ಅಸನ್ಸೋಲ್‌(ಏ.18): ಇತ್ತೀಚೆಗೆ ಕೂಚ್‌ ಬೆಹಾರ್‌ನಲ್ಲಿ ಭದ್ರತಾ ಪಡೆಗಳ ಗೋಲಿಬಾರ್‌ಗೆ ಬಲಿಯಾದ ನಾಲ್ವರ ಶವ ಇಟ್ಟುಕೊಂಡು ರಾರ‍ಯಲಿ ನಡೆಸಿ ರಾಜಕೀಯ ಲಾಭ ಪಡೆಯಲು ಸ್ವತಃ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಚು ರೂಪಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಂಥದ್ದೊಂದು ಆರೋಪಕ್ಕೆ ಸಾಕ್ಷ್ಯ ಎನ್ನುವಂಥ ಆಡಿಯೋವೊಂದನ್ನು ಬಿಜೆಪಿ ನಾಯಕರು ಶನಿವಾರ ಬಿಡುಗಡೆ ಮಾಡಿ, ಚುನಾವಣಾ ಆಯೋಗಕ್ಕೆ ದೂರನ್ನೂ ಸಲ್ಲಿಸಿದ್ದಾರೆ.

ಈ ನಡುವೆ, ಆಡಿಯೋ ಬಗ್ಗೆ ಶನಿವಾರ ಬಂಗಾಳದ ಅಸನ್ಸೋಲ್‌ನಲ್ಲಿ ನಡೆದ ರಾರ‍ಯಲಿಯಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಶವದ ಮೇಲೆ ದೀದಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ ಟಿಎಂಸಿ ನಾಯಕರು ಮಾತ್ರ ಇದು ‘ಬೋಗಸ್‌ ಆಡಿಯೋ’ ಎಂದು ತಿರುಗೇಟು ನೀಡಿದ್ದಾರೆ. ಇದೇ ವೇಳೆ ನನ್ನ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದ್ದು, ಈ ಕುರಿತು ಸಿಐಡಿ ತನಿಖೆ ನಡೆಸಲಾಗುವುದು ಎಂದು ಅಬ್ಬರಿಸುವ ಮೂಲಕ, ಮಾತುಕತೆ ನಡೆದಿದ್ದನ್ನು ಮಮತಾ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಮೋದಿ ಟೀಕೆ:

ಆಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ ‘ಮಮತಾ ಬ್ಯಾನರ್ಜಿಗೆ ಶವಗಳ ಮೇಲೆ ರಾಜಕೀಯ ಮಾಡುವುದು ಹಳೇ ಚಟ. ಕೂಚ್‌ಬೆಹಾರ್‌ನ ಸೀತಾಲ್‌ಕುಚಿಯಲ್ಲಿ ನಡೆದ ಐವರ ದುರದೃಷ್ಟಕರ ಸಾವಿನ ವಿಚಾರವನ್ನೂ ಅವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಆಡಿಯೋದಲ್ಲೇನಿದೆ?

- ಮಮತಾ ಮತ್ತು ಸೀತಾಲ್‌ಕುಚಿ ಟಿಎಂಸಿ ಅಭ್ಯರ್ಥಿ ಪ್ರಾರ್ಥ ಪ್ರತಿಮ್‌ ರಾಯ್‌ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ

- ‘ನೀವೇನೂ ಆತಂಕಕ್ಕೆ ಒಳಗಾಗಬೇಡಿ. ಪೊಲೀಸರ ಗುಂಡಿಗೆ ಬಲಿಯಾದ ನಾಲ್ವರ ಶವಗಳೊಂದಿಗೆ ರಾರ‍ಯಲಿ ನಡೆಸಲು ಎಲ್ಲಾ ಸಿದ್ಧತೆ ನಡೆಸಿ’ ಎಂದು ಹೇಳಿದ ಮಮತಾ

- ವಕೀಲರ ಮೂಲಕ ಈ ನಾಲ್ವರ ಹತ್ಯೆ ಬಗ್ಗೆ ಪ್ರಕರಣ ದಾಖಲಿಸಿ. ಎಸ್‌ಪಿ ಮತ್ತು ಕೇಂದ್ರೀಯ ಪಡೆಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಎಂದೂ ತಾಕೀತು

- ಜನರ ಸಾವಿನ ವಿಚಾರವನ್ನೂ ಮಮತಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ ಎಂದು ಬಿಜೆಪಿ ದೂರು, ಟೀಕೆ