ಕೋಲ್ಕತಾ(ಮೇ.22): ಗಂಟೆಗೆ 190 ಕಿ.ಮೀ. ವೇಗದ ಬಿರುಗಾಳಿ ಮಳೆಯೊಂದಿಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾಕ್ಕೆ ಬುಧವಾರ ಅಪ್ಪಳಿಸಿದ ‘ಅಂಫಾನ್‌’ ಚಂಡಮಾರುತ ಘೋರ ಅನಾಹುತ ಸೃಷ್ಟಿಸಿದೆ. ಅದರಲ್ಲೂ ಕಳೆದ 100 ವರ್ಷಗಳ ಇತಿಹಾಸದಲ್ಲಿ ಬಂಗಾಳ ಕಂಡ ಅತ್ಯಂತ ತೀಕ್ಷ$್ಣ ಸ್ವರೂಪದ ಚಂಡಮಾರುತ ಇದಾಗಿದ್ದು, ಕೊರೋನಾದಿಂದ ನಲುಗಿದ್ದ ರಾಜ್ಯವನ್ನು ಮತ್ತಷ್ಟುಕಂಗೆಡಿಸಿದೆ. ಚಂಡಮಾರುತದ ಅಬ್ಬರ ಬಂಗಾಳದಲ್ಲಿ 72, ಒಡಿಶಾದಲ್ಲಿ 6 ಜನರನ್ನು ಬಲಿ ಪಡೆದಿದ್ದು, ಅಂದಾಜು 1 ಕೋಟಿ ಜನರನ್ನು ತೀವ್ರ ಸಮಸ್ಯೆಯ ಮಡಿಲಿಗೆ ತಳ್ಳಿದೆ. ಈ ಪ್ರಕೃತಿ ವಿಕೋಪದಿಂದ ರಾಜ್ಯ 1 ಲಕ್ಷ ಕೋಟಿ ರು. ಹಾನಿ ಅನುಭವಿಸಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

"

ಈ ನಡುವೆ ಚಂಡಮಾರುತದಿಂದಾಗಿ ಸಂಕಷ್ಟಕ್ಕೆ ಸಿಕ್ಕಿರುವ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಎಲ್ಲಾ ರೀತಿಯ ನೆರವಿನ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ್ದಾರೆ. ಜೊತೆಗೆ ಶುಕ್ರವಾರ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆಗೆ ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ.

ಕಾರ್ಮಿಕರಿಗೆ ಬಿಗ್ ಶಾಕ್: ಕೆಲಸದ ಬೆನ್ನಲ್ಲೇ, ಮನೆಯೂ ಕೊಚ್ಚಿಹೋಯ್ತು!

ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ 20 ಮತ್ತು ಒಡಿಶಾದಲ್ಲಿ 19 ಎನ್‌ಡಿಆರ್‌ಎಫ್‌ ತುಕಡಿ ನಿಯೋಜಿಲಾಗಿದ್ದು, ಅವು ಭಾರೀ ಪ್ರಮಾಣದಲ್ಲಿ ರಕ್ಷಣಾ ಕಾರ್ಯ ಕೈಗೊಂಡಿವೆ. ಜೊತೆಗೆ ಪಶ್ಚಿಮ ಬಂಗಾಳಕ್ಕೆ ಹೆಚ್ಚುವರಿಯಾಗಿ ಇನ್ನೂ 4 ತುಕಡಿಗಳನ್ನು ರವಾನಿಸಲು ಎನ್‌ಡಿಆರ್‌ಎಫ್‌ ನಿರ್ಧರಿಸಿದೆ.

