ಜುಲೈ 3 ರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, ತಾವಿ ನದಿ ತೀರದಲ್ಲಿ ಸ್ಪಾಟ್ ರಿಜಿಸ್ಟ್ರೇಷನ್ ಶುರುವಾಗಿದೆ. ವಾರ್ಷಿಕ ಯಾತ್ರೆಗೆ ಅಮರನಾಥ ದೇಗುಲ ಮಂಡಳಿ ಮಾಡಿರುವ ಭದ್ರತೆ ಮತ್ತು ವ್ಯವಸ್ಥೆಗಳನ್ನು ಭಕ್ತರು ಶ್ಲಾಘಿಸಿದ್ದಾರೆ.

ಈ ವರ್ಷದ ಅಮರನಾಥ ಯಾತ್ರೆ ಜು.3 ರಿಂದ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ತಾವಿ ನದಿ ತೀರದಲ್ಲಿ ಸ್ಪಾಟ್ ರಿಜಿಸ್ಟ್ರೇಷನ್ ನಡೆಯುತ್ತಿದ್ದು. ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಯಾತ್ರಾರ್ಥಿಗಳ ಸುಗಮ ಸಂಚಾರಕ್ಕಾಗಿ ಅಮರನಾಥ ದೇಗುಲ ಮಂಡಳಿಯು ಭಾರೀ ಭದ್ರತೆ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿಂದೆ ಆನ್‌ಲೈನ್, ಬ್ಯಾಂಕ್‌ಗಳ ಮೂಲಕ ನೋಂದಣಿ ಮಾಡಿಕೊಳ್ಳುತ್ತಿದ್ದ ಯಾತ್ರಾರ್ಥಿಗಳು ಇದೀಗ ಸ್ಪಾಟ್ ರಿಜಿಸ್ಟ್ರೇಶನ್‌ಗಾಗಿ ಆಗಮಿಸಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.

ಅಮರನಾಥ ಯಾತ್ರಾರ್ಥಿ ಸಂತಸ:

ನಾವು ಅಮರನಾಥ ಯಾತ್ರೆಗೆ ಇದೇ ಮೊದಲ ಸಲ ಹೋಗ್ತಿದ್ದೇವೆ. ತುಂಬಾ ಖುಷಿಯಾಗ್ತಿದೆ. ಈ ಯಾತ್ರೆ ಪೂರ್ಣಗೊಳಿಸಬೇಕು ಅಂತಾ ನಾವು ದೃಢ ಸಂಕಲ್ಪ ಮಾಡಿದ್ದೇವೆ, ನಮ್ಮ ಗುರಿ ಒಂದೇ ಅಮರನಾಥನ ದರ್ಶನ ಪಡೆಯುವುದು. ನಮಗೆ ಅಮರನಾಥ ದರ್ಶನ ಪಡೆಯುವುದು ಬಿಟ್ಟರೆ ಬೇರೆ ಯಾವುದೇ ಆಸೆಗಳಿಲ್ಲ. ಹಲವು ವರ್ಷಗಳಿಂದ ಅಮರಾಥ ಯಾತ್ರೆ ಮಾಡಬೇಕೆಂಬ ಕನಸು ಈಗ ನನಸಾಗಿದೆ, ಅಮರನಾಥ ಯಾತ್ರೆಗೆ ತೆರಳಲು ನಮಗೆ ಅವಕಾಶ ಸಿಕ್ಕಿದೆ ಹೀಗಾಗಿ ನಾವು ನಮ್ಮ ಸರದಿಗಾಗಿ ಕಾಯುತ್ತಿದ್ದೇವೆ, ಭಕ್ತನೊಬ್ಬ ಸಂತಸ ಹಂಚಿಕೊಂಡಿದ್ದಾರೆ.

