Asianet Suvarna News Asianet Suvarna News

ಕ್ರಿಮಿನಲ್‌ ಹಿನ್ನೆಲೆಯವರೆಲ್ಲಾ ಬಜರಂಗ ದಳ ಸೇರ್ಪಡೆ: ರಾಜಸ್ಥಾನ ಸಚಿವ

ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಮಾಡುವುದಾಗಿ ಕರ್ನಾಟಕ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಬೆನ್ನಲ್ಲೇ, ಕ್ರಿಮಿನಲ್‌ ಹಿನ್ನೆಲೆಯವರೆಲ್ಲಾ ಬಜರಂಗ ದಳ ಸೇರುತ್ತಾರೆ ಎಂದು ರಾಜಸ್ಥಾನದ ಕಾಂಗ್ರೆಸ್‌ ಸಚಿವ ಗೋವಿಂದ್‌ ಮೇಘವಾಲ್‌ ಆರೋಪಿಸಿದ್ದಾರೆ.

All those with criminal background join Bajrang Dal: Rajasthan Minister Govind meghawal controversial statement akb
Author
First Published May 4, 2023, 12:25 PM IST | Last Updated May 4, 2023, 12:25 PM IST

ಜೈಪುರ: ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಮಾಡುವುದಾಗಿ ಕರ್ನಾಟಕ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಬೆನ್ನಲ್ಲೇ, ಕ್ರಿಮಿನಲ್‌ ಹಿನ್ನೆಲೆಯವರೆಲ್ಲಾ ಬಜರಂಗ ದಳ ಸೇರುತ್ತಾರೆ ಎಂದು ರಾಜಸ್ಥಾನದ ಕಾಂಗ್ರೆಸ್‌ ಸಚಿವ ಗೋವಿಂದ್‌ ಮೇಘವಾಲ್‌ ಆರೋಪಿಸಿದ್ದಾರೆ. ಈ ಕುರಿತು ಇಲ್ಲಿ ಪ್ರತಿಕ್ರಿಯೆ ನೀಡಿರುವ ಗೋವಿಂದ್‌, ಕ್ರಿಮಿನಲ್‌ ಹಿನ್ನೆಲೆ ಉಳ್ಳವರು ವಿಶ್ವ ಹಿಂದೂ ಪರಿಷದ್‌ನ ಯುವ ಪಡೆ ಸೇರುತ್ತಾರೆ. ಇದನ್ನು ಪಿಎಫ್‌ಐನಂತೆ ನಿಷೇಧಿಸಬೇಕು. ಕಾಂಗ್ರೆಸ್‌ ಎಂದೂ ಹನುಮನನ್ನು ವಿರೋಧಿಸಿಲ್ಲ. ಆದರೆ ದೇವರ ಹೆಸರಿನಲ್ಲಿ ಸಂಘ ತೆರೆದು ಅಪರಾಧ ಎಸಗುವವರನ್ನು ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

ಅಗತ್ಯಬಿದ್ದರೆ ಛತ್ತೀಸ್‌ಗಢದಲ್ಲೂ ಬಜರಂಗದಳ ನಿಷೇಧ: ಬಘೇಲ್‌
ಕರ್ನಾಟದಲ್ಲಿ ಬಜರಂಗದಳ ನಿಷೇಧದ ವಿವಾದ ಉಂಟಾಗಿರುವ ಬೆನ್ನಲ್ಲೇ ಅಗತ್ಯಬಿದ್ದರೆ ಛತ್ತೀಸ್‌ಗಢದಲ್ಲೂ ಬಜರಂಗದಳವನ್ನು ನಿಷೇಧಿಸುವತ್ತ ಯೋಚಿಸಲಾಗುವುದು ಎಂದು ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಬುಧವಾರ ಹೇಳಿದ್ದಾರೆ. ಛತ್ತೀಸ್‌ಗಢದ ಯುವ ವಿಜ್ಞಾನಿಗಳ 18ನೇ ಸಮಾವೇಶವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಜರಂಗಿಗಳು ಇಲ್ಲೂ ಸಹ ಸ್ವಲ್ಪ ಗಲಾಟೆಗಳನ್ನು ನಡೆಸಿದ್ದರು. ಆದರೆ ಅವರನ್ನು ನಾವು ನಿಯಂತ್ರಿಸಿದ್ದೇವೆ. ಆದರೆ ಅಗತ್ಯ ಬಿದ್ದರೆ ಈ ಸಂಘಟನೆಯನ್ನು ನಿಷೇಧಿಸುವತ್ತ ನಾವು ಯೋಚಿಸುತ್ತೇವೆ. ಇದೇ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರಿಸಿದ ಬಳಿಕ ಕರ್ನಾಟಕದಲ್ಲಿ ವಿವಾದ ಸೃಷ್ಟಿಯಾಗಿದೆ. ಆದರೆ ಎಲ್ಲಾ ರಾಜ್ಯಗಳೂ ಒಂದೇ ರೀತಿ ಇರುವುದಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನಿಷೇಧದ ಭರವಸೆ, ದೇಶದ ಬಲ 'ಭಜರಂಗದಳ' ಟ್ವಿಟರ್‌ನಲ್ಲಿ ಟ್ರೆಂಡ್‌!

