ಈದ್‌ ಪ್ರಯುಕ್ತ ಶುಭಾಷಯ ಸಂದೇಶ ಬಿಡುಗಡೆ ಮಾಡಿರುವ ಅಲ್‌ಖೈದಾ ಭಾರತಕ್ಕೆ ಎಚ್ಚರಿಕೆ ನೀಡಿದೆ. ಸುಮಾರು 7 ಪುಟಗಳ ಮ್ಯಾಗಜಿನ್‌ ಬಿಡುಗಡೆ ಮಾಡಿರುವ ಸಂಘಟನೆ, ಮುಸ್ಲಿಮರನ್ನು ಸ್ವತಂತ್ರಗೊಳಿಸುವುದಾಗಿ ಹೇಳಿದೆ.

ನವದೆಹಲಿ (ಏಪ್ರಿಲ್ 22, 2023): ಇತ್ತೀಚೆಗೆ ಹತ್ಯೆಯಾದ ಅತೀಕ್‌ ಅಹ್ಮದ್‌ ಮತ್ತು ಅಶ್ರಫ್‌ ಸೋದರರನ್ನು ಹುತಾತ್ಮರು ಎಂದು ಕರೆದಿರುವ ಉಗ್ರ ಸಂಘಟನೆ ಅಲ್‌ಖೈದಾ, ಇವರ ಸಾವಿಗೆ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಶುಕ್ರವಾರ ಎಚ್ಚರಿಕೆ ನೀಡಿದೆ. ಈದ್‌ ಪ್ರಯುಕ್ತ ಶುಭಾಷಯ ಸಂದೇಶ ಬಿಡುಗಡೆ ಮಾಡಿರುವ ಅಲ್‌ಖೈದಾ ಭಾರತಕ್ಕೆ ಎಚ್ಚರಿಕೆ ನೀಡಿದೆ. ಸುಮಾರು 7 ಪುಟಗಳ ಮ್ಯಾಗಜಿನ್‌ ಬಿಡುಗಡೆ ಮಾಡಿರುವ ಸಂಘಟನೆ, ಮುಸ್ಲಿಮರನ್ನು ಸ್ವತಂತ್ರಗೊಳಿಸುವುದಾಗಿ ಹೇಳಿದೆ.

ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹಾಗೂ ಆತನ ಸೋದರನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದ ಸಮಯದಲ್ಲಿ ದಾಳಿ ಮಾಡಿದ ಮೂವರು ಅತೀಕ್‌ ಸೋದರರನ್ನು ಹತ್ಯೆ ಮಾಡಿದ್ದರು. ಅತೀಕ್‌ಗೆ ಹಲವು ಉಗ್ರ ಸಂಘಟನೆ ಮತ್ತು ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ನಂಟಿದೆ ಎಂದು ಇತ್ತೀಚೆಗಷ್ಟೇ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಪ್ರಸ್ತಾಪಿಸಿದ್ದರು. 

ಇದನ್ನು ಓದಿ: ಅತೀಕ್‌, ಅಶ್ರಫ್‌ ಹತ್ಯೆ ಪ್ರಕರಣದ ದೃಶ್ಯವನ್ನು ಇಂಚಿಂಚಾಗಿ ಮರುಸೃಷ್ಟಿ ಮಾಡಲಿರೋ ಎಸ್‌ಐಟಿ

ಭಯೋತ್ಪಾದಕ ಗುಂಪು ಅಲ್ ಖೈದಾದ ಪ್ರಾದೇಶಿಕ ಶಾಖೆಯು ಉತ್ತರ ಪ್ರದೇಶದಲ್ಲಿ ಲೈವಾಗಿ ಟಿವಿಯಲ್ಲಿ ಸುದ್ದಿ ಪ್ರಸಾರ ಮಾಡುತ್ತಿದ್ದಾಗ ಕೊಲ್ಲಲ್ಪಟ್ಟ ಮುಸ್ಲಿಮರ ವಿರುದ್ಧ ಪ್ರತೀಕಾರದ ದಾಳಿಯ ಬೆದರಿಕೆ ಹಾಕಿದೆ, ಇದು ಏಪ್ರಿಲ್ 15 ರಂದು ಪ್ರಯಾಗ್‌ರಾಜ್‌ನಲ್ಲಿ ಗ್ಯಾಂಗ್‌ಸ್ಟರ್ - ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರನ ಹತ್ಯೆಯ ಸ್ಪಷ್ಟ ಉಲ್ಲೇಖವಾಗಿದೆ. 