ಬಿಕಾನೇರ್‌ನಿಂದ ಬಂದಿದ್ದ ಮತ್ತೊಬ್ಬ ಭಕ್ತ ಚಂದ್ರಶೇಖರ್ ಚಂಗಾನಿ, ಅಮರನಾಥ ದೇಗುಲ ಮಂಡಳಿಯ ಭದ್ರತೆ, ಅಚ್ಚುಕಟ್ಟಾದ ವ್ಯವಸ್ಥೆ ಕಂಡು ಹಾಡಿಹೊಗಳಿದ್ದಾರೆ. 'ಅಮರನಾಥ ಯಾತ್ರೆಗೆ ತೆರಳಲು ಎಲ್ಲ ವ್ಯವಸ್ಥೆ ಚೆನ್ನಾಗಿವೀ. ನಾವು ಬಿಕಾನೇರ್‌ನಿಂದ ಹೊರಟೆವು. ಅಮರನಾಥ ದೇಗುಲ ಮಂಡಳಿಯು ಭದ್ರತೆ ಮತ್ತು ಇತರ ವ್ಯವಸ್ಥೆಗಳೆರಡನ್ನೂ ಅಚ್ಚುಕಟ್ಟಾಗಿ ಮಾಡಿದೆ. ನಮಗೆ ಯಾವುದೇ ದೊಡ್ಡ ಸಮಸ್ಯೆ ಎದುರಾಗಿಲ್ಲ ಎಂದು ಅವರು ANI ಸುದ್ದಿಸಂಸ್ಥೆಗೆ ತಿಳಿಸಿದರು.

ಭದ್ರತೆ ಮತ್ತಷ್ಟು ಬಿಗಿ

ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಮಂಗಳವಾರ ತಮ್ಮ ಸಿದ್ಧತೆಗಳನ್ನು ಮತ್ತಷ್ಟು ಚುರುಕುಗೊಳಿಸಿವೆ. ಯಾತ್ರಾ ಮಾರ್ಗಗಳಲ್ಲಿ ಭಯೋತ್ಪಾದನಾ ನಿಗ್ರಹ ಅಣಕು ಕಾರ್ಯಾಚರಣೆಗಳನ್ನು ನಡೆಸಿ, ಬಹುಹಂತದ ಭದ್ರತೆಯನ್ನು ನೀಡಿದೆ. ಶ್ರೀನಗರದ ಪಠಾಣ್ ಚೌಕ್ ಬೇಸ್ ಕ್ಯಾಂಪ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಯಾತ್ರಿ ನಿವಾಸ್, ಶ್ರೀ ಪ್ರೇಮ್ ಗರ್ಗ್ ಭವನದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಅರೆಸೇನಾ ಪಡೆಗಳು ಮಂಗಳವಾರ ಭಯೋತ್ಪಾದನಾ ನಿಗ್ರಹ ಅಣಕು ಕಾರ್ಯಾಚರಣೆ ನಡೆಸಿದವು.

ಅಮರನಾಥ ಯಾತ್ರೆಯ ಬಗ್ಗೆ

ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿ ಸುಮಾರು 3,880 ಮೀಟರ್ ಎತ್ತರದಲ್ಲಿರುವ ಪವಿತ್ರ ಅಮರನಾಥ ಗುಹಾ ದೇಗುಲದ ವಾರ್ಷಿಕ ಯಾತ್ರೆಯು ದೇಶದ ಪ್ರಮುಖ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿದೆ. ಶಿವನನ್ನು ಸಂಕೇತಿಸುವ, ನೈಸರ್ಗಿಕವಾಗಿ ರೂಪುಗೊಂಡ ಹಿಮದ ಶಿವಲಿಂಗದ ದರ್ಶನಕ್ಕೆ ಭಕ್ತರು ಈ ಯಾತ್ರೆ ಕೈಗೊಳ್ಳುತ್ತಾರೆ. ಈ ವರ್ಷದ 57 ದಿನಗಳ ಯಾತ್ರೆಯು ಜುಲೈ 3 ರಂದು ಏಕಕಾಲದಲ್ಲಿ ಎರಡು ಮಾರ್ಗಗಳಿಂದ ಆರಂಭವಾಗಲಿದೆ. ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48-ಕಿ.ಮೀ. ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂದರ್‌ಬಲ್ ಜಿಲ್ಲೆಯ ಕಡಿದಾದ ಆದರೆ ಕಡಿಮೆ ಅಂತರದ 14-ಕಿ.ಮೀ. ಬಾಲ್ಟಾಲ್ ಮಾರ್ಗದಲ್ಲಿ ಯಾತ್ರೆ ಸಾಗಲಿದೆ. ಯಾತ್ರೆಯು ಆಗಸ್ಟ್ 28 ರಂದು ರಕ್ಷಾ ಬಂಧನ ಹಬ್ಬದ ದಿನದಂದು ಮುಕ್ತಾಯಗೊಳ್ಳಲಿದೆ. (ANI)

(ಈ ವರದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್‌ನ್ಯೂಸ್ ಸಂಪಾದಕೀಯ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಇದನ್ನು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)