4ನೇ ದಿನವೇ ಭಾರೀ ವಿವಾದ ಕೇಂದ್ರ ಬಿಂದುವಾಗಿ ಹೊರಹೊಮ್ಮಿದ ಭಾರತ್‌ ಜೋಡೋ ಯಾತ್ರೆ 

ನವದೆಹಲಿ(ಸೆ.11):  2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆ, ತನ್ನ 4ನೇ ದಿನವೇ ಭಾರೀ ವಿವಾದ ಕೇಂದ್ರ ಬಿಂದುವಾಗಿ ಹೊರಹೊಮ್ಮಿದೆ. ಪಾದಯಾತ್ರೆಯ ಭಾಗವಾಗಿ ಶನಿವಾರ ರಾಹುಲ್‌ ತಮಿಳುನಾಡಿನಲ್ಲಿ ಕ್ರಿಶ್ಚಿಯನ್‌ ಪಾದ್ರಿಯೊಬ್ಬರ ಜೊತೆ ಸಂವಾದ ನಡೆದಿದ್ದು, ಈ ವೇಳೆ ಜಾರ್ಜ್‌ ಪೊನ್ನಯ್ಯ ಎಂಬ ಪಾದ್ರಿ ಹಿಂದೂ ದೇವತೆಗಳನ್ನು ಅವಮಾನಿಸಿದರೂ ರಾಹುಲ್‌ ಸುಮ್ಮನೆ ತಲೆಯಾಡಿಸಿ ಕುಳಿತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಪಾದ್ರಿ ಜೊತೆಗಿನ ರಾಹುಲ್‌ ವಿಡಿಯೋ ವೈರಲ್‌ ಆಗಿದ್ದು, ‘ರಾಹುಲ್‌ ಮತ್ತು ಪಾದ್ರಿ ಹಿಂದು ದೇವತೆಗೆ ಅವಮಾನ ಮಾಡಿದ್ದಾರೆ’ ಎಂದು ಬಿಜೆಪಿ ಈ ವಿಡಿಯೋವನ್ನು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ಅದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌, ‘ಭಾರತ್‌ ಜೋಡೋ ಪಾದಯಾತ್ರೆಯ ಯಶಸ್ಸನ್ನು ಸಹಿಸಲಾಗದೆ ಬಿಜೆಪಿಯ ‘ದ್ವೇಷದ ಫ್ಯಾಕ್ಟರಿ’ ಕೆಲಸಕ್ಕೆ ಇಳಿದಿದೆ ಎಂದು ಕಿಡಿಕಾರಿದೆ.

ದ್ವೇಷದ ರಾಜಕೀಯಕ್ಕೆ ತಂದೆ ಕಳೆದುಕೊಂಡೆ, ನನ್ನ ಪ್ರೀತಿಯ ದೇಶ ಕಳೆದುಕೊಳ್ಳಲ್ಲ: Rahul Gandhi

ಏನಿದು ವಿವಾದ?:

ಪಾದಯಾತ್ರೆ ಜೊತೆಗೆ ನಡೆಸುವ ಸಂವಾದದ ಭಾಗವಾಗಿ ರಾಹುಲ್‌ ಮತ್ತು ಇತರೆ ಕಾಂಗ್ರೆಸ್‌ ನಾಯಕರು ಶನಿವಾರ ಜಾಜ್‌ರ್‍ ಪೊನ್ನಯ್ಯ ಹಾಗೂ ಇತರೆ ಕೆಲ ಕ್ರೈಸ್ತ ಪಾದ್ರಿಗಳನ್ನು ಭೇಟಿಯಾಗಿದ್ದರು. ಈ ಮಾತುಕತೆ ರಾಹುಲ್‌ ಗಾಂಧಿ, ‘ಕ್ರಿಸ್ತನನ್ನು ದೇವರೆಂದು ಪರಿಗಣಿಸಲಾಗುತ್ತದೆಯೇ ಅಥವಾ ಇಲ್ಲವೇ?’ ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸುವ ಪಾದ್ರಿ, ‘ಕ್ರಿಸ್ತ ನಿಜವಾದ ದೇವರು. ಆತ ಮನುಷ್ಯತ್ವದಿಂದ ದೈವತ್ವಕ್ಕೆ ಏರಿದವನು... ‘ಶಕ್ತಿ’ಯಂತೆ ಅಲ್ಲ’ ಎಂದು ಹೇಳುತ್ತಾರೆ.

ಈ ವಿಡಿಯೋವನ್ನು ಟ್ವೀಟ್‌ ಮಾಡಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಸೇರಿದಂತೆ ಬಿಜೆಪಿಯ ಹಲವು ನಾಯಕರು, ಭಾರತ್‌ ಜೊಡೋ ಯಾತ್ರೆಯ ಅಸಲಿ ಮುಖ ಅನಾವರಣಗೊಂಡಿದೆ. ನವರಾತ್ರಿ ಆರಂಭಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್‌ ಪಕ್ಷದ ಹಿಂದು ವಿರೋಧಿ ಮುಖ ಹೊರಗೆ ಬಂದಿದೆ ಎಂದು ಕಿಡಿಕಾರಿದ್ದಾರೆ.

ಆಗಿದ್ದೇನು?

- ಭಾರತ್‌ ಜೋಡೋ ಯಾತ್ರೆ ವೇಳೆ ಪಾದ್ರಿಗಳ ಭೇಟಿಯಾದ ರಾಹುಲ್‌
- ಸಂವಾದ ವೇಳೆ ‘ಕ್ರಿಸ್ತ ದೇವರಾ?’ ಎಂದು ಪ್ರಶ್ನಿಸಿದ ಕಾಂಗ್ರೆಸ್‌ ನಾಯಕ
- ‘ಕ್ರಿಸ್ತ ನಿಜವಾದ ದೇವರು. ‘ಶಕ್ತಿ’ಯಂತೆ ಅಲ್ಲ’ ಎಂದ ಪಾದ್ರಿ ಜಾಜ್‌ರ್‍
- ಇದಕ್ಕೆ ತಲೆಯಾಡಿಸಿ ಸುಮ್ಮನೆ ಕುಳಿತ ರಾಹುಲ್‌ ಗಾಂಧಿ: ಆರೋಪ
- ಹಿಂದು ದೇವರ ಅವಮಾನ: ಬಿಜೆಪಿ. ಕಾಲ್ನಡಿಗೆಗೆ ಹೊಟ್ಟೆ ಕಿಚ್ಚು: ಕಾಂಗ್ರೆಸ್‌