Asianet Suvarna News Asianet Suvarna News

ಬುಲೆಟ್ ಪ್ರೂಫ್ ಕವಚ ತೆಗೆಸಿ ಕಾಶ್ಮೀರದಲ್ಲಿ ಅಮಿತ್ ಭಾಷಣ!

* ಕಾಶ್ಮೀರಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ

* ತಮಗಾಗಿ ಹಾಕಲಾಗಿದ್ದ ಬುಲೆಟ್ ಪ್ರೂಫ್ ಕವಚ ತೆಗೆಸಿದ ಶಾ

* ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪಿಸಲು ಪಾಕಿಸ್ತಾನದ ಜೊತೆ ಮಾತು

Amit Shah Removes Bulletproof Shield In Srinagar Says Want To Speak Frankly pod
Author
Bangalore, First Published Oct 26, 2021, 6:41 AM IST

ಶ್ರೀನಗರ(ಅ.26): ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ((Kashmir Union Territory) ರೂಪುಗೊಂಡ ನಂತರ ಮೊದಲ ಬಾರಿ ಕಾಶ್ಮೀರ(Kashmir) ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ(Amit Shah), ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ತಮಗಾಗಿ ಹಾಕಲಾಗಿದ್ದ ಗುಂಡು ನಿರೋಧಕ ಗಾಜನ್ನು ತೆಗೆದು ಮಾತನಾಡಿದ್ದಾರೆ.

ಶೇರ್‌-ಐ-ಕಾಶ್ಮೀರ್‌ ಅಂತಾರಾಷ್ಟ್ರೀಯ ಕನ್ವೆನ್ಷನ್‌ ಸೆಂಟರ್‌ನಲ್ಲಿ ಕಾಶ್ಮೀರದ ಜನರನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ‘ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪಿಸಲು ಪಾಕಿಸ್ತಾನದ(Pakistan) ಜೊತೆ ಮಾತನಾಡುವಂತೆ ಫಾರುಖ್‌ ಅಬ್ದುಲ್ಲಾ(Farooq Abdullah) ಸಲಹೆ ನೀಡಿದ್ದಾರೆ.

ಆದರೆ ನಾನು ಕಾಶ್ಮೀರದ(Kashmir) ಯುವಕರ ಜೊತೆ ಮಾತನಾಡಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಬಯಸುತ್ತೇನೆ. ನಾನು ಪ್ರಾಮಾಣಿಕವಾಗಿ ಮಾತನಾಡಲು ಬಯಸುತ್ತೇನೆ ಹಾಗಾಗಿ ಅಡ್ಡ ಇರುವ ಗುಂಡು ನಿರೋಧಕ ಗಾಜನ್ನು ತೆಗೆಯುವಂತೆ ಹೇಳಿದ್ದೇನೆ’ ಎಂದು ಅವರು ಹೇಳಿದರು.

ಕಾಶ್ಮೀರದ ಶಾಂತಿ ಕದಡಲು ಯಾರಿಗೂ ಬಿಡಲ್ಲ: ಶಾ

ಜಮ್ಮು: ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್‌ ಶಾ, ಭಯೋತ್ಪಾದನೆಯನ್ನು ಸಂಪೂರ್ಣ ತೊಡೆದುಹಾಕುವುದು ಸರ್ಕಾರದ ಗುರಿಯಾಗಿದ್ದು, ನಾಗರಿಕರ ಹತ್ಯೆಗೆ ಅಂತ್ಯ ಹಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಜಮ್ಮು- ಕಾಶ್ಮೀರದ ಶಾಂತಿ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸಬೇಡಿ ಎಂದಿರುವ ಅವರು, ಪ್ರಧಾನಿ ಜಮ್ಮು-ಕಾಶ್ಮೀರಕ್ಕೆ ತಮ್ಮ ಹೃದಯದಲ್ಲಿ ಸ್ಥಾನ ನೀಡಿದ್ದಾರೆ ಎಂದರು.

