Asianet Suvarna News Asianet Suvarna News

ಸ್ಯಾನ್‌ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ನೇರ ವಿಮಾನ, ಸಂಪೂರ್ಣ ಮಹಿಳೆಯರಿಂದಲೇ ನಿರ್ವಹಣೆ!

ಏರ್‌ ಇಂಡಿಯಾದಿಂದ ಇಂದು ಐತಿಹಾಸಿಕ ವಿಮಾನಯಾನ|  ವಿಮಾನ ಸಂಪೂರ್ಣ ಮಹಿಳೆಯರಿಂದಲೇ ನಿರ್ವಹಣೆ| ಸ್ಯಾನ್‌ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ನೇರ ವಿಮಾನ| 17 ತಾಸು ದೂರದ ವಿಶ್ವದ ಅತಿ ಸುದೀರ್ಘ ಮಾರ್ಗ

All women team to fly Air India first non stop San Francisco Bengaluru flight pod
Author
Bangalore, First Published Jan 10, 2021, 8:17 AM IST

ನವದೆಹಲಿ(ಜ.10): ಜಾಗತಿಕ ವಿಮಾನಯಾನ ಕ್ಷೇತ್ರದಲ್ಲಿ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ಹೊಸ ಇತಿಹಾಸವೊಂದನ್ನು ಸೃಷ್ಟಿಸಲು ಮುಂದಾಗಿದೆ. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಿಂದ ಭಾರತದ ಐಟಿ ರಾಜಧಾನಿ ಬೆಂಗಳೂರಿಗೆ ವಿಮಾನ ಸಂಚಾರವನ್ನು ಭಾನುವಾರ ಆರಂಭಿಸಲಿದೆ. ಇದು ವಿಶ್ವದಲ್ಲೇ ಅತಿ ಸುದೀರ್ಘ ವಿಮಾನ ಮಾರ್ಗವಾಗಿದೆ. ಅಲ್ಲದೆ ಮೊದಲ ವಿಮಾನವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸಲಿದ್ದಾರೆ. ಆದ ಕಾರಣ ಈ ಬೆಳವಣಿಗೆಯನ್ನು ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿದೆ.

ಸ್ಯಾನ್‌ಫ್ರಾನ್ಸಿಸ್ಕೋದಿಂದ ಭಾನುವಾರ ಬೆಳಗ್ಗೆ 7ಕ್ಕೆ (ಭಾರತೀಯ ಕಾಲಮಾನ) ಹೊರಡಲಿರುವ ಏರ್‌ ಇಂಡಿಯಾ ವಿಮಾನ ಸೋಮವಾರ ನಸುಕಿನ ಜಾವ 3.45ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ. ಉತ್ತರ ಧ್ರುವದ ಮೇಲೆ ಹಾರಾಡಿ ಅಟ್ಲಾಂಟಿಕ್‌ ಸಾಗರ ಮಾರ್ಗದಲ್ಲಿ ವಿಮಾನ 17 ತಾಸುಗಳಲ್ಲಿ ಬೆಂಗಳೂರಿಗೆ ಬರಲಿದೆ. ಆದರೆ ಈ ಸಮಯ ಗಾಳಿಯ ವೇಗವನ್ನು ಆಧರಿಸಿರಲಿದೆ ಎಂದು ಏರ್‌ ಇಂಡಿಯಾ ಹೇಳಿಕೆಯಲ್ಲಿ ಬಿಡುಗಡೆ ಮಾಡಿದೆ. ಎರಡೂ ನಗರಗಳ ನಡುವೆ 13.5 ತಾಸಿನಷ್ಟುಸಮಯ ವ್ಯತ್ಯಾಸವಿದೆ.

ಈ ಚರಿತ್ರಾರ್ಹ ವಿಮಾನದ ಮೊದಲ ಯಾನವನ್ನು ಸಂಪೂರ್ಣ ಮಹಿಳೆಯರಿಂದಲೇ ಮುನ್ನಡೆಸಲು ಏರ್‌ ಇಂಡಿಯಾ ಮುಂದಾಗಿದೆ. ಕ್ಯಾಪ್ಟನ್‌ ಜೋಯಾ ಅಗರ್‌ವಾಲ್‌, ಕ್ಯಾಪ್ಟನ್‌ ಪಾಪಗರಿ ತನ್ಮಯಿ, ಕ್ಯಾಪ್ಟನ್‌ ಆಕಾಂಕ್ಷಾ ಸೋನಾವಾರೆ ಹಾಗೂ ಕ್ಯಾಪ್ಟನ್‌ ಶಿವಾನಿ ಮನ್ಹಾಸ್‌ ಅವರು ವಿಮಾನವನ್ನು ಮುನ್ನಡೆಸಲಿದ್ದಾರೆ. ವಿಮಾನದ ಇತರೆ ಸಿಬ್ಬಂದಿಯೂ ಮಹಿಳೆಯರೇ ಆಗಿರಲಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್‌ ಪುರಿ ಟ್ವೀಟ್‌ ಮಾಡಿದ್ದಾರೆ.

ಬೋಯಿಂಗ್‌ 777-200ಎಲ್‌ಆರ್‌ ವಿಮಾನವನ್ನು ಸ್ಯಾನ್‌ಫ್ರಾನ್ಸಿಸ್ಕೋ- ಬೆಂಗಳೂರಿನ ಮೊದಲ ಯಾನಕ್ಕೆ ಏರ್‌ ಇಂಡಿಯಾ ನಿಯೋಜನೆ ಮಾಡಿದೆ. ಇದರಲ್ಲಿ 238 ಆಸನಗಳಿವೆ. ಆ ಪೈಕಿ 8 ಫಸ್ಟ್‌ ಕ್ಲಾಸ್‌, 35 ಬಿಸಿನೆಸ್‌ ಕ್ಲಾಸ್‌, 195 ಎಕಾನಮಿ ಕ್ಲಾಸ್‌ ಸೀಟುಗಳಿವೆ. ನಾಲ್ವರು ಪೈಲಟ್‌ಗಳು, 12 ಸಿಬ್ಬಂದಿ ವಿಮಾನದಲ್ಲಿರಲಿದ್ದಾರೆ.

Follow Us:
Download App:
  • android
  • ios