ಕೆಲವೇ ದಿನಗಳ ಅಂತರದಲ್ಲಿ ಅಮರನಾಥ ಯಾತ್ರೆ ಮತ್ತೆ ಸ್ಥಗಿತಗೊಂಡಿದೆ.  ಭಾರಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ ಕಾರಣ ಇತ್ತೀಚೆಗೆ ಯಾತ್ರೆ ಸ್ಥಗಿತಗೊಂಡಿತ್ತು. ಇದೀಗ ರಂಬನ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಕಾರಣ ತಾತ್ಕಾಲಿಕವಾಗಿ ಯಾತ್ರೆ ಸ್ಥಗಿತಗೊಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ(ಜು.23): ಪವಿತ್ರ ಅಮರನಾಥ ಯಾತ್ರೆ ಮತ್ತೊಂದು ವಿಘ್ನ ಎದುರಾಗಿದೆ. ಕೆಲವೇ ದಿನಗಳ ಅಂತರದಲ್ಲಿ ಮತ್ತೆ ದಕ್ಷಿಣ ಕಾಶ್ಮೀರದಲ್ಲಿ ಭಾರಿ ಕುಸಿತ ಸಂಭವಿಸಿದೆ. ಇದರ ಪರಿಣಾಮ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಮರನಾಥ ಯಾತ್ರೆಗೆ ತೆರಳು ಜಮ್ಮು-ಶ್ರೀನಗರ ರಾಷ್ಟ್ರೀ ಹೆದ್ದಾರಿಯ ರಂಬನ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಬಾಲ್ಟಾಲ್ ದಾರಿ ಮೂಲಕ ಅಮರನಾಥ ದರ್ಶನ ಮಾಡಲು ಹೊರಟ ಯಾತ್ರಿಕರಿಗೆ ಸಮಸ್ಯೆಯಾಗಿದೆ. ಭೂಕುಸಿತ ಜೊತೆ ಹವಾಮಾನ ವೈಪರಿತ್ಯ ಕೂಡ ಯಾತ್ರೆಗೆ ಹಿನ್ನಡೆಯಾಗಿದೆ. ಮುಂದಿನ ಆದೇಶದವರೆಗೆ ಯಾತ್ರೆ ಸ್ಥಗಿತಗೊಳಿಸಲಾಗಿದೆ. ಸದ್ಯ ಹೆದ್ದಾರಿ ಬಳಿ ಸಂಭವಿಸಿದ ಭೂಕುಸಿತದಿಂದ ರಸ್ತೆಗಳು ಕೊಚ್ಚಿ ಹೋಗಿದೆ. ಹೀಗಾಗಿ ತಾತ್ಕಾಲಿಕ ರಸ್ತೆ ನಿರ್ಮಾಣ ಕಾರ್ಯವೂ ನಡೆಯುತ್ತಿದೆ.

ಯಾತ್ರಿ ನಿವಾಸ ಬೇಸ್ ಕ್ಯಾಂಪ್‌ನಿಂದ 2,504 ಭಕ್ತರು ಬಾಲ್ಟಾಲ್ ಮಾರ್ಗ ಮೂಲಕ ಅಮರನಾಥನ ದರ್ಶನಕ್ಕೆ ಹೊರಟಿದ್ದರು. ಆದರೆ ರಂಬನ್ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ರಸ್ತೆಗಳು ಭೂಕುಸಿತಕ್ಕೆ ಕೊಚ್ಚಿ ಹೋಗಿದೆ. ಹೀಗಾಗಿ ಭಕ್ತರು ರಂಬನ್ ಜಿಲ್ಲೆಯಲ್ಲಿ ಉಳಿದುಕೊಳ್ಳಬೇಕಾಗಿದೆ. ಪಹಲ್ಗಾಮ್ ಮಾರ್ಗ ಮೂಲಕ ತೆರಳಿದ 4,549 ಯಾತ್ರಾರ್ಥಿಗಳು ಪ್ರಯಾಣ ಮುಂದುವರಿಸಿದ್ದಾರೆ. ಇನ್ನು ಅಮರನಾಥ ದರ್ಶನ ಮಾಡಿ ಹಿಂತಿರುವ ಭಕ್ತರ ಮಾರ್ಗವನ್ನು ಬದಲಿಸಲಾಗಿದೆ. ರಂಬನ್ ಜಿಲ್ಲೆ ಮೂಲಕ ಆಗಮಿಸಬೇಕಿದ್ದ ಯಾತ್ರಾರ್ಥಿಗಳನ್ನು ಬದಲಿ ಮಾರ್ಗದ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.

ಅಮರನಾಥ ಯಾತ್ರೆ, ಹಲವರ ಪ್ರಾಣ ಬಲಿ ಪಡೆದ ದಿಢೀರ್ ಪ್ರವಾಹದ ಹಿಂದೆ ಚೀನಾ ಸಂಚು? ಸೌಂಡ್‌ ವೆಬ್‌ ಅಂದ್ರೇನು?

ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ರಂಬನ್ ಜಿಲ್ಲೆ ಸೇರಿದಂತೆ ದಕ್ಷಿಣ ಕಾಶ್ಮೀರದ ಹಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ಶನಿವಾರ ಶ್ರೀಗನರ- ಜಮ್ಮು ಹೆದ್ದಾರಿ ಬಂದ್ ಮಾಡಲಾಗಿದೆ. ಯಾವುದೇ ಯಾತ್ರಿಕರನ್ನ ಹಾಗೂ ಇತರ ಪ್ರಯಾಣಿಕರನ್ನು ಈ ದಾರಿ ಮೂಲಕ ಬಿಡಲು ಸಾಧ್ಯವಿಲ್ಲ. ಇಂದು ಸಂಜೆಯೊಳಗೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗುವುದು ಎಂದು ಸ್ಥಳೀಯ ಆಡಳಿತ ಹೇಳಿದೆ. 

ಅಮರನಾಥ ದರ್ಶನ ಪಡೆಯಲು ಬಲ್ಟಾಲ್ ಮಾರ್ಗ ಮೂಲಕ ತೆರಳಿದರೆ 18 ಕಿ.ಮೀ ಕ್ರಮಿಸಬೇಕು. ಇನ್ನು ಪಹಲ್ಗಾಮ್ ದಾರಿ ಮೂಲಕ ತೆರಳಿದರೆ 48 ಕಿ.ಮೀ ಕ್ರಮಿಸಬೇಕು. ಇದಕ್ಕೆ 4 ದಿನಗಳ ಅವಶ್ಯಕತೆ ಇದೆ. ಎರಡು ದಾರಿಯಲ್ಲಿ ಹೆಲಿಕಾಪ್ಟರ್ ಸೇವೆಗಳು ಲಭ್ಯವಿದೆ.

Amarnath Yatra Kannadigas; ನಮ್ಮ ಕಣ್ಣೆದುರೇ ಟೆಂಟು, ಜನರು ಕೊಚ್ಚಿಹೋದರು!

ಅಮರನಾಥ ಗುಹೆ ಬಳಿ ಸಂಭವಿಸಿದ ಮೇಘಸ್ಫೋಟ
ಜೂನ್ 30 ರಿಂದ ಆರಂಭಗೊಂಡಿರುವ ಅಮರನಾಥ ಯಾತ್ರೆ ಯಾವುದೇ ಅಡ್ಡಿ ಆತಂಕವಿಲ್ಲದೆ ಸರಾಗವಾಗಿ ಸಾಗಿತ್ತು. ಆದರೆ ಜುಲೈ 8 ರಂದು ಅಮರನಾಥ ಗುಹೆ ಬಳಿ ಮೇಘಸ್ಫೋಟ ಸಂಭವಿಸಿತ್ತು. ಏಕಾಏಕಿ ಸಂಭವಿಸಿದ ಮೇಘಸ್ಫೋಟಕ್ಕೆ ಪ್ರವಾಹ ಸೃಷ್ಟಿಯಾಗಿತ್ತು. ಈ ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದರು. ಇದರಿಂದ ಅಮರನಾಥ ಯಾತ್ರೆ ಸ್ಥಗಿತಗೊಳಿಸಲಾಗಿತ್ತು. ಗುಹೆಯ ಬಳಿಯಿಂದ ಹೆಲಿಕಾಪ್ಟರ್‌ನಲ್ಲಿ 65 ಟ್ರಿಪ್‌ಗಳನ್ನು ನಡೆಸಿ 165 ಮಂದಿಯನ್ನುರಕ್ಷಣೆ ಮಾಡಲಾಗಿತ್ತು. ಹವಾಮಾನ ವೈಪರಿತ್ಯದಿಂದ ತಡೆಯಲಾಗಿದ್ದ ಹೆಲಿಕಾಪ್ಟರ್‌ ಸೇವೆಯನ್ನು ಮತ್ತೆ ಆರಂಭಿಸಲಾಗಿತ್ತು.

ಅಮರನಾಥ ಗುಹೆ ಬಳಿ ಸಂಭವಿಸಿದ ಪ್ರವಾಹಕ್ಕೆ ಕೊಚ್ಚಿ ಹೋದ ಯಾತ್ರಾರ್ಥಿಕರು ಸೇರಿದಂತೆ ಜೂನ್ 30 ರಿಂದ ಇಲ್ಲೀವರಗೆ 49 ಜನ ಮೃತಪಟ್ಟಿದ್ದಾರೆ. ಈ ವರ್ಷ 1.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅಮರನಾಥ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಹೃದಯಾಘಾತ, ಅಧಿಕರಕ್ತದೊತ್ತಡ ಮೊದಲಾದ ಕಾರಣಗಳಿಂದಾಗಿ ಹಲವಾರು ಯಾತ್ರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿನ ಹಿಮಾಲಯದಲ್ಲಿನ 3,880 ಮೀ. ಎತ್ತರದಲ್ಲಿರುವ ಅಮರನಾಥ ಗುಹಾ ದೇವಾಲಯಕ್ಕೆ ಕಾಶ್ಮೀರದ 2 ಬೇಸ್‌ ಕ್ಯಾಂಪ್‌ಗಳಿಂದ ಯಾತ್ರಿಕರ ತಂಡಗಳು ಅಮರನಾಥ ದರ್ಶನಕ್ಕೆ ತೆರಳಲಿದೆ.