ಮೋದಿ ಠಕ್ಕರ್
ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡಿರುವುದಕ್ಕೆ ಬಿಜೆಪಿ ಸಹಿತ ಹಿಂದೂ ಸಂಘಟನೆಗಳು ರಾಜ್ಯವ್ಯಾಪಿ ವಿರೋಧಿಸಿವೆ. ನಿನ್ನೆ ಮಂಗಳೂರಿನ ಮೂಲ್ಕಿಯಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಚಾರ ಪ್ರಸ್ತಾಪಿಸಿಲ್ಲ. ಆದರೂ 'ಬಜರಂಗ ಬಲಿ ಕಿ ಜೈ' ಎಂದು ಘೋಷಣೆ ಕೂಗುವ ಮೂಲಕ ಕಾಂಗ್ರೆಸ್‌ ಗೆ ಪರೋಕ್ಷವಾಗಿ ಟಾಂಗ್‌ ನೀಡಿದರು. ಭಾಷಣ ಆರಂಭದಲ್ಲಿ ಮೋದಿಯವರು ಬಜರಂಗ ಬಲಿ ಕಿ ಜೈ ಎಂದು ಕಾರ್ಯಕರ್ತರಿಂದ ಘೋಷಣೆ ಕೂಗಿಸುವ ಮೂಲಕ ಮಾತು ಆರಂಭಿಸಿದರು. ಬಳಿಕ ಭಾಷಣದ ಕೊನೆಯಲ್ಲಿ ಬಜರಂಗ ಬಲಿ ಕಿ ಜೈ ಎಂದು ಮೂರು ಬಾರಿ ಘೋಷಣೆ ಹಾಕಿಸುವ ಮೂಲಕ ಕಾಂಗ್ರೆಸ್‌ ಗೆ ಮತ್ತೊಮ್ಮೆ ಠಕ್ಕರ್‌ ನೀಡಿದರು. ಪ್ರಧಾನಿಯ ಈ ನಡೆಗೆ ಕಾರ್ಯಕರ್ತರಿಂದ ಭಾರಿ ಮೆಚ್ಚುಗೆಯ ಕರತಾಡನ ವ್ಯಕ್ತವಾಯಿತು.

ಬಜರಂಗಿಯೇ ಕಾಂಗ್ರೆಸ್‌ ನಿರ್ನಾಮ ಮಾಡುತ್ತಾನೆ

ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದೆ. ಈ ಪ್ರಸ್ತಾಪಕ್ಕೆ ವಿರೋಧ ಬಂದಾಗ ಸಮರ್ಥನೆಯನ್ನೂ ಮಾಡಿದೆ. ನಾವು ದೇಶಭಕ್ತರು, ನಾವು ಬಜರಂಗಿಗಳು. ತಾಕತ್ತಿದ್ದರೆ ಕಾಂಗ್ರೆಸ್‌ ಬಜರಂಗದಳವನ್ನು ನಿಷೇಧಿಸಲಿ, ನಮ್ಮನ್ನು ಬಂಧಿಸಲಿ. ರಾಜ್ಯದ ಕಿಷ್ಕಿಂಧೆಯಲ್ಲಿ ಹುಟ್ಟಿದ ಬಜರಂಗಿ, ಕಾಂಗ್ರೆಸ್‌ನ್ನು ರಾಜ್ಯದಲ್ಲಿ ನಿರ್ನಾಮ ಮಾಡುತ್ತಾನೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.  ಮೂಲ್ಕಿಯ ಕೊಳ್ನಾಡುವಿನಲ್ಲಿ ಬುಧವಾರ ನಡೆದ ಬಿಜೆಪಿಯ ನವಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.

ಉಗ್ರ ಸಂಘಟನೆ ಬದಲು ಬಜರಂಗದಳ ಬ್ಯಾನ್ ಮಾಡಲು ಕಾಂಗ್ರೆಸ್‌ಗೆ ಆಸಕ್ತಿ, ಹಿಮಂತ ಶರ್ಮಾ ವಾಗ್ದಾಳಿ!

ಸಿದ್ದರಾಮಯ್ಯ ಸರ್ಕಾರ ಪಿಎಫ್‌ಐನ 175 ಕೇಸ್‌ಗಳನ್ನು ಹಿಂಪಡೆದು 1,700 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿತ್ತು. ಅಧಿಕಾರಕ್ಕೆ ಬಂದರೆ ಮತ್ತೆ ಟಿಪ್ಪು ಜಯಂತಿ ಮಾಡುತ್ತೇವೆ, ಟಿಪ್ಪು ವಿವಿ ನಿರ್ಮಿಸುತ್ತೇವೆ, ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌ ಪಡೆಯುತ್ತೇವೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಹಿಂದು ವಿರೋಧಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲೇಬಾರದು ಎಂದರು.
 

Latest Videos
Follow Us:
Download App:
  • android
  • ios