* ಪ್ರಯಾಗ್ರಾಜ್ ಮಠದಲ್ಲಿ ಆತ್ಮಹತ್ಯೆಗೆ ಶರಣು* ಅಖಾಡ ಪರಿಷತ್ ಮುಖ್ಯಸ್ಥ ನರೇಂದ್ರ ಗಿರಿ ಆತ್ಮಹತ್ಯೆ* ಆತ್ಮಹತ್ಯಾ ಪತ್ರ ಪತ್ತೆ, ಶಿಷ್ಯ ಆನಂದಗಿರಿ ವಶಕ್ಕೆ
ಪ್ರಯಾಗ್ರಾಜ್(ಸೆ.21): ಅಖಿಲ ಭಾರತ ಅಖಾಡ ಪರಿಷತ್‌ನ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ (72) ಪ್ರಯಾಗ್ರಾಜ್ನ ತಮ್ಮ ಮಠದಲ್ಲಿನ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನರೇಂದ್ರ ಅವರ ಆತ್ಮಹತ್ಯಾ ಪತ್ರ ಲಭಿಸಿದೆ.. ಇದರ ಬೆನ್ನಲ್ಲೇ ಅವರ ಶಿಷ್ಯ ಆನಂದಗಿರಿ ಅವರನ್ನು ಉತ್ತರಾಖಂಡದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ನರೇಂದ್ರ ಗಿರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತ ಅಖಾಡ ಪರಿಷತ್, ಭಾರತದಲ್ಲೇ ಸಂತರ ಅತಿದೊಡ್ಡ ಸಂಘಟನೆಯಾಗಿದೆ. ಇದು ವಿವಿಧ ಸಂಘಟನೆಗಳ ಒಕ್ಕೂಟವಾಗಿದ್ದು, ನರೇಂದ್ರ ಗಿರಿ ನಿರಂಜನಿ ಅಖಾಡದ ಮುಖ್ಯಸ್ಥರಾಗಿದ್ದರು, ಅದರ ಮೂಲಕ ಅಖಿಲ ಭಾರತ ಅಖಾಡ ಪರಿಷತ್‌ನ ಮುಖ್ಯಸ್ಥರಾಗಿಯೂ ಆಯ್ಕೆಯಾಗಿದ್ದರು.
ಕಳೆದ ಏಪ್ರಿಲ್‌ನಲ್ಲಿ ನರೇಂದ್ರ ಗಿರಿ ಕೋವಿಡ್‌ಗೆ ತುತ್ತಾಗಿದ್ದರು. ಬಳಿಕ ಅವರು ತಮ್ಮ ಕಾರ್ಯಚಟುವಟಿಕೆಯನ್ನು ಬಹುತೇಕ ಆಶ್ರಮಕ್ಕೆ ಸೀಮಿತಗೊಳಿಸಿದ್ದರು.
