ಹಿಂದುಗಳ ತಾಳ್ಮೆ ಯಾಕೆ ಪರೀಕ್ಷೆ ಮಾಡ್ತೀರಿ?, ಪುಣ್ಯಕ್ಕೆ ಅವರು ಕಾನೂನು ಮುರಿಯೋದಿಲ್ಲ: ಅಲಹಾಬಾದ್ ಹೈಕೋರ್ಟ್
ಆದಿಪುರುಷ್ ಚಿತ್ರದ ವಿವಾದಿತ ಡೈಲಾಗ್‌ಗಳ ಕುರಿತಾಗಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಈ ವೇಳೆ ಪದೇ ಪದೇ ಹಿಂದೂಗಳ ತಾಳ್ಮೆಯನ್ನೇಕೆ ಪರೀಕ್ಷೆ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದೆ.
ಲಕ್ನೋ (ಜೂ.27): ಆದಿಪುರುಷ್ ಚಿತ್ರದ ಆಕ್ಷೇಪಾರ್ಹ ಸಂಭಾಷಣೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆಯ ವೇಳೆ, ಪದೇ ಪದೇ ಹಿಂದುಗಳ ತಾಳ್ಮೆಯನ್ನು ಅವರ ಸಹಿಷ್ಣುತೆಯ ಮಟ್ಟವನ್ನು ಪರೀಕ್ಷೆ ಯಾಕೆ ಮಾಡ್ತೀರಿ? ಅದೃಷ್ಟವಶಾತ್ ಅವರು (ಹಿಂದುಗಳು) ಕಾನೂನು ಉಲ್ಲಂಘನೆ ಮಾಡಿಲ್ಲ. ಅದೇ ಪುಣ್ಯ ಎಂದು ಹೇಳಿದೆ. ಭಗವಾನ್ ರಾಮ ಮತ್ತು ಹನುಮಾನ್ ಸೇರಿದಂತೆ ಧಾರ್ಮಿಕ ಪಾತ್ರಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಪ್ರಸ್ತುತಪಡಿಸಿದ್ದಕ್ಕಾಗಿ ಆದಿಪುರುಷ ಚಿತ್ರದ ನಿರ್ಮಾಪಕರನ್ನು ನ್ಯಾಯಾಲಯ ಟೀಕೆ ಮಾಡಿದೆ. ಚಿತ್ರದ ಸಹ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಇದೇ ವೇಳೆ ಸೂಚಿಸಿದೆ. ಅವರಿಗೆ ನೋಟಿಸ್ ಜಾರಿ ಮಾಡುವುದರ ಜೊತೆಗೆ ವಾರದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.
ಸೌಮ್ಯವಾಗಿ ಇರುವವರನ್ನು ಮಾತ್ರವೇ ನಾವು ನಿಗ್ರಹಿಸಬೇಕೆ? ಹಾಗೆ ಎನ್ನುವುದಾದರೆ? ಇದು ಧರ್ಮದ ವಿಚಾರ ಎಂದು ಹೇಳುವುದಕ್ಕೆ ಖುಷಿಯಾಗುತ್ತದೆ. ಹಿಂದೂ ಧರ್ಮದವರು ಯಾವುದೇ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿಲ್ಲ. ಅದಕ್ಕಾಗಿ ನಾವು ಅವರಿಗೆ ಥ್ಯಾಂಕ್ಸ್ ಹೇಳಬೇಕಿದೆ. ಸಿನಿಮಾ ಹಾಲ್‌ಗೆ ನುಗ್ಗಿ ಜನರನ್ನು ಹೊರಹಾಕಿ, ಇಡೀ ಸಿನಿಮಾ ಮಂದಿರವನ್ನೇ ಮುಚ್ಚಿದ ಕೇಸ್‌ಗಳನ್ನೂ ನಾವು ನೋಡಿದ್ದೇವೆ. ಇದೇ ರೀತಿ ಈ ಬಾರಿಯೂ ಆಗಬಹುದಿತ್ತು ಎಂದು ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಪ್ರಕಾಶ್ ಸಿಂಗ್ ಅವರ ಪೀಠವು ಕೇಂದ್ರ ಚಲನಚಿತ್ರ ಮಂಡಳಿಗೆ ಹೇಳಿದೆ. ಆದಿಪುರುಷ್ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಪ್ರಮಾಣಪತ್ರ ನೀಡುವ ಮುನ್ನ ಇದೆಲ್ಲವನ್ನೂ ಯೋಚನೆ ಮಾಡಬೇಕಿತ್ತು ಎಂದಿದೆ.
