ನವದೆಹಲಿ(ಅ.26): ಪ್ರತಿಪಕ್ಷಗಳ ಮಾತಿನಂತೆ ಬಿಹಾರಕ್ಕಷ್ಟೇ ಸೀಮಿತವಾಗದೇ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಕೊರೋನಾ ಲಸಿಕೆ ನೀಡುವುದಾಗಿ ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಭಾನುವಾರ ಹೇಳಿದ್ದಾರೆ. 

ಈ ವಾರದ ಆರಂಭದಲ್ಲಿ ಬಿಜೆಪಿಯು ಬಿಹಾರ ಚುನಾವಣೆ ನಿಮಿತ್ತ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯಲ್ಲಿ, ತರಾವು ಅಧಿಕಾರಕ್ಕೇರಿದರೆ ರಾಜ್ಯದ ಜನತೆಗೆ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಿತ್ತು. ಈ ವಿಚಾರವಾಗಿ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಕಿಡಿ ಕಾರಿದ್ದವು. ಬಿಜೆಪಿಯು ಈ ಕೊರೋನಾ ಸೋಂಕನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿತ್ತು.

ಹೀಗಿರುವಾಗಲೇ ಕೇಂದ್ರ ಸಚಿವ ಸಾರಂಗಿ ನೀಡಿರುವ ಹೇಳಿಕೆ ಭಾರೀ ಮಹತ್ವ ಪಡೆದಿದೆ. ಅಲ್ಲದೇ ಈ ಬಗ್ಗೆ ಖುದ್ದು ನರೇಂದ್ರ ಮೋದಿ ಘೋಷಣೆ ಮಾಡಲಿದ್ದಾರೆಂದೂ ತಿಳಿಸಿದ್ದಾರೆ.

ಸದ್ಯ ದೇಶದಲ್ಲಿ ಕೊರೋನಾದ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಇದು ಜನರಿಗೆ ಹಾಗೂ ಸರ್ಕಾರಕ್ಕೆ ಕೊಂಚ ನೆಮ್ಮದಿ ನೀಡಿದೆ. ಅತ್ತ ಕೊರೋನಾ ಲಸಿಕರೆ ಪ್ರಯೋಗಗಳೂ ಮುಂದುವರೆದಿದ್ದು, ಅತೀ ಶೀಘ್ರದಲ್ಲಿ ಲಸಿಕೆ ಸಿಗುವ ನಿರೀಕ್ಷೆಯೂ ವ್ಯಕ್ತವಾಗಿದೆ.