ಮತ್ತೊಂದೆಡೆ ಉಭಯ ರಾಜ್ಯಗಳಲ್ಲಿ ಭಾರೀ ಹಾನಿ ಮಾಡಿದ ಚಂಡಮಾರುತ ಗುರುವಾರ ಪೂರ್ಣವಾಗಿ ನೆರೆಯ ಬಾಂಗ್ಲಾದೇಶ ಭೂಭಾಗವನ್ನು ತಲುಪಿದ್ದು, ನಿಧಾನವಾಗಿ ತನ್ನ ತೀವ್ರತೆ ಕಳೆದುಕೊಳ್ಳುವತ್ತ ಸಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬಂಗಾಳಕ್ಕೆ ಭರ್ಜರಿ ಹಾನಿ:

ಶತಮಾನದಲ್ಲೇ ಕಂಡುಕೇಳರಿಯದ ಚಂಡಮಾರುತದ ಪರಿಣಾಮಕ್ಕೆ ಪಶ್ಚಿಮ ಬಂಗಾಳ ಅಕ್ಷರಶಃ ತತ್ತರಿಸಿದೆ. ರಾಜ್ಯದ ಕರಾವಳಿ ಭಾಗಗಳಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಿಂದಾಗಿ 72 ಜನ ಸಾವನ್ನಪ್ಪಿದ್ದಾರೆ. ಜೊತೆಗೆ ಸಹಸ್ರಾರು ಸಂಖ್ಯೆಯಲ್ಲಿ ಮರಗಳು, ವಿದ್ಯುತ್‌, ದೂರವಾಣಿ ಕಂಬ, ಮೊಬೈಲ್‌ ಟವರ್‌, ಟ್ರಾಫಿಕ್‌ ಸಿಗ್ನಲ್‌, ಪೊಲೀಸ್‌ ಚೌಕಿಗಳು ತರಗೆಲೆಗಳಂತೆ ಉದುರಿಹೋಗಿವೆ. ಲೆಕ್ಕಕ್ಕೆ ಸಿಗದಷ್ಟುಗುಡಿಸಲು ಹಾಗೂ ಮನೆಗಳ ಚಾವಣಿ ಹಾರಿ ಹೋಗಿದೆ. ಪೂರ್ವ ಮಿಡ್ನಾಪುರ, ಹೌರಾ, ಉತ್ತರ ಹಾಗೂ ದಕ್ಷಿಣ 24 ಜಿಲ್ಲೆಗಳು ಅತಿ ಹೆಚ್ಚು ಹಾನಿಗೊಳಗಾಗಿವೆ. ಬೆಳೆದು ನಿಂತಿದ್ದ ಅಪಾರ ಬೆಳೆ ಕೂಡ ನಾಶವಾಗಿದೆ. ಕೋಲ್ಕತಾದಲ್ಲೂ ಅಪಾರ ನಷ್ಟಉಂಟಾಗಿದೆ. ಪ್ರಬಲ ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ಸುಮಾರು 5 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದ ಕಾರಣ, ಇನ್ನಷ್ಟುಸಾವು ನೋವು ತಪ್ಪಿದೆ. ‘ಇದು ಕೊರೋನಾ ವೈರಸ್‌ಗಿಂತ ಅಪಾಯಕಾರಿಯಾಗಿತ್ತು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿರುವುದು ‘ಅಂಫಾನ್‌’ ಭೀಕರತೆ ವಿವರಿಸುವಂತಿದೆ.

ಕಾರ್ಮಿಕರಿಗೆ ಬಿಗ್ ಶಾಕ್: ಕೆಲಸದ ಬೆನ್ನಲ್ಲೇ, ಮನೆಯೂ ಕೊಚ್ಚಿಹೋಯ್ತು!

ಒಡಿಶಾದಲ್ಲೂ ಸಂಕಷ್ಟ:

ಅಂಫಾನ್‌, ಒಡಿಶಾದಲ್ಲೂ ಸುಮಾರು 45 ಲಕ್ಷ ಜನರನ್ನು ಸಂಕಷ್ಟದ ಮಡುವಿಗೆ ತಳ್ಳಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ 2.5 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದ ಕಾರಣ ಹೆಚ್ಚಿನ ಸಾವು ನೋವು ಸಂಭವಿಸಿಲ್ಲ. ಆದರೂ ಕರಾವಳಿಯ ವಿವಿಧ ಭಾಗಗಳಲ್ಲಿ 2 ದಿನಗಳಲ್ಲಿ 6 ಜನ ಸಾವನ್ನಪ್ಪಿದ್ದಾರೆ. ಆದರೆ ಪ್ರಬಲ ಬಿರುಗಾಳಿ ಮತ್ತು ಮಳೆಯ ಪರಿಣಾಮ ಭಾರೀ ಪ್ರಮಾಣದಲ್ಲಿ ಮನೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಜೊತೆಗೆ 1 ಲಕ್ಷ ಹೆಕ್ಟೆರ್‌ಗೂ ಹೆಚ್ಚಿನ ಬೆಳೆ ನಾಶವಾಗಿದೆ. ಸಾವಿರಾರು ಮರಗಳು, ವಿದ್ಯುತ್‌ ಕಂಬ ಧರೆಗುರುಳಿದೆ.

ಈ ನಡುವೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯು ದೆಹಲಿಯಲ್ಲಿ ಗುರುವಾರ ಸಭೆ ನಡೆಸಿ, ಪರಿಸ್ಥಿತಿಯ ಪರಾಮರ್ಶೆ ನಡೆಸಿದೆ. ಭಾರತೀಯ ಹವಾಮಾನ ಇಲಾಖೆ ನಿಖರವಾದ ಮುನ್ಸೂಚನೆ ನೀಡಿದ್ದರಿಂದ ಹಾಗೂ ವಿಪತ್ತು ನಿರ್ವಹಣೆ ಪಡೆಯನ್ನು ಸಕಾಲಕ್ಕೆ ನಿಯೋಜನೆ ಮಾಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಹೇಳಿದೆ.

ನಿಖರ ವರದಿಯಿಂದ ತಪ್ಪಿತು ಹೆಚ್ಚಿನ ಹಾನಿ

ಚಂಡಮಾರುತದ ಹಾದಿ, ಅದರ ತೀವ್ರತೆ, ಅಲೆಗಳ ಎತ್ತರ, ಭೂಮಿಗೆ ಅಪ್ಪಳಿಸುವ ಸಮಯ ಹಾಗೂ ಆ ವೇಳೆಯ ಹವಾಮಾನ ಕುರಿತ ಮಾಹಿತಿಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹವಾಮಾನ ಇಲಾಖೆ ನಿಖರವಾಗಿ ನೀಡಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಹಾನಿ ತಪ್ಪಿದೆ ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

* 1 ಕೋಟಿ ಜನ: ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಚಂಡಮಾರುತ ಸಂತ್ರಸ್ತರ ಅಂದಾಜು ಸಂಖ್ಯೆ

* 80 ಸಾವು: ಚಂಡಮಾರುತಕ್ಕೆ ಪಶ್ಚಿಮ ಬಂಗಾಳದಲ್ಲಿ 72, ಒಡಿಶಾದಲ್ಲಿ 6 ಜನ ಸೇರಿ ಒಟ್ಟು ಸಾವು

* 39 ತುಕಡಿ: ಬಂಗಾಳ 20, ಒಡಿಶಾದಲ್ಲಿ 19 ಎನ್‌ಡಿಆರ್‌ಎಫ್‌ ತುಕಡಿಯಿಂದ ಪರಿಹಾರ ಕಾರ‍್ಯ

* 7.5 ಲಕ್ಷ ಜನ: ಬಂಗಾಳದಲ್ಲಿ 5 ಲಕ್ಷ, ಒಡಿಶಾದಲ್ಲಿ 2.5 ಲಕ್ಷ ಜನರು ಸುರಕ್ಷಿತ ಸ್ಥಳಕ್ಕೆ ರವಾನೆ

* 2 ಲಕ್ಷ ಹೆಕ್ಟೇರ್‌: ಎರಡೂ ರಾಜ್ಯಗಳಲ್ಲಿ ಸಂಭವಿಸಿದೆ ಎನ್ನಲಾದ ಬೆಳೆ ಹಾನಿಯ ಅಂದಾಜು ಪ್ರದೇಶ