ಈ ಅರ್ಜಿಯಲ್ಲಿ ಚಿತ್ರವನ್ನು ಹೇಗೆ ನಿರ್ಮಾಣ ಮಾಡಲಾಗಿದೆ ಎನ್ನುವ ಬಗ್ಗೆಯೂ ತಿಳಿಸಿದೆ. ಕೆಲವು ಧರ್ಮಗ್ರಂಥಗಳನ್ನು ಇಲ್ಲಿ ಪೂಜೆ ಮಾಡಲಾಗುತ್ತದೆ. ಅನೇಕ ಜನರು ಇಂದಿಗೂ ಮನೆಯಿಂದ ಹೊರಡುವ ಮೊದಲು ರಾಮಚರಿತ ಮಾನಸವನ್ನು ಓದುತ್ತಾರೆ ಎಂದು ಕೋರ್ಟ್ ಹೇಳಿದೆ.
ಹನುಮಾನ್, ರಾಮ, ಲಕ್ಷ್ಮಣ ಹಾಗೂ ಸೀತಾಮಾತೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈಗ ಇದು ರಾಮಾಯಣವಲ್ಲ ಆದಿಪುರುಷ್ ಎಂದು ಡಿಸ್‌ಕ್ಲೈಮರ್ ಹಾಕಿದರೆ ಆಗುತ್ತಾ? ನಮ್ಮ ಯುವಕರೇನು ಮೂರ್ಖರೇ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
ಅರ್ಜಿದಾರ ಪ್ರಿನ್ಸ್ ಲೆನಿನ್ ಮತ್ತು ರಂಜನಾ ಅಗ್ನಿಹೋತ್ರಿ ಅವರ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ಪ್ರಕಾಶ್ ಸಿಂಗ್ ಅವರ ಪೀಠವು ಸೆನ್ಸಾರ್ ಮಂಡಳಿಯು ತನ್ನ ಜವಾಬ್ದಾರಿಯನ್ನು ಪೂರೈಸಿದೆಯೇ? ಹನುಮಂತ ಮತ್ತು ಸೀತಾ ಮಾತೆಯನ್ನು ಈ ರೀತಿ ತೋರಿಸಿ ಸಮಾಜಕ್ಕೆ ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ? ಎಂದು ಪ್ರಶ್ನೆ ಮಾಡಿದೆ. ಸಾಲಿಸಿಟರ್ ಜನರಲ್ ಅವರಿಂದ ಪ್ರತಿಕ್ರಿಯೆಯನ್ನು ಕೋರಿದ ಪೀಠವು, ಇದು ಗಂಭೀರ ವಿಷಯವಾಗಿದೆ. ಸೆನ್ಸಾರ್ ಮಂಡಳಿಗೆ ಈ ಚಿತ್ರಕ್ಕೆ ಹೇಗೆ ಸರ್ಟಿಫಿಕೇಟ್ ನೀಡಿದ್ದೀರಿ ಎಂದು ಕೇಳಬಹುದೇ, ಏಕೆಂದರೆ ಈ ವಿಷಯದಲ್ಲಿ ರಾಜ್ಯ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದಿದೆ.
ಹೀನಾಯ ಸ್ಥಿತಿಯಲ್ಲಿ ಆದಿಪುರುಷ್ ಕಲೆಕ್ಷನ್: ಹಾಕಿದ ಬಂಡವಾಳ ಬರುವುದೂ ಡೌಟು?
ಈ ನಡುವೆ, "ಅವರ ಮೂಲಭೂತ ಮೌಲ್ಯಗಳು ಮತ್ತು ಪಾತ್ರಗಳನ್ನು ನಾಶಪಡಿಸುವ" ಮೂಲಕ ಚಲನಚಿತ್ರದಲ್ಲಿ ಚಿತ್ರಿಸಲಾದ ವಿವಿಧ ದೇವತೆಗಳ ಹಿಂದೂಗಳು ಮತ್ತು ಭಕ್ತರ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಆದಿಪುರುಷ್ ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ. ಮತ್ತು ವಾಲ್ಮೀಕಿ ರಾಮಾಯಣದ 'ಮೂಲ ರಚನೆ'ಯನ್ನು ಮಾರ್ಪಡಿಸಿದ ಆರೋಪವನ್ನೂ ಚಿತ್ರದ ಮೇಲೆ ಹೊರಿಸಲಾಗಿದೆ.
'ಆದಿಪುರುಷ್' ಟಿಕೆಟ್ ದರ ದಿಢೀರ್ ಕುಸಿತ; ಎಷ್ಟಿದೆ ಈಗ ಬೆಲೆ?