ನವದೆಹಲಿ[ಮಾ.01]: ಅಭಿನಂದನ್‌ ಪಾಕಿಸ್ತಾನ ನೆಲದಲ್ಲಿ ಪಾಕ್‌ ಯುವಕರು ಮತ್ತು ಪಾಕ್‌ ಸೇನೆಗೆ ಸಿಕ್ಕಿಬಿದ್ದಾಗಲೂ, ಅವರ ಧೈರ್ಯ, ಸಾಹಸ ಮತ್ತು ಪರಾಕ್ರಮದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಅವರು ಸ್ವಲ್ಪವೂ ಧೃತಿಗೆಟ್ಟಿರಲಿಲ್ಲ ಅಥವಾ ಗೊಂದಲಕ್ಕೀಡಾಗಿರಲಿಲ್ಲ ಎಂದು ಸ್ವತಃ ಪಾಕಿಸ್ತಾನದ ಪ್ರಸಿದ್ಧ ಪತ್ರಿಕೆ ‘ಡಾನ್‌’ ವರದಿ ಮಾಡಿದೆ.

ಬುಧವಾರ ಬೆಳಗ್ಗೆ ಭಾರತದ ವಾಯು ಗಡಿಯನ್ನು ಉಲ್ಲಂಘಿಸಿ ದಾಳಿಗೆ ಯತ್ನಿಸಿದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಮಿಗ್‌-21 ವಿಮಾನದ ಮೂಲಕ ಅಭಿನಂದನ್‌ ಅವರು ಬೆನ್ನಟ್ಟಿದ್ದರು. ಆ ನಂತರ, ಪಾಕಿಸ್ತಾನದ ಗಡಿಯಲ್ಲಿ ಮಿಗ್‌-21 ವಿಮಾನ ಪತನಗೊಂಡಿದೆ. ಈ ವೇಳೆ ವಿಮಾನದಿಂದ ಹೊರಬಂದ ಅಭಿನಂದನ್‌ ಅವರ ಮೈಯೆಲ್ಲಾ ರಕ್ತಸಿಕ್ತವಾಗಿತ್ತು.

ಇದೇ ವೇಳೆಗೆ ತಮ್ಮನ್ನು ಸೆರೆಹಿಡಿಯಲು ಬಂದ ಪಾಕಿಸ್ತಾನಿಯರ ಮೇಲೆ ಅಭಿನಂದನ್‌ ಗುಂಡು ಹಾರಿಸದೆ, ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಅಲ್ಲದೆ, ಶತ್ರು ರಾಷ್ಟ್ರಕ್ಕೆ ಸಿಗಬಾರದಾಗಿದ್ದ ಮುಖ್ಯ ಮಾಹಿತಿಯನ್ನೊಳಗೊಂಡ ದಾಖಲೆಗಳ ಪ್ರತಿಯನ್ನು ನುಂಗಿ ಹಾಕಿದ್ದರು ಎಂದು ‘ಡಾನ್‌’ ವರದಿ ಮಾಡಿದೆ.

ಪಾಕಿಸ್ತಾನ ಯುದ್ಧ ವಿಮಾನಗಳ ಅಟ್ಟಿಸಿಕೊಂಡು ಅಭಿನಂದನ್‌ ಅವರ ಮಿಗ್‌-21 ವಿಮಾನ ಪಾಕ್‌ ನೆಲದಲ್ಲಿ ಪತನಗೊಂಡಿತ್ತು. ಈ ವೇಳೆ ತಮ್ಮ ಕೈಯಲ್ಲಿ ಪಿಸ್ತೂಲು ಹಿಡಿದಿದ್ದ ಅಭಿನಂದನ್‌ ಅವರು, ಅಲ್ಲಿನ ಯುವಕರನ್ನುದ್ದೇಶಿಸಿ ಇದು ಪಾಕಿಸ್ತಾನವೇ ಅಥವಾ ಭಾರತವೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಯುವಕನೊಬ್ಬ ಉಪಾಯವಾಗಿ ಇದು ಭಾರತ ಎಂದು ಸುಳ್ಳು ಹೇಳಿದ್ದ. ಆಗ ಭಾರತದ ಹೆಮ್ಮೆಯ ಪ್ರತೀಕವಾದ ಕೆಲವು ಘೋಷಣೆಗಳನ್ನು ಅಭಿನಂದನ್‌ ಅವರು ಕೂಗಿದರು. ಅಲ್ಲದೆ, ವಿಮಾನದ ಪತನದಿಂದಾಗಿ ತಮ್ಮ ಬೆನ್ನು ಮೂಳೆ ಮುರಿದಿದೆ ಎಂದು ಗೋಗರೆದರು.

