Asianet Suvarna News Asianet Suvarna News

4 ವರ್ಷಗಳ ಸಂಘರ್ಷ, ಕ್ಯಾಪ್ಟನ್ ಕೆಳಗಿಳಿಸಿದ ಸಿಧು!

* ಅಮರೀಂದರ್‌ ಎದುರು ಕಡೆಗೂ ಗೆದ್ದ ಸಿಧು

* ಇಬ್ಬರೂ ನಾಯಕರ ನಡುವೆ 4 ವರ್ಷಗಳಿಂದ ನಡೆಯುತ್ತಿದ್ದ ಸಂಘರ್ಷ

* ಡಿಸಿಎಂ ಪಟ್ಟಕ್ಕಾಗಿ ಆರಂಭವಾದ ಕದನ ಸಿಎಂ ತಲೆದಂಡದಲ್ಲಿ ಅಂತ್ಯ

Amarinder Singh resigns as Punjab chief minister after 4 years fight with sidhu pod
Author
Bangalore, First Published Sep 19, 2021, 8:48 AM IST

ಚಂಡೀಗಢ(ಸೆ.19): ಪಂಜಾಬ್‌ ಕಾಂಗ್ರೆಸ್ಸಿನ ಅತ್ಯಂತ ಹಿರಿಯ ನಾಯಕ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ನಡುವೆ ಐದು ವರ್ಷಗಳ ಹಿಂದೆ ಆರಂಭವಾದ ಸಂಘರ್ಷ ಇದೀಗ ಕ್ಯಾಪ್ಟನ್‌ ತಲೆದಂಡದೊಂದಿಗೆ ಮತ್ತೊಂದು ಮಜಲು ತಲುಪಿದೆ. ಅಮರೀಂದರ್‌ ವಿರುದ್ಧದ ಹೋರಾಟದಲ್ಲಿ ಕಡೆಗೂ ಸಿಧು ಕೈ ಸ್ಪಷ್ಟವಾಗಿ ಮೇಲಾಗಿದೆ.

ತಾವು ಪ್ರತಿನಿಧಿಸಿಕೊಂಡು ಬಂದಿದ್ದ ಅಮೃತಸರದಲ್ಲಿ ತಮ್ಮನ್ನು ಕೈಬಿಟ್ಟು ಅರುಣ್‌ ಜೇಟ್ಲಿ ಅವರಿಗೆ 2014ರಲ್ಲಿ ಬಿಜೆಪಿ ಟಿಕೆಟ್‌ ಘೋಷಿಸಿದ್ದರಿಂದ ಸಿಟ್ಟಾದ ಸಿಧು ಆ ಪಕ್ಷವನ್ನು ತೊರೆದಿದ್ದರು. 2017ರ ಜನವರಿಯಲ್ಲಿ ಕಾಂಗ್ರೆಸ್ಸಿಗೆ ಸೇರ್ಪಡೆಯಾದರು. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದ ಅವರು ಉಪಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಹಲವು ವರ್ಷಗಳಿಂದ ಪಕ್ಷ ಸಂಘಟಿಸಿದ್ದ ನಾಯಕರನ್ನು ಕಡೆಗಣಿಸಿ ಕೆಲವೇ ತಿಂಗಳ ಹಿಂದೆ ಪಕ್ಷಕ್ಕೆ ಆಗಮಿಸಿದ ಸಿಧು ಅವರಿಗೆ ಡಿಸಿಎಂ ಪಟ್ಟನೀಡಲು ಅಮರೀಂದರ್‌ ಒಪ್ಪಲಿಲ್ಲ. ಹೈಕಮಾಂಡ್‌ ಒತ್ತಡಕ್ಕೂ ಮಣಿಯಲಿಲ್ಲ. ಅಲ್ಲಿಂದ ಇಬ್ಬರ ನಡುವೆ ಸಂಘರ್ಷ ಆರಂಭವಾಯಿತು.

