* ಈಗ ಅಮೆಜಾನ್‌ನಂಥ ಇ-ಕಾಮರ್ಸ್‌ ಕಂಪನಿ ಬಳಕೆ* ಸಿಹಿತುಳಸಿ ಹೆಸರಲ್ಲಿ ಡ್ರಗ್ಸ್‌ ಮಾರಾಟ: ಅಮೆಜಾನ್‌ಗೆ ಸಂಕಷ್ಟ* ಈವರೆಗೆ ಪಾರ್ಸಲ್‌ ಸೇವೆ ಬಳಸಿ ಡ್ರಗ್ಸ್‌ ಮಾರುತ್ತಿದ್ದರು* ದೇಶದ ಹಲವು ರಾಜ್ಯಗಳಲ್ಲಿ ಪೂರೈಕೆ ಶಂಕೆ* ವಿಚಾರಣೆಗಾಗಿ ಮ.ಪ್ರ. ಪೊಲೀಸರಿಂದ ಅಮೆಜಾನ್‌ಗೆ ನೋಟಿಸ್‌

ನವದೆಹಲಿ(ನ.16): ಇ-ಕಾಮರ್ಸ್‌ ದೈತ್ಯ ಅಮೆಜಾನ್‌ (Amazon) ಅನ್ನು ಬಳಸಿಕೊಂಡು ಮಧುಮೇಹಿಗಳಿಗೆ ಅನುಕೂಲವಾಗುವ ಸಿಹಿ ತುಳಸಿ (Tulasi) ನೆಪದಲ್ಲಿ ಮರಿಜುವಾನಾ (Marijuana) ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿಚಾರಣೆಗಾಗಿ ಮಧ್ಯಪ್ರದೇಶ ಪೊಲೀಸರು (Madhya Pradesh Police) ಅಮೆಜಾನ್‌ಗೆ ನೋಟಿಸ್‌ ರವಾನಿಸಿದ್ದಾರೆ.

ಈವರೆಗೆ ಕೆಲವು ಪಾರ್ಸಲ್‌ ಕಂಪನಿಗಳು ಡ್ರಗ್ಸ್‌ ಪೂರೈಸುತ್ತಿರುವ ಪ್ರಕರಣಗಳು ವರದಿಯಾಗಿದ್ದವು. ಆದರೆ ಈಗ ಅಮೆಜಾನ್‌ನಂಥ ಕಂಪನಿ ಮೇಲೆ ಇಂಥ ಆರೋಪ ಕೇಳಿಬಂದಿರುವುದು ಸಂಚಲನ ಮೂಡಿಸಿದೆ.

ಭಾನುವಾರ 20 ಕೇಜಿ ಮರಿಜುವಾನಾ (Marijuana) ಹೊಂದಿದ್ದ ಇಬ್ಬರನ್ನು ಪೊಲೀಸರು ಮಧ್ಯಪ್ರದೇಶದಲ್ಲಿ ಬಂಧಿಸಿದ್ದರು. ಅವರು ಅಮೆಜಾನ್‌ ಇಂಡಿಯಾ ವೆಬ್‌ಸೈಟ್‌ (Amazon India Website) ಬಳಸಿ ಮಾದಕ ವಸ್ತು ಆರ್ಡರ್‌ ಮಾಡುತ್ತಿದ್ದರು ಮತ್ತು ದೇಶದ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಪತ್ತೆಯಾಗಿತ್ತು. ಅಮೆಜಾನ್‌ ಮೂಲಕ 1000 ಕೇಜಿ ನಿಷೇಧಿತ ಮರಿಜುವಾನಾವನ್ನು (Marijuana) 1.10 ಲಕ್ಷ ಕೋಟಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ವಿಶಾಖಪಟ್ಟಣದ ಕಂಪನಿಯೊಂದು ‘ಸಿಹಿ ತುಳಸಿ’ (ಸ್ಟೀವಿಯಾ) ಎಲೆಗಳ ಉತ್ಪನ್ನ ಮಾರಾಟ ಕಂಪನಿ ಎಂದು ಹೇಳಿಕೊಂಡಿತ್ತು. ಅಮೆಜಾನ್‌ನಲ್ಲಿ ತನ್ನನ್ನು ತಾನು ನೋಂದಾಯಿಸಿಕೊಂಡಿತ್ತು. ಆದರೆ ಈ ಸಿಹಿ ತುಳಸಿ ನೆಪದಲ್ಲಿ ಪಾರ್ಸಲ್‌ನಲ್ಲಿ ಡ್ರಗ್ಸ್‌ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಈ ಸಂಬಂಧ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಅಮೆಜಾನ್‌ ಅಧಿಕಾರಿ ವರ್ಗಕ್ಕೆ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಅಮೆಜಾನ್‌ ಪರ ವಕೀಲರೂ ಹಾಜರಾಗುವ ನಿರೀಕ್ಷೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ನಿಷೇಧಿತ ವಸ್ತುಗಳನ್ನು ಮಾರಾಟ ಮಾಡಲು ನಾವು ಅವಕಾಶ ನೀಡುವುದಿಲ್ಲ. ಕಂಪನಿಯು ತನಿಖೆಗೆ ಸಹಕರಿಸಲಿದೆ’ ಎಂದು ಅಮೆಜಾನ್‌ ವಕ್ತಾರರು ತಿಳಿಸಿದ್ದಾರೆ. ಈ ನಡುವೆ ತನಿಖೆಯ ಭಾಗವಾಗಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಅಮೆಜಾನ್‌ ಡೆಲಿವರಿ ಕೇಂದ್ರಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೇವ್‌ ಪಾರ್ಟಿ ಮಾಡುತ್ತಿದ್ದ 25 ವಿದ್ಯಾರ್ಥಿಗಳ ಬಂಧನ

