ವಿವಾದದ ನಂತರ ಸಿಂಹದ ಜೋಡಿಗೆ ಹೊಸ ಹೆಸರಿಟ್ಟ ದೀದಿ ಸರ್ಕಾರ: ಅಕ್ಬರ್ ಈಗ ಸೂರಜ್ , ಸೀತಾ ಈಗ ತಾನ್ಯಾ
ಹೆಸರಲ್ಲೇನಿದೆ ಯಾವ ಹೆಸರಾದರೇನು ಕರೆಯುವುದಕ್ಕೆ ಒಂದು ಹೆಸರು ಇರಬೇಕು ಅಷ್ಟೇ ಎಂಬುದು ಕೆಲವರ ಅಭಿಪ್ರಾಯವಾದರೆ ಹೆಸರಲ್ಲಿ ಏನೇನೋ ಇದೆ ಎಂಬುದು ವಿಶ್ವ ಹಿಂದೂ ಪರಿಷತ್‌ನ ವಾದ ಹೀಗಾಗಿಯೇ ಸಿಂಹಗಳ ಹೆಸರು ಬದಲಿಸಬೇಕು ಎಂದು ಹೇಳಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿಹೆಚ್‌ಪಿಗೆ ಕಡೆಗೂ ಜಯ ಸಿಕ್ಕಿದೆ.
ಹೆಸರಲ್ಲೇನಿದೆ ಯಾವ ಹೆಸರಾದರೇನು ಕರೆಯುವುದಕ್ಕೆ ಒಂದು ಹೆಸರು ಇರಬೇಕು ಅಷ್ಟೇ ಎಂಬುದು ಕೆಲವರ ಅಭಿಪ್ರಾಯವಾದರೆ ಹೆಸರಲ್ಲಿ ಏನೇನೋ ಇದೆ ಎಂಬುದು ವಿಶ್ವ ಹಿಂದೂ ಪರಿಷತ್‌ನ ವಾದ ಹೀಗಾಗಿಯೇ ಸಿಂಹಗಳ ಹೆಸರು ಬದಲಿಸಬೇಕು ಎಂದು ಹೇಳಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿಹೆಚ್‌ಪಿಗೆ ಕಡೆಗೂ ಜಯ ಸಿಕ್ಕಿದೆ. ಸಿಂಹದ ಹೆಸರುಗಳು ಸೂರಜ್ ತಾನ್ಯಾ ಎಂದು ಬದಲಾಗಿದೆ.
ಪಶ್ಚಿಮ ಬಂಗಾಳದ ಸಫಾರಿ ಪಾರ್ಕ್‌ನಲ್ಲಿದ್ದ ಸಿಂಹದ ಜೋಡಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಅಕ್ಬರ್, ಸೀತಾ ಎಂದು ಈ ಹಿಂದೆ ನಾಮಕರಣ ಮಾಡಿತ್ತು. ಆದರೆ ಈ ನಾಮಕರಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶ್ವ ಹಿಂದೂ ಪರಿಷತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಈಗ ಈ ನಾಮಕರಣ ವಿಚಾರದಲ್ಲಿ ಕೋಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ಸಿಂಹದ ಜೋಡಿಗೆ ಅಕ್ಬರ್-ಸೀತಾ ಬದಲು ಸೂರಜ್ ತಾನ್ಯಾ ಎಂದು ಹೆಸರಿಡಲಾಗಿದೆ.
ಬಂಗಾಳದ ಸಫಾರಿ ಪಾರ್ಕ್‌ನಲ್ಲಿ ಸಿಂಹಿಣಿ 'ಸೀತಾ' ಜೊತೆ 'ಅಕ್ಬರ್' ಸಿಂಹ, ಕೋರ್ಟ್ ಮೆಟ್ಟಿಲೇರಿದ ವಿಎಚ್‌ಪಿ!
ಈ ಸಿಂಹ ಹಾಗೂ ಸಿಂಹಿಣಿ ಜೋಡಿಯನ್ನು ತ್ರಿಪುರದಿಂದ ಸಿಲಿಗುರಿಯಲ್ಲಿರುವ ಬೆಂಗಾಲಿ ಸಫಾರಿ ಪಾರ್ಕ್‌ಗೆ ಕಳೆದ ವರ್ಷ ಫೆಬ್ರವರಿಯಲ್ಲಿ ಕರೆತರಲಾಗಿತ್ತು. ಆದರೆ ಈ ಸಿಂಹದ ಜೋಡಿಗೆ ದೀದಿ ಸರ್ಕಾರ ಇಟ್ಟ ಹೆಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವಂತಿದೆ ಎಂದು ವಿಶ್ವಹಿಂದೂ ಪರಿಷತ್ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ವಿವಾದ ದೇಶದಾದ್ಯಂತ ಸುದ್ದಿಯಾಗಿತ್ತು. ಅಲ್ಲದೇ ವಿಹೆಚ್‌ಪಿ ಈ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿ ಅಚ್ಚರಿಗೆ ಕಾರಣವಾಗಿತ್ತು. ಆದರೆ ಈಗ ಹೈಕೋರ್ಟ್ ಆದೇಶದಂತೆ ಪಶ್ಚಿಮ ಬಂಗಾಳ ಸರ್ಕಾರ ಸಿಂಹಗಳ ಹೆಸರನ್ನು ಸೂರಜ್ ಹಾಗೂ ತಾನ್ಯಾ ಎಂದು ಬದಲಾಯಿಸಿ ಈ ಪ್ರಕರಣಕ್ಕೆ ತೆರೆ ಎಳೆದಿದೆ.
ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸಲ್ಲಿಸಿದ ದಾಖಲೆಯಲ್ಲಿ ಹೇಳಿರುವಂತೆ, ಈ ವಿವಾದಿತ ಹೆಸರುಗಳನ್ನು ತ್ರಿಪುರಾದಲ್ಲೇ ನೀಡಲಾಗಿತ್ತು, ಹೆಚ್ಚುವರಿ ಅಡ್ವೋಕೇಟ್ ಜನರಲ್, ಜೋಯ್ಜಿತ್ ಚೌಧರಿ ಮಾತನಾಡಿ ಈ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ. ದೀದೀ ನೇತೃತ್ವದ ರಾಜ್ಯ ಸರ್ಕಾರವೇ ಆ ಹೆಸರಿಟ್ಟಿದೆ ಎಂಬುದು ವಿಹೆಚ್‌ಪಿ ಅಸಮಾಧಾನವಾಗಿತ್ತು. ಇದು ನಿಜವಲ್ಲ ಎಂದು ನಾವು ಸಾಬೀತುಪಡಿಸಿದ್ದೇವೆ. ಈ ಹೆಸರನ್ನು ತ್ರಿಪುರಾದ ಅಧಿಕಾರಿಗಳು ನೀಡಿದ್ದಾರೆ. ಈ ವಿಚಾರ ನಮಗೆ ತಿಳಿದಾಗ ಪಶ್ಚಿಮ ಬಂಗಾಳ ಅರಣ್ಯ ಇಲಾಖೆ ಯಾವುದೇ ವಿವಾದವಾಗದಂತೆ ಈ ಹೆಸರನ್ನು ಬದಲಾಯಿಸಿದೆ. ಹೆಸರನ್ನು ಬದಲಾಯಿಸಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ದೀದಿ ಸರ್ಕಾರಕ್ಕೆ ಹೈಕೋರ್ಟ್ ಚಾಟಿ? ಸಿಂಹಗಳಿಗಿಟ್ಟ ಅಕ್ಬರ್- ಸೀತಾ ಹೆಸರು ಬದಲಿಸಲು ಸೂಚನೆ!
ಆದರೆ ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಜಸ್ಟೀಸ್ ಸುಗತಾ ಭಟ್ಟಾಚಾರ್ಯ ಅವರಿದ್ದ ಏಕಸದಸ್ಯ ಪೀಠ, ಸಿಂಹಗಳಿಗೆ ಸೀತಾ ಹಾಗೂ ಅಕ್ಬರ್ ಎಂದು ಹೆಸರಿಟ್ಟಿದ್ದು ಯಾಕೆ? ಎಂದು ಪ್ರಶ್ನಿಸಿದ್ದರು. ಯಾವುದೇ ಕಾರಣಕ್ಕೂ ಇಂತಹ ನಡೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಎಚ್ಚರಿಸಿದ್ದರು.
ನಿಮ್ಮ ಮನೆಯ ನಾಯಿಗೆ ಹಿಂದೂ ದೇವರು, ಇಸ್ಲಾಮ್ ಪ್ರವಾದಿಗಳ ಹೆಸರಿಡುತ್ತೀರಾ? ಇದು ಸಾಧ್ಯವೇ? ಒಂದು ಪ್ರಾಣಿಗೆ ರಬೀಂದ್ರನಾಥ್ ಠಾಗೋರ್ ಎಂದು ಹೆಸರಿಡಲು ಸಾಧ್ಯವೇ? ಈ ಕನಿಷ್ಠ ಜ್ಞಾನ ನಿಮಗಿಲ್ಲವೆ? ಕೋಟ್ಯಾಂತರ ಜನರ ನಂಬಿಕೆ, ಶ್ರದ್ಧೆ, ಭಕ್ತಿಯನ್ನು ಅಪಮಾನಿಸಲು, ಅವಹೇಳನ ಮಾಡಲು ಹಾಗೂ ನಿಂದಿಸಲು ಅವಕಾಶವಿಲ್ಲ. ಸೀತಾ ಮಾತೆಯನ್ನು ಈ ದೇಶದ ಜನ ದೇವರಾಗಿ ಪೂಜಿಸುತ್ತಿದ್ದಾರೆ. ಮಂದಿರ ಕಟ್ಟಿ ನಿತ್ಯ ಪೂಜೆ ನಡೆಸುತ್ತಿದ್ದಾರೆ. ಅಕ್ಬರ್ ಈ ದೇಶದ ಮೊಘಲ್ ದೊರೆಯಾಗಿ ಇತಿಹಾಸದ ಪ್ರಮುಖ ಆಡಳಿತಗಾರರಾಗಿದ್ದಾರೆ. ಇವರ ಹೆಸರನ್ನು ಸಿಂಹಗಳಿಗೆ ಇಟ್ಟಿದ್ದು ಯಾಕೆ? ಎಂದು ಕೋರ್ಟ್ ಪ್ರಶ್ನಿಸಿತ್ತು.