* ಅಮಿತ್ ಶಾ ಹೇಳಿಕೆಗೆ ಪಂಜಾಬ್ ಸಿಎಂ, ಆಪ್, ಕಾಂಗ್ರೆಸ್‌ನಿಂದ ತೀವ್ರ ವಿರೋಧ* ಚಂಡೀಗಢ ನೌಕರರಿಗೆ ಕೇಂದ್ರೀಯ ಕಾನೂನು: ಶಾ ಹೇಳಿಕೆ ವಿವಾದ
ಚಂಡೀಗಢ(ಮಾ.29): ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ಇನ್ಮುಂದೆ ಪಂಜಾಬ್ ಕಾನೂನುಗಳ ಬದಲಿಗೆ ಕೇಂದ್ರೀಯ ಸೇವಾ ಕಾಯ್ದೆ (ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿರುವ ಕಾನೂನು)ಯ ನಿಯಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಸದ್ಯ ಚಂಡೀಗಢದಲ್ಲಿ ಸರ್ಕಾರಿ ಉದ್ಯೋಗಿಗಳು ಪಂಜಾಬ್ ಸೇವಾ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನೂತನ ಕಾನೂನು ಅನ್ವಯವಾದರೆ ಈ ನೌಕರರ ನಿವೃತ್ತಿ ವಯಸ್ಸು 58ರಿಂದ 60ಕ್ಕೆ ಏರಿಕೆಯಾಗುತ್ತದೆ. ಗರ್ಭಿಣಿ ಮಹಿಳೆಯರು ಹೆರಿಗೆಯ ರಜೆಯಾಗಿ 2 ವರ್ಷ ರಜೆ ಪಡೆಯುತ್ತಾರೆ.
ಆದರೆ ಅಮಿತ್ ಶಾ ಹೇಳಿಕೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ವಿತ್ತ ಸಚಿವ ಹರ್ಪಾಲ್ ಸಿಂಗ್ ಸೇರಿದಂತೆ ಎಎಪಿ, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದು ಪಂಜಾಬ್ ಮರುಸಂಘಟನೆ ಕಾಯ್ದೆಗೆ ವಿರುದ್ಧವಾಗಿದೆ. ಪಂಜಾಬ್ ಕೇಂದ್ರದ ನಿರ್ಧಾರದ ವಿರುದ್ಧ ತೀವ್ರ ಹೋರಾಟ ನಡೆಸಲಿದೆ. ಚಂಡೀಗಢದ ಮೇಲೆ ಪಂಜಾಬಿಗೆ ಇರುವ ಹಕ್ಕುಗಳನ್ನು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಮುಖ್ಯಮಂತ್ರಿ ಮಾನ್ ಕಿಡಿಕಾರಿದ್ದಾರೆ.
