ ಆಹಾರವನ್ನು ಬಡಿಸಲು ಇಡ್ಲಿ ಅಮ್ಮಾ ಶೀಘ್ರದಲ್ಲೇ ತಮ್ಮ ಸ್ವಂತ ಮನೆಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದರು. ಈಗ ಆ ಭರವಸೆಯನ್ನು ಮಹೀಂದ್ರ ಈಡೇರಿಸಿದ್ದಾರೆ. 

ಇಂದು ತಾಯಂದಿರ ದಿನದಂದು, ಇಡ್ಲಿ ಅಮ್ಮ ತನ್ನ ಹೊಸ ಮನೆಗೆ ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದನ್ನು ಆನಂದ್‌ ಮಹೀಂದ್ರಾ ಹಂಚಿಕೊಂಡಿದ್ದಾರೆ. “ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಉಡುಗೊರೆಯಾಗಿ ನೀಡಲು ಸಮಯಕ್ಕೆ ಸರಿಯಾಗಿ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ನಮ್ಮ ತಂಡಕ್ಕೆ ಅಪಾರ ಕೃತಜ್ಞತೆಗಳು. ಅವಳು ತಾಯಿಯ ಸದ್ಗುಣಗಳ ಸಾಕಾರ: ಪೋಷಣೆ, ಕಾಳಜಿ ಮತ್ತು ನಿಸ್ವಾರ್ಥಳು. ಅವಳನ್ನು ಮತ್ತು ಅವಳ ಕೆಲಸವನ್ನು ಬೆಂಬಲಿಸಲು ಸಂತೋಷವೆನಿಸುತ್ತಿದೆ. ನಿಮ್ಮೆಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು! ” ಎಂದು ಮಹೀಂದ್ರಾ ಟ್ವೀಟ್‌ ಮಾಡಿದ್ದಾರೆ

Scroll to load tweet…

ಕಮಲಾತಾಲ್ ಎಂದು ಕರೆಯಲ್ಪಡುವ ಇಡ್ಲಿ ಅಮ್ಮ ತಮಿಳುನಾಡಿನ ಪೆರು ಬಳಿಯ ವಡಿವೇಲಂಪಾಳ್ಯಂ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಸುಮಾರು 37 ವರ್ಷಗಳಿಂದ ಕೇವಲ 1 ರೂಪಾಯಿಗೆ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಆಕೆಯ ಕಥೆಯು 2019 ರಲ್ಲಿ ವೈರಲ್ ಆಗಿತ್ತು. ಈ ವೇಳೆ ಆನಂದ್ ಮಹೀಂದ್ರಾ ತಮ್ಮ ಬೆಂಬಲ ಸೂಚಿಸಿ ಮತ್ತು ವ್ಯವಹಾರದಲ್ಲಿ 'ಹೂಡಿಕೆ' ಮಾಡಲು ಸಂತೋಷಪಡುತ್ತೇನೆ ಎಂದು ಹೇಳಿದ್ದರು.

ಕಮಲಾತಲ್ ಅವರು ಸೂರ್ಯೋದಯದಿಂದ ಇಡ್ಲಿಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ ಮತ್ತು ಪ್ರಾಥಮಿಕವಾಗಿ ದೈನಂದಿನ ಕೂಲಿ ಕಾರ್ಮಿಕರಿಗೆ ಆಹಾರ ಒದಗಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ತಾಯಂದಿರ ದಿನದಂದು ಮಹೀಂದ್ರಾ ಅವರ ಅದ್ಭುತ ವೀಡಿಯೊದ ನಂತರ, ನೆಟ್ಟಿಗರು ಫುಲ್‌ ಫೀದಾ ಆಗಿದ್ದು ಕಮೆಂಟ್‌ಗಳ ಸುರಿಮಳೆಯೇ ಸುರಿದಿದ್ದಾರೆ.