ವರಿಷ್ಠರ ಒತ್ತಡಕ್ಕೆ ಮಣಿದು ಸಿಧು ಅವರನ್ನು ಸಂಪುಟಕ್ಕೆ ಸೇರಿಸಿಕೊಂಡ ಅಮರೀಂದರ್‌ ಸ್ಥಳೀಯಾಡಳಿತ ಖಾತೆ ನೀಡಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಅಮರೀಂದರ್‌ ತಮಗೆ ಚಂಡೀಗಢ ಟಿಕೆಟ್‌ ತಪ್ಪಿಸಿದರು ಎಂದು ಸಿಧು ಪತ್ನಿ ನವಜೋತ್‌ ಕೌರ್‌ ಆರೋಪಿಸುವುದರೊಂದಿಗೆ ಸಂಘರ್ಷ ತೀವ್ರವಾಯಿತು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆ ತೋರಲು ಸಿಧು ಸರಿಯಾಗಿ ಖಾತೆ ನಿರ್ವಹಿಸದ್ದು ಕಾರಣ ಎಂದು ಹೇಳಿ ಸಿಧು ಖಾತೆಯನ್ನು ಅಮರೀಂದರ್‌ ಬದಲಿಸಿದರು. ಬಳಿಕ ಸಿಧು ಪಂಜಾಬ್‌ ಸಂಪುಟ ತೊರೆದು ಅಮರೀಂದರ್‌ ಅವರ ಕಟು ಟೀಕಾಕಾರರಾದರು.

ಇಬ್ಬರನ್ನೂ ಒಂದು ಮಾಡಲು ಹೈಕಮಾಂಡ್‌ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಿಧು ಪಕ್ಷ ತೊರೆದು ಆಪ್‌ ಸೇರಬಹುದು ಎಂಬ ವದಂತಿ ಹರಿದಾಡಿದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಅಮರೀಂದರ್‌ ವಿರೋಧ ಮಣಿಸದೆ ಕಳೆದ ಜುಲೈನಲ್ಲಿ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಆನಂತರ ಅಮರೀಂದರ್‌ ಹಾಗೂ ಸಿಧು ಬಣಗಳ ಸಂಘರ್ಷ ಭುಗಿಲೆದ್ದಿತು. ಆರೋಪ- ಪ್ರತ್ಯಾರೋಪ, ಶೀತಲ ಸಮರಗಳು ನಡೆದವು. ಸಿಧು ಸಲಹೆಗಾರರೊಬ್ಬರು ಕಾಶ್ಮೀರ ವಿಚಾರವಾಗಿ ವಿವಾದಿತ ಹೇಳಿಕೆ ನೀಡಿದರು ಎಂದು ಅಮರೀಂದರ್‌ ಬೆಂಬಲಿಗರು ಸಭೆ ನಡೆಸಿ ಅವರನ್ನು ವಜಾಗೊಳಿಸುವಲ್ಲಿ ಯಶಸ್ವಿಯಾದರು. ಸಿಧು ಬೆಂಬಲಿಗರು ಅಮರೀಂದರ್‌ ನಾಯಕತ್ವ ಬದಲಿಸಬೇಕು ಎಂಬ ಬೇಡಿಕೆ ಇಟ್ಟು ಹೈಕಮಾಂಡ್‌ ಎದುರು ಲಾಬಿ ಮಾಡಿದರು. ಈಗ ಸಿಧು ಹಾಗೂ ಬೆಂಬಲಿಗರ ವಾದಕ್ಕೆ ಮನ್ನಣೆ ಸಿಕ್ಕಿದೆ. ಸಿಧು ಮಣಿಸಲು ಹೋಗಿ ಅಮರೀಂದರ್‌ ತಾವೇ ಹಿನ್ನಡೆ ಅನುಭವಿಸಿದ್ದಾರೆ.

Follow Us:
Download App:
  • android
  • ios