ಅಮಿತ್ ಶಾ ಅವರಿಂದ ರಾಮಾನುಜರ ಪ್ರತಿಮೆ ಉದ್ಘಾಟನೆ ಅಶ್ವತ್ಥನಾರಾಯಣ್, ತೇಜಸ್ವಿ ಸೂರ್ಯ ಭಾಗಿ 4 ಅಡಿ ಎತ್ತರದ ಅಮೃತ ಶಿಲೆಯ ರಾಮಾನುಜರ ಪ್ರತಿಮೆ
ಬೆಂಗಳೂರು (ಜು.8): ವಿಶಿಷ್ಟಾದ್ವೈತ ತತ್ವದ ಜನಕರಾದ ರಾಮಾನುಜರು ಸಮಾನತೆಯ ಸಮಾಜಕ್ಕೆ ದುಡಿದ ‘ಯುಗ ಪ್ರವರ್ತಕರು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.
ಶ್ರೀನಗರದ ಶೂರ್ಯಾರ್ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ನಾಲ್ಕು ಅಡಿ ಎತ್ತರದ ಅಮೃತ ಶಿಲೆಯ ರಾಮಾನುಜಾಚಾರ್ಯರ ಪ್ರತಿಮೆಯನ್ನು ವರ್ಚುವಲ್ ಮುಖಾಂತರ ಉದ್ಘಾಟಿಸಿ ಮಾತನಾಡಿದ ಅವರು, ರಾಮಾನುಜರು ಉದಾರ ಧರ್ಮ ಆಚಾರ್ಯರಾಗಿದ್ದು, ತಾರತಮ್ಯದ ವಿರುದ್ಧ ದನಿ ಎತ್ತಿದರು. ಈ ಮೂಲಕ ಅವರು ದೀನರ ಬಾಳಿಗೆ ಬೆಳಕಾದರು ಎಂದು ಸ್ಮರಿಸಿದರು.
ಸಾವಿರ ವರ್ಷ ಕಳೆದರೂ ರಾಮಾನುಜರ ವಿಚಾರಗಳು ಪ್ರಸ್ತುತವಾಗಿವೆ. ಇವು ಭಾರತೀಯ ಧರ್ಮ ಮತ್ತು ಸಂಸ್ಕೃತಿಗಳ ಉಳಿವಿಗೆ ಮೌಲಿಕ ಕೊಡುಗೆ ನೀಡಿವೆ. ಈ ಪ್ರತಿಮೆಯು ಭಾರತವನ್ನು ಮತ್ತಷ್ಟುಗಟ್ಟಿಯಾಗಿ ಬೆಸೆಯಲಿದೆ ಎಂದರು.
ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಕರ್ನಾಟಕದಲ್ಲಿ 40 ವರ್ಷಗಳ ಕಾಲ ಇದ್ದ ರಾಮಾನುಜರು ತಮ್ಮ ಮೇರುಕೃತಿ ಶ್ರೀಭಾಷ್ಯದ ರಚನೆಗೆ ಮುನ್ನ ಹೆಚ್ಚಿನ ಅಧ್ಯಯನಕ್ಕೆ ಕಾಶ್ಮೀರಕ್ಕೆ ಬಂದಿದ್ದರು. ಅದಾದ ಬಳಿಕವೂ ಅವರು ಇಲ್ಲಿಗೆ ಭೇಟಿ ನೀಡಿದ್ದರು ಎಂದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.
