ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI171 ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿ, 241  ಮಂದಿ ಮೃತಪಟ್ಟಿದ್ದಾರೆ. ವಿಮಾನವು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿದ್ದು, ಹಲವಾರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ (ಫ್ಲೈಟ್ AI171) ಇಂದು ಮಧ್ಯಾಹ್ನ ಟೇಕ್‌ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಭೀಕರ ಅಪಘಾತಕ್ಕೀಡಾಗಿ, ವಿಮಾನದಲ್ಲಿ ಸಿಬ್ಬಂದಿ ಸಹಿತ 242 ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಸೀಟ್‌ ನಂಬರ್‌ 11ಎ ನಲ್ಲಿದ್ದ ಓರ್ವ ವ್ಯಕ್ತಿ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ 241 ಮಂದಿ ಮೃತಪಟ್ಟಿದ್ದಾರೆ. 

ಘಟನೆ ನಡೆದ ಬಳಿಕ ಈವರೆಗಿನ ಬೆಳವಣಿಗೆಗಳು ಬಗ್ಗೆ ಸಂಕ್ಷಿಪ್ತ ವಿವರಣೆ:

  • 1.10ಕ್ಕೆ ಹೊರಬೇಕಿದ್ದ ವಿಮಾನ ತಡವಾಗಿ ಮಧ್ಯಾಹ್ನ 1:38ರ ಸಮಯಕ್ಕೆ ಅಹಮದಾಬಾದ್‌ ಅಂತರಾಷ್ಟ್ರೀಯ ನಿಲ್ದಾಣದಿಂದ ಹೊರಟಿತು.
  • ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನವು ಸುಮಾರು 825 ಅಡಿ ಎತ್ತರದಲ್ಲಿದ್ದಾಗ ನಿಯಂತ್ರಣ ಕಳೆದುಕೊಂಡು ಜನವಸತಿ ಇದ್ದ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿದೆ.
  • ವಿಮಾನದಲ್ಲಿ ಒಟ್ಟು 232 ಪ್ರಯಾಣಿಕರು ಮತ್ತು 10 ಸಿಬ್ಬಂದಿಯಿದ್ದರು. ವಿಮಾನವು ಗರಿಷ್ಠ 174 ನಾಟ್ಸ್ (ಸುಮಾರು 322 ಕಿಮೀ/ಗಂ) ವೇಗವಷ್ಟೇ ತೋರಿಸಿದೆ.
  • ಹಾಸ್ಟೆಲ್‌ನ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳು ಹಾಸ್ಟೆಲ್‌ನ ಅಡುಗೆ ಕೋಣೆ ಕಡೆ ಬಿದ್ದಿರುವ ದೃಶ್ಯಗಳು ಭೀಕರವಾಗಿವೆ. ಕೆಲವು ಊಟದ ತಟ್ಟೆಗಳಲ್ಲಿ ಇನ್ನೂ ತಿನ್ನದ ಆಹಾರವಿತ್ತು.
  • ವಿಮಾನವು ಟೇಕ್‌ಆಫ್ ಆದ ನಂತರ ಅಸಹಜವಾಗಿ ಕಡಿಮೆ ಎತ್ತರದಲ್ಲೇ ಹಾರುತ್ತಿದ್ದು, ಲ್ಯಾಂಡಿಂಗ್‌ಗೆ ಹೋರಾಡುತ್ತಿದ್ದ ದೃಶ್ಯಗಳು ಕಾಣಿಸಿದೆ. ಅಂತಿಮವಾಗಿ ನೆಲಕ್ಕೆ ಅಪ್ಪಳಿಸುವ ಕ್ಷಣವನ್ನು ವಿಡಿಯೋಗಳು ಕಂಡುಬಂದಿದೆ. ದೊಡ್ಡ ಬೆಂಕಿಯ ಉಂಡೆ ಕಂಡು ತೀವ್ರ ಸ್ಫೋಟವಾಯಿತು.
  • ಪೈಲಟ್ ತುರ್ತು ಸಂದೇಶ (Mayday) ಕಳಿಸಿದ್ದರೂ, ಆ ಬಳಿಕ ವಿಮಾನ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಡಿದು ಹೋಗಿದೆ ಎಂದು ವರದಿಗಳಿವೆ.

