'ವಝುಕಾನಾ ಸರ್ವೇ ಕುರಿತು ನಿಮ್ಮ ಅಭಿಪ್ರಾಯ ಸಲ್ಲಿಸಿ..' ಮಸೀದಿ ಸಮಿತಿಗೆ ಅಲಹಾಬಾದ್ ಹೈಕೋರ್ಟ್ ಸೂಚನೆ
ಜ್ಞಾನವಾಪಿ ಮಸೀದಿ ವಝುಖಾನಾದಲ್ಲಿ ಸಿಕ್ಕಿರುವ ಶಿವಲಿಂಗದ ಎಎಸ್‌ಐ ಸರ್ವೇ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಮಸೀದಿ ಸಮಿತಿಗೆ ಅಲಹಾಬಾದ್ ಹೈಕೋರ್ಟ್ ಸೂಚನೆ ನೀಡಿದೆ.
ವಾರಣಾಸಿ (ಜ.31): ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಎರಡು ಪ್ರಮುಖ ತೀರ್ಮಾನಗಳು ಬುಧವಾರ ಹೊರಬಿದ್ದಿದೆ. ವಾರಣಾಸಿ ಜಿಲ್ಲಾ ಕೋರ್ಟ್, ಜ್ಞಾನವಾಪಿ ಆವರಣದ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ ನೀಡಿದ್ದರೆ, ಇನ್ನೊಂದೆಡೆ ಅಲಹಾಬಾದ್ ಹೈಕೋರ್ಟ್ ಕೂಡ ಮಸೀದಿ ಸಮಿತಿಗೆ ಮಹತ್ವದ ಸೂಚನೆ ನೀಡಿದೆ. ಜ್ಞಾನವಾಪಿ ಮಸೀದಿ ವಝುಖಾನಾದ ಎಎಸ್‌ಐ ಸಮೀಕ್ಷೆ ನಡೆಸುವಂತೆ ಹಿಂದೂ ಪಕ್ಷವು ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದೆ. ಈ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಮಸೀದಿ ಸಮಿತಿಯನ್ನು ಕೇಳಿದೆ. ಅದಲ್ಲದೆ, ಭಾರತೀಯ ಪುರಾತತ್ವ ಇಲಾಖೆ ಮಾಡಿರವ ಜ್ಞಾನವಾಪಿ ಸಮೀಕ್ಷೆಯ ವರದಿಯು ಪರಿಗಣನೆಗೆ ಯೋಗ್ಯವಾಗಿದೆ ಎಂದು ನ್ಯಾಯಾಲಯವು ತಿಳಿಸಿದೆ. ಈ ನಡುವೆ ಹಿಂದೂ ಮಹಿಳೆಯರು ಜ್ಞಾನವಾಪಿಯಲ್ಲಿನ 'ಶಿವಲಿಂಗ'ದ ಎಎಸ್‌ಐ ಸಮೀಕ್ಷೆಗಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಬುಧವಾರ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಗೆ (ಮುಸ್ಲಿಂ ಕಡೆ) ಈ ಕುರಿತಾಗಿ ನೋಟಿಸ್ ಜಾರಿ ಮಾಡಿದೆ ಮತ್ತು ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ವುಜುಖಾನಾ ಪ್ರದೇಶದ ಎಎಸ್‌ಐ ಸಮೀಕ್ಷೆಯನ್ನು ಕೋರಿ ಹಿಂದೂ ಕಡೆಯಿಂದ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ.
2022 ರ ಶೃಂಗಾರ್ ಗೌರಿ ಮೊಕದ್ದಮೆಯಲ್ಲಿ (ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಶ್ರೀನಗರ ಗೌರಿಯನ್ನು ಪೂಜಿಸುವ ಹಕ್ಕು ಕೋರಿ) ಮೊದಲ ಫಿರ್ಯಾದಿಯಾಗಿರುವ ರಾಖಿ ಸಿಂಗ್ ಅವರು ಸಲ್ಲಿಸಿದ ಪರಿಷ್ಕರಣೆ ಅರ್ಜಿಯ ಕುರಿತು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಪೀಠ ಇಂದು ನೋಟಿಸ್ ಜಾರಿ ಮಾಡಿದೆ. ಈ ನಡುವೆ ವಾರಣಾಸಿ ಕೋರ್ಟ್ ರಾಖಿ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕಾರ ಮಾಡಿ ಜ್ಞಾನವಾಪಿ ಆವರಣದಲ್ಲಿ ಪೂಜೆ ಮಾಡುವ ಹಕ್ಕನ್ನು ಪಡೆದುಕೊಂಡಿದೆ.
ಜ್ಞಾನವಾಪಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಮಂದಿರವಿತ್ತು: ಎಎಸ್‌ಐ ವರದಿಯಲ್ಲಿ ಬಹಿರಂಗ!
ಶಿವಲಿಂಗವಿದೆ ಎಂದು ಹೇಳಲಾದ ಪ್ರದೇಶವನ್ನು ಹೊರತುಪಡಿಸಿ, ಜ್ಞಾನವಾಪಿ ಮಸೀದಿಯ ಶುದ್ಧೀಕರಣ ಕೊಳವನ್ನು (ವುಜುಖಾನಾ) ಸಮೀಕ್ಷೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶಿಸುವಂತೆ ರಾಖಿ ಸಿಂಗ್ ಹೈಕೋರ್ಟ್‌ಗೆ ಒತ್ತಾಯ ಮಾಡಿದ್ದರು. ತನ್ನ ಪರಿಷ್ಕರಣೆ ಮನವಿಯ ಮೂಲಕ, ರಾಖಿ ಸಿಂಗ್ ಅವರು ವಾರಣಾಸಿ ಜಿಲ್ಲಾ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ, ಅದು ಅಕ್ಟೋಬರ್ 2023 ರಲ್ಲಿ, ಎಎಸ್‌ಐ ಸಮೀಕ್ಷೆಯನ್ನು ನಡೆಸಲು ಎಎಸ್‌ಐಗೆ ನಿರ್ದೇಶಿಸಲು ನಿರಾಕರಿಸಿತ್ತು. 2023 ರ ಆದೇಶದಲ್ಲಿ, ನ್ಯಾಯಾಧೀಶ ಎಕೆ ವಿಶ್ವೇಶ ಅವರು 2022ರ ಮೇ 17 ರಂದು 'ಶಿವಲಿಂಗ' ಪತ್ತೆಯಾಗಿದೆ ಎಂದು ತಿಳಿಸಲಾದ ಪ್ರದೇಶದ ಸೂಕ್ತ ರಕ್ಷಣೆ ಮಾಡಬೇಕು ಎಂದು ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆ ಎಂದು ತಿಳಿಸಿದ್ದರು.
ಗ್ಯಾನವಾಪಿ ಮಸೀದಿ ಸಮೀಕ್ಷಾ ವರದಿ ಸಾರ್ವಜನಿಕಗೊಳಿಸಲು ಕೋರ್ಟ್ ಅನುಮತಿ!