ಭಾನುವಾರ ಭಗವತಿ ನಗರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಏಳು ದಶಕಗಳಿಂದ ಜಮು-ಕಾಶ್ಮೀರದ ಅಭಿವೃದ್ಧಿ ಆಗದಿರುವುದಕ್ಕೆ ಮೂರು ಕುಟುಂಬಗಳೇ ಕಾರಣ ಎಂದು ಹೇಸರೇಳದೇ ಕಾಂಗ್ರೆಸ್‌, ಪಿಡಿಪಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ವಿರುದ್ಧ ಅಮಿತ್‌ ಶಾ, ವಾಗ್ದಾಳಿ ನಡೆಸಿದರು. ಈಗಾಗಲೇ ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿ 12,000 ಕೋಟಿ ಹೂಡಿಕೆಯಾಗಿದ್ದು, 2022ರ ಅಂತ್ಯದ ವೇಳೆಗೆ 51, 000 ಕೋಟಿ ಹೂಡಿಕೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಅಡಿಗಲ್ಲು ಹಾಕಲಾಗಿದೆ. ಆದರೆ ಆರಂಭಿಕ ಹಂತದಲ್ಲಿ ಕೆಲವು ಅಡೆತಡೆಗಳು ಅಡ್ಡಿಯಾಗುತ್ತಿವೆ. ಆದರೆ ಯಾರಿಂದಲೂ ಜಮ್ಮು-ಕಾಶ್ಮೀರದ ಶಾಂತಿ ಮತ್ತು ಅಭಿವೃದ್ಧಿಗೆ ಭಂಗಪಡಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ಈ ತಿಂಗಳಿನಲ್ಲಿ ಉಗ್ರರು 11 ನಾಗರಿಕರನ್ನು ಹತ್ಯೆಗೈದ ವಿಚಾರ ಇಟ್ಟುಕೊಂಡು, ಕೆಲವರು ಇಲ್ಲಿನ ಭದ್ರತೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ನಾನು ಅವರಿಗೆ ಕೆಲ ಸಂಗತಿಗಳ ಮೂಲಕ ಉತ್ತರ ನೀಡುತ್ತೇನೆ ಎಂದ ಅಮಿತ್‌ ಶಾ.

ವರ್ಷಕ್ಕೆ 239ರ ಲೆಕ್ಕದಲ್ಲಿ 2004ರಿಂದ 2014ರವರೆಗೆ ಇಲ್ಲಿ 2081 ನಾಗರಿಕರ ಹತ್ಯೆಯಾಗಿದೆ. ದುರದೃಷ್ಟÜವಶಾತ್‌ ವರ್ಷಕ್ಕೆ ಸರಾಸರಿ 30ರ ಲೆಕ್ಕದಲ್ಲಿ 2014ರಿಂದಲೂ ಇಲ್ಲಿಯವರೆಗೆ 239 ನಾಗರಿಕರ ಹತ್ಯೆಯಾಗಿದೆ. ಅದನ್ನು ನಾವು ಒಪ್ಪುತ್ತೇವೆ. ಆದ್ರೆ ಹತ್ಯೆಯ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಅರಿತುಕೊಳ್ಳಿ ಎಂದು ಪರೋಕ್ಷವಾಗಿ ವಿಪಕ್ಷಗಳಿಗೆ ಅಮಿತ್‌ ಶಾ ಟಾಂಗ್‌ ನೀಡಿದರು. ಆದರೆ ನಾವು ಭಯೋತ್ಪಾದನೆಯನ್ನು ಸಂಪೂರ್ಣ ನಾಶ ಮಾಡಿ ಒಬ್ಬನೇ ಒಬ್ಬ ನಾಗಕರಿನ ಪ್ರಾಣ ಹೋಗದಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆಂದು ಭರವಸೆ ನೀಡಿದರು..

Follow Us:
Download App:
  • android
  • ios