'ತಮಿಳು ಹುಡ್ಗಿಯನ್ನು ಮದುವೆ ಮಾಡಿಸಿಕೊಡ್ತೇವೆ', ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಮದುವೆ ಪ್ರಪೋಸಲ್!
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಭರ್ಜರಿಯಾಗಿ ಸಾಗುತ್ತಿದೆ. ಯಾತ್ರೆಯ ಮೂರನೇ ದಿನ ತಮಾಷೆಯ ಘಟನೆಯೊಂದು ವರದಿಯಾಗಿದೆ. ತಮಿಳುನಾಡು ರಾಜ್ಯವನ್ನು ಪ್ರೀತಿಸುವ ರಾಹುಲ್ ಗಾಂಧಿಗೆ, ಇಲ್ಲಿನ ತಮಿಳು ಹುಡುಗಿಯನ್ನು ಮದುವೆ ಮಾಡಿಕೊಡಲು ಸಿದ್ಧ ಎಂದಿದ್ದಾರೆ. ಇದನ್ನು ಪಕ್ಷದ ಮುಖಂಡ ಜೈರಾಮ್ ರಮೇಶ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಕನ್ಯಾಕುಮಾರಿ (ಸೆ.11): ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೋ ಯಾತ್ರೆ' ಭರದಿಂದ ಸಾಗುತ್ತಿದ್ದು, ಯಾತ್ರೆಯ ಮೂರನೇ ದಿನ ತಮಿಳುನಾಡಿನಲ್ಲಿ ಸ್ಥಳೀಯ ಮಹಿಳಾ ಮನ್ರೇಗಾ ಕಾರ್ಯಕರ್ತರು, ತಮಿಳು ಹುಡುಗಿಯೊಂದಿಗೆ ರಾಹುಲ್ ಗಾಂಧಿಯ ವಿವಾಹ ಮಾಡಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಹಠಾತ್ ಆಗಿ ಬಂದ ಈ ಮದುವೆ ಪ್ರಪೋಸಲ್‌ನಿಂದ ರಾಹುಲ್ ಗಾಂಧಿ ಕೊಂಚ ವಿಚಲಿತರಾದಂತೆ ಕೂಡ ಕಂಡರು. ಈ ತಮಾಷೆಯ ಘಟನೆಯನ್ನು ಪಕ್ಷದ ಮುಖಂಡ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರಮುಖವಾಗಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶನಿವಾರ ಮಧ್ಯಾಹ್ನ ಕನ್ಯಾಕುಮಾರಿಯ ಮಾರ್ತಾಂಡಂನಲ್ಲಿ ಮಹಿಳಾ ಮನ್ರೇಗಾ ಕಾರ್ಯಕರ್ತರನ್ನು ಭೇಟಿ ಮಾಡಿದರು. ಈ ಗುಂಪಲ್ಲಿದ್ದ ಒಬ್ಬ ಮಹಿಳೆ ರಾಹುಲ್ ಗಾಂಧಿ ತಮಿಳುನಾಡು ರಾಜ್ಯವನ್ನು ಪ್ರೀತಿ ಮಾಡ್ತಾರೆ. ತಮಿಳು ಹುಡುಗಿಯೊಂದಿಗೆ ಅವರ ವಿವಾಹ ಮಾಡಲು ತಾವು ಸಿದ್ಧವಿರುವುದಾಗಿ ಹೇಳಿದ್ದಾರೆ. ಇದನ್ನು ಯಾತ್ರೆಯ ತಮಾಷೆಯ ಕ್ಷಣಗಳಲ್ಲಿ ಒಂದು ಎಂದು ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥರೂ ಆಗಿರುವ ಜೈರಾಮ್ ರಮೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ರಾಹುಲ್ ಗಾಂಧಿ ಮದುವೆಯ ವಿಚಾರದ ಬಗ್ಗೆಆಗಾಗ ವಿರೋಧ ಪಕ್ಷಗಳು ಕೆಣಕುತ್ತಲೇ ಇರುತ್ತದೆ. ಅದಕ್ಕೆ ರಾಹುಲ್ ಗಾಂಧಿ ಮೌನವಾಗಿದ್ದುಕೊಂಡೇ ಉತ್ತರ ನೀಡಿದ್ದಾರೆ.
"ಇಂದು ಮಧ್ಯಾಹ್ನ ಮಾರ್ತಾಂಡಮ್‌ನಲ್ಲಿ ಮಹಿಳಾ ಮನ್ರೇಗಾ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿಯವರ ಸಂವಾದದಲ್ಲಿ, ಒಬ್ಬ ಮಹಿಳೆ ರಾಹುಲ್ ಗಾಂಧಿ ಅವರು ತಮಿಳುನಾಡನ್ನು ಪ್ರೀತಿಸ್ತಾರೆ. ತಮಿಳು ಹುಡುಗಿಯನ್ನು ಅವರಿಗೆ ಮದುವೆ ಮಾಡಿಕೊಡಲು ಸಿದ್ಧ ಎಂದು ಹೇಳಿದರು. ರಾಹುಲ್ ಗಾಂಧಿ ತಮಾಷೆಯ ಕ್ಷಣವನ್ನು ಖುಷಿಯಿಂದಲೇ ಎದುರಿಸಿದರು' ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಪ್ರತಿಭಟಿಸಿ, ಕಾಂಗ್ರೆಸ್ ಪಕ್ಷವು 'ಭಾರತ್ ಜೋಡೋ ಯಾತ್ರೆ' ಅನ್ನು ಪ್ರಾರಂಭಿಸಿತು, ಇದು ಐದು ತಿಂಗಳ ಕಾಲ ಈ ಯಾತ್ರೆ ನಡೆಯಲಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3000 ಕಿಮೀ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. 'ಭಾರತ್ ಜೋಡೋ ಯಾತ್ರೆ'ಗೆ ರಾಹುಲ್ ಗಾಂಧಿ ಬುಧವಾರ ಅಧಿಕೃತವಾಗಿ ಚಾಲನೆ ನೀಡಿದರು ಮತ್ತು ಗುರುವಾರ ಬೆಳಿಗ್ಗೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು.
