ಕೋತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ 1,500 ಕ್ಕೂ ಹೆಚ್ಚು ಜನ
- ಕೋವಿಡ್ ನಿಯಮಗಳ ನಡುವೆಯೂ ಸಾವಿರಾರು ಜನ ಸೇರ್ಪಡೆ
- ಮಧ್ಯಪ್ರದೇಶದ ರಾಜ್‌ಗಢ್‌ನಲ್ಲಿ ನಡೆದ ಕೋತಿಯ ಅಂತ್ಯಸಂಸ್ಕಾರ
- ಕೋವಿಡ್ ನಿಯಮ ಮುರಿದ ಆರೋಪದಡಿ ಇಬ್ಬರ ಬಂಧನ

ಭೋಪಾಲ್(ಜ. 11): ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಕೋತಿಯೊಂದರ ಅಂತ್ಯಕ್ರಿಯೆಗೆ ಸುಮಾರು 1,500 ಕ್ಕೂ ಹೆಚ್ಚು ಜನರು ಸೇರಿದ ಘಟನೆ ನಡೆದಿದೆ. ಘಟನೆಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ಡಿಸೆಂಬರ್ 29 ರಂದು ಕೋತಿಯೂ ಸಾವಿಗೀಡಾಗಿತ್ತು. ಇದರ ಸಾವಿನಿಂದ ನೊಂದ ರಾಜ್‌ಗಢ್ (Rajgarh) ಜಿಲ್ಲೆಯ ದಲುಪುರ (Dalupura) ಗ್ರಾಮದ ನಿವಾಸಿಗಳು ಅಂತಿಮ ವಿಧಿಗಳನ್ನು ಆಯೋಜಿಸಿದ್ದರು. ಶವಸಂಸ್ಕಾರದ ಸ್ಥಳಕ್ಕೆ ಜನರು ಕೋತಿಯ ಶವವನ್ನು ಕೊಂಡೊಯ್ಯುವಾಗ ಸ್ತೋತ್ರಗಳನ್ನು ಪಠಿಸುತ್ತ ಮೆರವಣಿಗೆ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಅಲ್ಲದೇ ಈ ವೇಳೆ ಹರಿ ಸಿಂಗ್(Hari Singh) ಎಂಬ ಯುವಕ ಹಿಂದೂ ಸಂಪ್ರದಾಯದಂತೆ ತಲೆ ಬೋಳಿಸಿಕೊಂಡಿದ್ದಾನೆ. ಆದರೆ ಈ ಕೋತಿ ಸಾಕುಪ್ರಾಣಿಯೇನೂ ಆಗಿರಲಿಲ್ಲ. ಆದರೆ ಆಗಾಗ್ಗೆ ಹಳ್ಳಿಗೆ ಬರುತ್ತಿತ್ತು.
ಅಂತಿಮ ಸಂಸ್ಕಾರದ ನಂತರ ಗ್ರಾಮಸ್ಥರು ಒಟ್ಟಾಗಿ ಹಣ ಸಂಗ್ರಹಿಸಿ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಇಡೀ, ಗ್ರಾಮಕ್ಕೆ ವಿತರಿಸಿ ಗ್ರಾಮಸ್ಥರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. 1500ಕ್ಕೂ ಹೆಚ್ಚು ಜನರಿಗೆ ಔತಣಕೂಟ ಏರ್ಪಡಿಸಿದ್ದರು. ಈ ವಿಡಿಯೋದಲ್ಲಿ ನೂರಾರು ಜನರು ಬೃಹತ್ ಪೆಂಡಾಲ್ ಕೆಳಗೆ ಸಾಲಾಗಿ ಕುಳಿತು ಊಟ ಮಾಡುತ್ತಿದ್ದಾರೆ. ಪುರುಷರು ಗುಂಪು ಗುಂಪಾಗಿ ಊಟ ಬಡಿಸುತ್ತ ಹೋಗುತ್ತಿದ್ದು ಮಹಿಳೆಯರು ಮತ್ತು ಮಕ್ಕಳು ಊಟ ಮಾಡುತ್ತಿರುವುದು ಕಂಡು ಬರುತ್ತಿದೆ.
Viral Video: ಉಸಿರು ನೀಡಿ ಗಂಭೀರ ಸ್ಥಿತಿಯಲ್ಲಿದ್ದ ಕೋತಿಯ ಜೀವ ಉಳಿಸಿದ ಆಟೋ ಚಾಲಕ
ವೇಗವಾಗಿ ಹರಡುತ್ತಿರುವ ಕೋವಿಡ್ ರೂಪಾಂತರಿಯಿಂದಾಗಿ ರಾಜ್ಯದಲ್ಲಿ CRPCಯ ಸೆಕ್ಷನ್ 144 ಜಾರಿಯಲ್ಲಿದ್ದು ದೊಡ್ಡ ದೊಡ್ಡ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಈ ಕಠಿಣ ನಿಯಮಗಳ ಮಧ್ಯೆಯೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಸಿ ಕಾರ್ಯಕ್ರಮ ಮಾಡಲಾಗಿದೆ. ಕೋವಿಡ್ ಪ್ರೋಟೋಕಾಲ್ ಉಲ್ಲಂಘಿಸಿದ ಕಾರಣಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಗ್ರಾಮದ ಅನೇಕರು ಪೊಲೀಸರ ಕ್ರಮಕ್ಕೆ ಹೆದರಿ ತಲೆಮರೆಸಿಕೊಂಡಿದ್ದಾರೆ. ದೇಶದ ಹಲವಾರು ಭಾಗಗಳಲ್ಲಿ, ಮಂಗಗಳನ್ನು ಭಗವಾನ್ ಹನುಮಾನ್ ಜೊತೆಗಿನ ಒಡನಾಟಕ್ಕಾಗಿ ಪವಿತ್ರವೆಂದು ಪರಿಗಣಿಸಲಾಗುತ್ತಿದೆ.
ರಾಯಚೂರಲ್ಲೊಬ್ಬ ಕೋತಿಗಳ ಪ್ರೇಮಿ : ನಿತ್ಯವೂ ಹತ್ತಾರು ಕೋತಿಗಳಿಗೆ ಆಹಾರ ನೀಡುವ ವ್ಯಕ್ತಿ
ಇತ್ತ ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ ನಿನ್ನೆ 2,317 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ಇನ್ನು ಮಧ್ಯಪ್ರದೇಶದ ಐದು ಜಿಲ್ಲೆಗಳಾದ ಇಂದೋರ್ (Indore), ಭೋಪಾಲ್ (Bhopal), ಗ್ವಾಲಿಯರ್ (Gwalior), ಜಬಲ್ಪುರ್ (Jabalpur) ಮತ್ತು ಸಾಗರ್ (Sagar) ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯೂ ಮೂರು ಅಂಕಿಯಲ್ಲಿದೆ.