ಆದರೆ, ಅಭಿ ಅವರ ಭಾರತ ಪರ ಘೋಷಣೆ ಸಹಿಸಿಕೊಳ್ಳಲಾಗದ ಕೆಲ ಭಾವನಾತ್ಮಕ ಪಾಕ್‌ ಯುವಕರು, ಪಾಕಿಸ್ತಾನ ಸೇನೆ ಜಿಂದಾಬಾದ್‌ ಎಂದು ಕೂಗಿಯೇ ಬಿಟ್ಟರು. ಆಗ ಅಭಿ ಅವರು ಯುವಕರ ಮೇಲೆ ಗುಂಡಿನ ದಾಳಿ ಮಾಡುವ ಬದಲಿಗೆ, ಗಾಳಿಯಲ್ಲಿ ಗುಂಡು ಹಾರಿಸಿ ಓಡಿ ಹೋಗಲು ಮುಂದಾದರು.

ಪಾಕಿಸ್ತಾನಿ ಯುವಕರೂ ತಮ್ಮ ಕೈಯಲ್ಲಿ ಕಲ್ಲುಗಳನ್ನು ಹಿಡಿದು ಯೋಧನ ಬೆನ್ನಟ್ಟಿದ್ದರು. ಆಗಲೂ ಧೈರ್ಯ ಕಳೆದುಕೊಳ್ಳದ ಯೋಧ, ಯುವಕರ ಮೇಲೆ ಗುಂಡು ಹಾರಿಸದೆ ಮತ್ತೆ ಗಾಳಿಯಲ್ಲೇ ಗುಂಡು ಹಾರಿಸಿದ್ದರು. ಪಕ್ಕದಲ್ಲೇ ಇದ್ದ ಕೆರೆಗೆ ಧುಮುಕಿದ ಅಭಿ ಅವರು ತಮ್ಮ ಕಿಸೆಯಲ್ಲಿದ್ದ ಭಾರತದ ಕುರಿತಾದ ಮುಖ್ಯವಾದ ದಾಖಲೆಗಳ ಪೈಕಿ ಕೆಲವನ್ನು ನುಂಗಿದರು. ಮತ್ತೆ ಕೆಲವನ್ನು ಕೆರೆಯಲ್ಲಿ ಬಿಸಾಕಿಬಿಟ್ಟರು. ನಂತರ, ಅಭಿನಂದನ್‌ ಅವರನ್ನು ತಮ್ಮ ವಶಕ್ಕೆ ಪಡೆದ ಸ್ಥಳೀಯ ಯುವಕರು, ಅವರ ಮೇಲೆ ಬೇಕಾಬಿಟ್ಟಿಯಾಗಿ ಹಲ್ಲೆ ನಡೆಸಿದರು. ಏತನ್ಮಧ್ಯೆ, ಸ್ಥಳಕ್ಕಾಗಮಿಸಿದ ಪಾಕಿಸ್ತಾನ ಯೋಧರು, ಅಭಿನಂದನ್‌ ಅವರನ್ನು ತಮ್ಮ ವಶಕ್ಕೆ ಪಡೆಯುವ ಮೂಲಕ ರಕ್ಷಣೆ ಮಾಡಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.