ಇನ್ನು, ಅಲ್ ಖೈದಾ ಇನ್ ಇಂಡಿಯನ್ ಸಬ್‌ಕಾಂಟಿನೆಂಟ್ (AQIS), ಈದ್ ಸಂದರ್ಭದಲ್ಲಿ ಬಿಡುಗಡೆಮಾಡಿದ 7 ಪುಟಗಳ ಮ್ಯಾಗಜೀನ್‌ನಲ್ಲಿ ಅತೀಕ್ ಅಹ್ಮದ್‌ನನ್ನು ಬೆಂಬಲಿಸುವ ಪ್ಯಾರಾಗ್ರಾಫ್ ಅನ್ನು ಪ್ರಕಟಿಸಿದ್ದು, ಅವರನ್ನು ಹುತಾತ್ಮ ಎಂದು ಕರೆದಿದೆ. ‘’ (ಅಮೆರಿಕದ) ಶ್ವೇತಭವನದಲ್ಲಿರಬಹುದು ಅಥವಾ ದೆಹಲಿಯ ಪ್ರಧಾನ ಮಂತ್ರಿಯ ಮನೆಯಲ್ಲಿರಬಹುದು ಅಥವಾ (ಪಾಕ್‌) ರಾವಲ್ಪಿಂಡಿಯ GHQ ಎಲ್ಲೇ ಆಗಿರಬಹುದು. ನಾವು ದಬ್ಬಾಳಿಕೆಯ ಕೈಯಾಗೇ ಉಳಿಯುತ್ತೇವೆ. ಈ ಹಿನ್ನೆಲೆ ಟೆಕ್ಸಾಸ್‌ನಿಂದ ತಿಹಾರ್‌ನಿಂದ ಅಡ್ಯಾಲಾವರೆಗೆ - ನಾವು ಎಲ್ಲಾ ಮುಸ್ಲಿಂ ಸಹೋದರ ಸಹೋದರಿಯರನ್ನು ಅವರ ಸಂಕೋಲೆಯಿಂದ ಮುಕ್ತಗೊಳಿಸುತ್ತೇವೆ’’ ಎಂದೂ ಉಗ್ರ ಸಂಘಟನೆ ಹೇಳಿದೆ.

ಇದನ್ನೂ ಓದಿ: ಏಕತೆಯ ಅಗತ್ಯವನ್ನು ಎತ್ತಿ ಹಿಡಿದ ಅತೀಖ್‌ ಅಹ್ಮದ್‌ ಹತ್ಯೆ: ಇದೇ ನಾವು ಕಲಿಯಬೇಕಿರೋ ಪಾಠ!

ಅತೀಕ್ ಅಹ್ಮದ್ (60) ಮತ್ತು ಸಹೋದರ ಅಶ್ರಫ್ ಅವರನ್ನು ಏಪ್ರಿಲ್ 15 ರ ರಾತ್ರಿ ಮಾಧ್ಯಮ ಸಂವಾದದ ಮಧ್ಯದಲ್ಲೇ ಪತ್ರಕರ್ತರ ಸೋಗು ಹಾಕಿದ್ದ ಮೂವರು ವ್ಯಕ್ತಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಪ್ರಯಾಗರಾಜ್‌ನ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ತಪಾಸಣೆಗೆಂದು ಕರೆದೊಯ್ಯುತ್ತಿದ್ದಾಗ ಅವರನ್ನು ಕೊಲೆ ಮಾಡಲಾಗಿತ್ತು. 

ಪ್ರಯಾಗ್‌ರಾಜ್‌ನಲ್ಲಿ ಜೈಲಿನಲ್ಲಿದ್ದ ಸಹೋದರರಿಗೆ ಆ ವೇಳೆ ಕೈಗೆ ಕೋಳ ಹಾಕಲಾಗಿತ್ತು. ಹಾಗೂ, ಇವರನ್ನು ಮಾಧ್ಯಮದವರು ಪ್ರಶ್ನೆ ಮಾಡುತ್ತಿದ್ದರು. ಈ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ನ್ಯೂಸ್‌ ಚಾನೆಲ್‌ಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಯಿತು. ಇನ್ನೊಂದೆಡೆ, ಏಪ್ರಿಲ್ 13 ರಂದು ಝಾನ್ಸಿಯಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಗುಂಡೇಟಿಗೆ ಬಲಿಯಾದ ಅತೀಕ್‌ ಅಹ್ಮದ್ ಮಗ ಅಸಾದ್ ಅಂತಿಮ ವಿಧಿ ವಿಧಾನಗಳನ್ನು ಇಬ್ಬರ ಹತ್ಯೆಗೂ ಕೆಲವೇ ಗಂಟೆಗಳ ಮೊದಲು ಮಾಡಲಾಯಿತು.

ಇದನ್ನೂ ಓದಿ: ದೊಡ್ಡ ಡಾನ್‌ ಆಗಲು ದೊಡ್ಡ ತಲೆಯನ್ನೇ ತೆಗೆಯಬೇಕೆಂದು ಯುಪಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹತ್ಯೆ!

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 307 (ಕೊಲೆಗೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಅತೀಕ್ ಅಹ್ಮದ್‌ ಮತ್ತು ಅಶ್ರಫ್ ಹತ್ಯೆ ಮಾಡಿದ ಮೂವರು ಆಪಾದಿತ ದಾಳಿಕೋರರ ವಿರುದ್ಧ ಶಹಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು, ಉಗ್ರ ಸಂಘಟನೆ AQIS ನೀಡಿರುವ ಈ ಹೇಳಿಕೆಗೆ ಸರ್ಕಾರಿ ಮೂಲಗಳು ಪ್ರತಿಕ್ರಿಯೆ ನೀಡಿದ್ದು, ಇದನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. "ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಇದನ್ನು ಪರಿಹರಿಸಲಾಗುವುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: 2 ವಾರಗಳಲ್ಲಿ ನನ್ನನ್ನು ಕೊಲ್ಲಲಾಗುವುದು ಎಂದು ಮೊದಲೇ ಹೇಳಿದ್ದ ಯುಪಿ ಗ್ಯಾಂಗ್‌ಸ್ಟರ್‌!