ಛತ್ತೀಸ್‌ಗಢ ಮೊದಲ ಸಿಎಂ ಅಜಿತ್‌ ಜೋಗಿ ನಿಧನ| 20 ದಿನಗಳ ಹಿಂದೆ ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಜೋಗಿ| ಮಧ್ಯಾಹ್ನ 3.30ರ ವೇಳೆಗೆ ಹೃದಯ ಸ್ತಂಭನದಿಂದಾಗಿ ಮೃತ

ರಾಯ್‌ಪುರ್‌(ಮೇ.30): ತೀವ್ರ ಅನಾರೋಗ್ಯಕ್ಕೀಡಾಗಿದ್ದ ಛತ್ತೀಸ್‌ಗಢದ ಮೊದಲ ಮುಖ್ಯಮಂತ್ರಿ ಅಜಿತ್‌ ಜೋಗಿ(74) ಅವರು ಶುಕ್ರವಾರ ಮಧ್ಯಾಹ್ನ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

20 ದಿನಗಳ ಹಿಂದೆ ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು ಶುಕ್ರವಾರ ಮಧ್ಯಾಹ್ನ 3.30ರ ವೇಳೆಗೆ ಹೃದಯ ಸ್ತಂಭನದಿಂದಾಗಿ ಕೊನೆಯುಸಿರೆಳೆದರು. ಜೋಗಿ ಅವರು ಪತ್ನಿ ರೇಣು ಜೋಗಿ ಮತ್ತು ಪುತ್ರ ಅಮಿತ್‌ ಜೋಗಿ ಅವರನ್ನು ಅಗಲಿದ್ದಾರೆ.

ಕೋಮಾದಿಂದ ಹೊರಕ್ಕೆ ತರಲು ಮಾಜಿ ಸಿಎಂ ಅಜಿತ್‌ ಜೋಗಿಗೆ ಹಾಡು ಕೇಳಿಸಿ ಚಿಕಿತ್ಸೆ!

ತೀವ್ರ ಉಸಿರಾಟ ಸಮಸ್ಯೆ ಮತ್ತು ಹೃದಯಸ್ತಂಭನದಿಂದ ಮೇ 9ರಂದು ಶ್ರೀ ನಾರಾಯಣ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕೋಮಾಗೆ ಜಾರಿ ವೆಂಟಿಲೇಟರ್‌ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ ಮತ್ತೊಮ್ಮೆ ಹೃದಯಾಘಾತ ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೂಲತಃ ಐಎಎಸ್‌ ಅಧಿಕಾರಿಯಾಗಿದ್ದ ಜೋಗಿ ಅವರು, ನಂತರ ಕಾಂಗ್ರೆಸ್‌ ಸೇರಿದ್ದರು. ಛತ್ತೀಸ್‌ಗಢ ರಾಜ್ಯ ರಚನೆಯಾದಾಗ ಅದರ ಮೊದಲ ಮುಖ್ಯಮಂತ್ರಿಯಾಗಿ 2000ರಿಂದ 2003ರವರೆಗೆ ಸೇವೆ ಸಲ್ಲಿಸಿದ್ದರು. 2016ರಲ್ಲಿ ಕಾಂಗ್ರೆಸ್‌ ಪಕ್ಷ ತೊರೆದು ಜನತಾ ಕಾಂಗ್ರೆಸ್‌ ಛತ್ತೀಸ್‌ಗಢ(ಜೆ) ಎಂಬ ಪ್ರಾದೇಶಿಕ ಪಕ್ಷ ರಚಿಸಿದ್ದರು.