ನವದೆಹಲಿ(ಅ.18): ಭಾರತೀಯ ಸೇನೆ ಸದಾ ಯುದ್ಧ ಸನ್ನದ್ಧವಾಗಿದ್ದು, ಎಂಥಹದ್ದೇ ಪರಿಸ್ಥಿತಿ ಎದುರಿಸುವ ಶಕ್ತಿ ಸೇನೆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ‘ಯುದ್ಧ ಸನ್ನದ್ದರಾಗಿರಿ ತಮ್ಮ ದೇಶದ ಯೋಧರಿಗೆ ಕರೆ ಕೊಟ್ಟಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾ, ನಾವು ನಮ್ಮ ಇಂಚಿಂಚೂ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಲು ಬದ್ಧರಾಗಿದ್ದೇವೆ. ಪ್ರಚೋದನೆಗೆ ತಕ್ಕೆ ಪ್ರತ್ಯುತ್ತರ ನೀಡಲಾಗುವುದು ಎಂದಿದ್ದಾರೆ.

ಪ್ರತಿಯೊಂದು ದೇಶ ಕೂಡಾ ಯುದ್ಧಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಇರುತ್ತದೆ. ಸೇನೆಯನ್ನು ಸೂಕ್ತ ನಿರ್ವಹಣೆ ಸ್ಥಿತಿಯಲ್ಲಿ ಇಡುವುದೇ ಅದೇ ಕಾರಣಕ್ಕಾಗಿ. ಯಾವುದೇ ಶತ್ರು ದೇಶದ ದಾಳಿ ನಡೆದಾಗ ಅದನ್ನು ತಡೆಯುವುದೇ ಸೇನೆಯ ಮುಖ್ಯ ಉದ್ದೇಶ ಎಂದು ನೆರೆಯ ಚೀನಾ ಹೆಸರು ಹೇಳದೆಯೇ ಅದಕ್ಕೆ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಗಡಿ ತಂಟೆ ಬಗ್ಗೆ ಟೀಕೆ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿರುವ ಅವರು, ರಾಹುಲ್‌ ಗಾಂಧಿ ಆಧಾರ ರಹಿತ ಆರೋಪ ಮಾಡುತ್ತಾ ಬಂದಿದ್ದಾರೆ. ಅವರ ಬಳಿ ಆರೋಪಕ್ಕೆ ಪೂರಕವಾದ ಯಾವುದೇ ದಾಖಲೆಗಳಿಲ್ಲ. ಕಾಂಗ್ರೆಸ್‌ಗೆ ಈ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಕಿಡಿ ಕಾರಿದ್ದಾರೆ.

ಬಿಹಾರ ಚುನಾವಣೆ:

ಬಿಹಾರದಲ್ಲಿ ಚಿರಾಗ್‌ ಪಾಸ್ವಾನ್‌ ನೇತೃತ್ವದ ಲೋಕಜನ ಶಕ್ತಿ ಪಾರ್ಟಿಗೆ ಸೂಕ್ತ ಸ್ಥಾನಗಳನ್ನು ನೀಡಲಾಗಿತ್ತು. ಹಲವು ಮಾತುಕತೆಗಳು ನಡೆದರೂ ಫಲ ಕೊಟ್ಟಿಲ್ಲ. ನಾನೇ ಖುದ್ದಾಗಿ ಚಿರಾಗ್‌ ಜತೆ ಮಾತನಾಡಿದ್ದೆ ಎಂದಿದ್ದಾರೆ.

ಕೋಶಿಯಾರಿ ವಿವಾದ:

ಇದೇ ವೇಳೆ ನೀವು ಯಾವಾಗ ಜಾತ್ಯಾತೀತರಾದಿರಿ ಎಂದು ಪ್ರಶ್ನಿಸಿ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆಗೆ ಅಲ್ಲಿನ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಅಂಥ ಪದಗಳ ಬಳಕೆ ಉಪೇಕ್ಷಿಸಬಹುದಿತ್ತು ಎಂದಿದ್ದಾರೆ. ಜತೆಗೆ ಮುಂದಿನ ವರ್ಷ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಪರಿವರ್ತನೆ ಉಂಟಾಗಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ರೈತರಿಗೆ ನ್ಯಾಯ:

ಹೊಸ ಕೃಷಿ ಮಸೂದೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ಮಸೂದೆಗಳಿಂದ ರೈತರಿಗೆ ಅನ್ಯಾಯವಾಗದು. ಬೆಂಬಲ ಬೆಲೆ ಮುಂದುವರಿಯಲಿದ್ದು, ವಿಪಕ್ಷಗಳು ರೈತರ ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು.

ಹಾಥ್ರಸ್‌ ಕೇಸ್‌:

ಹಾಥ್ರಸ್‌ ಪ್ರಕರಣದಲ್ಲಿ ಪೊಲೀಸರು ತಪ್ಪಾಗಿ ನಡೆದುಕೊಂಡಿದ್ದು, ಎಸ್‌ಐಟಿ ರಚಿಸುವ ಮೂಲಕ ಯೋಗಿ ಆದಿತ್ಯನಾಥ್‌ ಅದನ್ನು ಸರಿ ಪಡಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.