ನಗರದ ಹೊರವಲಯದ ರೆಸಾರ್ಟ್‌ವೊಂದರಲ್ಲಿ ರೇವ್‌ ಪಾರ್ಟಿ (Rave Party) ಮಾಡುತ್ತಿದ್ದ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ 25 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ಡಿವೈಎಸ್‌ಪಿ ಉಮಾಶಂಕರ್‌ ನೇತೃತ್ವದಲ್ಲಿ ಹೊಸಕೋಟೆ- ಮಾಲೂರು ರಸ್ತೆಯಲ್ಲಿ ಗೊಣಕನಹಳ್ಳಿ ಬಳಿ ಇರುವ ಐ-ಗ್ರೇಸ್‌ ರೆಸಾರ್ಟ್‌ ಮೇಲೆ ದಾಳಿ ನಡೆಸಿ, 18 ಯುವಕರು, 7 ಯುವತಿಯರನ್ನು ಬಂಧಿಸಲಾಗಿದೆ.

ಶನಿವಾರ ಸಂಜೆಯೇ ಕಾರುಗಳಲ್ಲಿ ರೆಸಾರ್ಟ್‌ ಆಗಮಿಸಿದ್ದ ವಿದ್ಯಾರ್ಥಿಗಳು ಪಾರ್ಟಿ ಮಾಡುತ್ತಿದ್ದರು. ಭಾನುವಾರ ಮುಂಜಾನೆ 5 ಗಂಟೆಯಾದರೂ ಡಿ.ಜೆ.ಸದ್ದು, ಕೂಗಾಟದ ಕೇಳಿಬಂದಿದ್ದು, ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಪಾರ್ಟಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಡ್ರಗ್ಸ್‌ ಹಾಗೂ ದುಬಾರಿ ಬೆಲೆ ಮದ್ಯ ಲಭಿಸಿದ್ದು, ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ದಾಳಿ ಮಾಡುತ್ತಿದ್ದಂತೆ, ನಾವು ಹುಟ್ಟುಹಬ್ಬದ ಆಚರಣೆ ಮಾಡಲು ಬಂದಿರುವುದಾಗಿ ಸುಳ್ಳು ಹೇಳಿ, ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಯತ್ನಿಸಿದ್ದಾರೆ. ಆದರೆ, ಪೊಲೀಸರು ವಿಚಾರಣೆ ಮುಂದುವರೆಸಿದಾಗ ಮದ್ಯಪಾನ, ಧೂಮಪಾನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಅಲ್ಲದೇ ಮಾದಕ ವಸ್ತುಗಳ ಸೇವನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.