ನವದೆಹಲಿ[ಫೆ.27]: ಈಶಾನ್ಯ ದೆಹಲಿಯ ಹಲವಾರು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಅಪಾರ ಸಾವು ನೋವು ಸಂಭವಿಸಿದೆ. ಆದರೆ ಇವೆಲ್ಲದರ ನಡುವೆ ಹಿಂದೂ, ಮುಸಲ್ಮಾನರು ಪರಸ್ಪರ ರಕ್ಷಣೆಗೆ ನಿಂತು ಸೌಹಾರ್ದತೆ ಮೆರೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಹೌದು ಫೆಬ್ರವರಿ 25 ರಂದು ನಡೆದ ಹಿಂಸಾಚಾರದ ವೇಳೆ ಇಲ್ಲಿನ ಅಶೋಕನಗರದಲ್ಲಿ ಕೆಲ ಉದ್ರಿಕ್ತರು ಮಸೀದಿಗೆ ಬೆಂಕಿ ಹಚ್ಚಲು ಬಂದಿದ್ದಾರೆ. ಈ ವೇಳೆ ಹಿಂದೂಗಳು ಮಸೀದಿ ರಕ್ಷಣೆಗೆ ನಿಂತಿದ್ದಾರೆ. ಈ ಮಸೀದಿ ಸುತ್ತಲೂ ಸುಮಾರು 10 ಹಿಂದೂ ಬಾಂಧವರ ಮನೆ ಇತ್ತೆನ್ನಲಾಗಿದೆ. ಮಂಗಳವಾರದಂದು ಹಿಂಸಾಚಾರದಲ್ಲಿ ತೊಡಗಿದ್ದ ಗುಂಪು ಏಕಾಏಕಿ ಮಸೀದಿ ಹಾಗೂ ಮಸಲ್ಮಾನರ ಮನೆಗಳಿಗೆ ಬೆಂಕಿ ಹಚ್ಚಲು ಮುಂದಾಗಿದೆ. ಈ ವೇಳೆ ಹಿಂದೂಗಳು ಮುಸಲ್ಮಾನರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದಾರೆ ಹಾಘೂ ಮಸೀದಿಗೂ ಬೆಂಕಿ ಹಚ್ಚದಂತೆ ತಡೆದು, ಅದನ್ನು ರಕ್ಷಿಸಿದ್ದಾರೆ. 

ಆಪ್ ನಾಯಕನ ಮನೆಯಲ್ಲಿ ರಾಶಿ ರಾಶಿ ಕಲ್ಲು, ಪೆಟ್ರೋಲ್ ಬಾಂಬ್, ವಿಡಿಯೋ ವೈರಲ್!

ಇನ್ನು ಅತ್ತ ದೆಹಲಿಯ ಚಾಂದ್ಭಾಗ್ ಪ್ರದೇಶದಲ್ಲೂ ಇಂತಹುದೇ ಸೌಹಾರ್ದ ಮೆರೆದ ಘಟನೆ ನಡೆದಿದೆ. ಇಲ್ಲಿನ ಹಿಂದೂ ಹಾಗೂ ಮುಸ್ಲಿಂ ಕುಟುಂಬಗಳು ಭಾರೀ ಹಿಂಸಾಚಾಋದ ನಡುವೆಯೂ ಶಾಂತಿ, ಪ್ರೀತಿ ಸೌಹಾರ್ದತೆ ಮೆರೆದಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಇದು ಮುಸ್ಲಿಂ ಪ್ರಾಬಲ್ಯವುಳ್ಳ ಪ್ರದೇಶವಾಗಿದ್ದು, ಇಲ್ಲಿ ಕೇವಲ ಬೆರಳೆಣಿಕೆಯಷ್ಟು ಹಿಂದೂಗಳ ಮನೆ ಇವೆ. ಹೀಗಿದ್ದರೂ ಈ ಪ್ರದೇಶದಲ್ಲಿ ಮೂರು ದೇವಸ್ಥಾನಗಳಿವೆ. ಹಿಂಸಾಚಾಋದ ನಡುವೆ ಇಲ್ಲಿನ ದೇವಸ್ಥಾನಗಳಿಗೆ ಬೆಂಕಿ ಹಚ್ಚಲು ಉದ್ರಿಕ್ತರು ಮುಂದಾಗಿದ್ದು, ಮುಸಲ್ಮಾನರು ಉದ್ರಿಕ್ತರನ್ನು ತಡೆದು ದೇವಸ್ಥಾನ ರಕ್ಷಿಸಿದ್ದಾರೆ. ಅಲ್ಲದೇ ಆ ಪ್ರದೇಶದ ಯಾವೊಬ್ಬ ಹಿಂದೂಗಳಿಗೂ ನಷ್ಟವಾಗದಂತೆ ನಿಗಾ ವಹಿಸಿದ್ದಾರೆ. 

ಇನ್ನು ಈಶಾನ್ಯ ದೆಹಲಿಯ ಹಿಂಸಾಚಾರಕ್ಕೆ ಈವರೆಗೂ ಒಟ್ಟು 34 ಮಂದಿ ಬಲಿಯಾಗಿದ್ದಾರೆಂಬುವುದು ಉಲ್ಲೇಖನೀಯ.