Video: ವಿವಾದಿತ ಪಾದ್ರಿ ಜೊತೆ ರಾಹುಲ್ ಮೀಟಿಂಗ್! ಭಾರತ್ ಜೋಡೋ ಯಾತ್ರೆ ಆರಂಭದಲ್ಲೇ ಇದೆಂಥಾ ಟ್ವಿಸ್ಟ್!
ಶುಕ್ರವಾರ, ಯಾತ್ರೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ, ಬೆಲೆ ಏರಿಕೆ, ಹಣದುಬ್ಬರ ಮತ್ತು ಉದ್ಯೋಗದ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದರು. "ಭಾರತವು ಈಗ ನಮ್ಮ ದೇಶದ ಭವಿಷ್ಯ ಹೇಗಿರಬೇಕು ಎಂಬ ದೃಷ್ಟಿಯ ದಿವಾಳಿತನವನ್ನು ಎದುರಿಸುತ್ತಿದೆ. ನಾವು ಕಾರ್ಪೊರೇಟ್ ಭಾರತದ ಪರವಾಗಿದ್ದೇವೆ. ನಾವು ಬೃಹತ್ ಏಕಸ್ವಾಮ್ಯದ ಕಲ್ಪನೆಗೆ ವಿರುದ್ಧವಾಗಿದ್ದೇವೆ. ನಾವು ಅನ್ಯಾಯದ ವಿರುದ್ಧವಾಗಿದ್ದೇವೆ' ಎಂದು ಅವರು ಹೇಳಿದರು. ಗುರುವಾರ, ಬಿಜೆಪಿ-ಆರ್‌ಎಸ್‌ಎಸ್ ದೇಶವನ್ನು ಧಾರ್ಮಿಕವಾಗಿ ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ, ದ್ವೇಷಕ್ಕಾಗಿ ತನ್ನ ದೇಶವನ್ನು ಕಳೆದುಕೊಳ್ಳುವುದಿಲ್ಲ ಎಂದು ಒತ್ತಿ ಹೇಳಿದರು. "ಸಮಸ್ಯೆಯೆಂದರೆ ಅವರು ಭಾರತೀಯ ಜನರನ್ನು ಅರ್ಥಮಾಡಿಕೊಳ್ಳದಿರುವುದು. ಭಾರತೀಯ ಜನರು ಹೆದರುವುದಿಲ್ಲ. ಅವರು ಎಷ್ಟು ಗಂಟೆಗಳ ವಿಚಾರಣೆ ನಡೆಸಿದರೂ ಪರವಾಗಿಲ್ಲ, ಒಬ್ಬ ವಿರೋಧ ಪಕ್ಷದ ನಾಯಕನೂ ಬಿಜೆಪಿಗೆ ಹೆದರುವುದಿಲ್ಲ." ಎಂದು ರಾಹುಲ್ ಗಾಂಧಿ ಹೇಳಿದರು.
Rahul Gandhi T Shirt: 41 ಸಾವಿರ ರೂಪಾಯಿ ಟಿ-ಶರ್ಟ್ ಧರಿಸಿ ರಾಹುಲ್ ಯಾತ್ರೆ, ಬಿಜೆಪಿಯ ಟೀಕೆ!
ಈ ಯಾತ್ರೆ ಇಂದು ಬೆಳಗ್ಗೆ ಕೇರಳ ತಲುಪಿದ್ದು ಅಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿಯ ಮುಖಂಡರು ಎಲ್ಲರನ್ನು ಸ್ವಾಗತಿಸಿದರು. ಈ ಯಾತ್ರೆ ರಾಜ್ಯದ 7 ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ಪಿಸಿಸಿ ಅಧ್ಯಕ್ಷ ಸುಧಾಕರನ್ ತಿಳಿಸಿದ್ದಾರೆ. ಪ್ರತಿದಿನ ಬೆಳಗ್ಗೆ 7 ಗಂಟೆಗೆ ಪ್ರಯಾಣ ಆರಂಭವಾಗಲಿದ್ದು, 11 ಗಂಟೆವರೆಗೆ ಮುಂದುವರಿಯಲಿದೆ. ನಂತರ ಸಂಜೆ 4 ಗಂಟೆಗೆ ಆರಂಭವಾಗುವ ಈ ಪಯಣ ಸಂಜೆ 7ರವರೆಗೂ ಮುಂದುವರಿಯಲಿದೆ. ಈ ವೇಳೆ ರಾಹುಲ್ ಗಾಂಧಿ ಸಮಾಜದ ವಿವಿಧ ವರ್ಗಗಳ ಜನರನ್ನು ಭೇಟಿ ಮಾಡಲಿದ್ದಾರೆ.