ಅಧಿಕೃತ ಪ್ರತಿಕ್ರಿಯೆಗಳು:

  • ಏರ್ ಇಂಡಿಯಾ, "AI171 ಇಂದು ಅಪಘಾತಕ್ಕೀಡಾಗಿದೆ. ಈ ಹಿನ್ನಲೆಯಲ್ಲಿ ನಾವು ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದೇವೆ ಮತ್ತು ತಕ್ಷಣ ಹೊಸ ಮಾಹಿತಿ ಹಂಚಿಕೊಳ್ಳಲಾಗುತ್ತದೆ" ಎಂದು ಹೇಳಿದೆ. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ನಾಗರಿಕರು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ನಾಗರಿಕರು ಇದ್ದರು.
  • ಪ್ರಯಾಣಿಕರ ಕುಟುಂಬಗಳಿಗೆ ಸಹಾಯ ಮಾಡಲು ಏರ್ ಇಂಡಿಯಾ 1800-5691-444 ಎಂಬ ತುರ್ತು ದೂರವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ.
  • ಅಪಘಾತದ ಸ್ಥಳದಲ್ಲಿ ದಟ್ಟ ಹೊಗೆ ಏರಿದ ದೃಶ್ಯಗಳು ಶಾಕ್ ಉಂಟುಮಾಡಿವೆ. 20 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ಸ್ಥಳದಲ್ಲಿತ್ತು.
  • ವಿಮಾನದಲ್ಲಿ ಮಾಜಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯವರೂ ಇದ್ದರು. ಮಗಳನ್ನು ಕಾಣಲು ಲಂಡನ್‌ ಗೆ ಪ್ರಯಾಣ ಬೆಳೆಸುತ್ತಿದ್ದರು. 12ನೇ ನಂಬರ್‌ ನ ಪ್ಯಾಸೆಂಜರ್‌ ಆಗಿದ್ದರು. ದುರಾದೃಷ್ಟವಶಾತ್ ಬದುಕುಳಿದಿಲ್ಲ.
  • ಅಧಿಕಾರಿಗಳು ಅಪಘಾತ ಸ್ಥಳದ ಸುತ್ತಲೂ ರಸ್ತೆಗಳನ್ನು ಬಂದ್ ಮಾಡಿದ್ದು, ತುರ್ತು ವಾಹನಗಳಿಗೆ ಮಾತ್ರ ಪ್ರವೇಶ ಕಲ್ಪಿಸಿ ಕೊಟ್ಟಿದ್ದರು

ಸರ್ಕಾರದ ಪ್ರತಿಕ್ರಿಯೆ:

ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಈ ದುರ್ಘಟನೆ ಸುದ್ದಿ ತೀವ್ರವಾಗಿ ದುಃಖಕರವಾಗಿದೆ. ನಾನು ವೈಯಕ್ತಿಕವಾಗಿ ಈ ಘಟನೆ ಮೇಲೆ ನಿಗಾ ಇಟ್ಟಿದ್ದೇನೆ. ರಕ್ಷಣಾ ಹಾಗೂ ತುರ್ತು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ ಎಂದಿದ್ದಾರೆ.

ಬ್ರಿಟನ್ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ತಮ್ಮ ಸಂತಾಪ ಸೂಚಿಸಿ, ಲಂಡನ್‌ಗೆ ಹೊರಟಿದ್ದ ವಿಮಾನವು ಭಾರತದಲ್ಲಿ ಅಪಘಾತಕ್ಕೀಡಾದ ಸುದ್ದಿ ಶಾಕಿಂಗ್‌ ಆಗಿದೆ. ತೀವ್ರ ದುಃಖದ ಈ ಕ್ಷಣದಲ್ಲಿ ಪ್ರಯಾಣಿಕರು ಮತ್ತು ಅವರ ಕುಟುಂಬಗಳೊಂದಿಗೆ ನನ್ನ ಆಲೋಚನೆಗಳು ಇವೆ ಎಂದಿದ್ದಾರೆ.

ಲಂಡನ್ ಗ್ಯಾಟ್‌ವಿಕ್ ವಿಮಾನ ನಿಲ್ದಾಣದಿಂದ ಕೂಡ ಪ್ರತಿಕ್ರಿಯೆ ಬಂದಿದ್ದು, ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟಿದ್ದ AI171 ವಿಮಾನವು ಇಂದು ಸಂಜೆ 6:25ಕ್ಕೆ ಲಂಡನ್‌ಗೆ ಆಗಮಿಸಬೇಕಾಗಿತ್ತು. ಆದರೆ ಅದು ಅಪಘಾತಕ್ಕೀಡಾಗಿದೆ ಎಂಬುದು ದೃಢವಾಗಿದೆ ಎಂದಿದೆ.

ಟಾಟಾ ಸಮೂಹ ಮತ್ತು ಉದ್ಯಮದ ಪ್ರತಿಕ್ರಿಯೆ:

ಏರ್ ಇಂಡಿಯಾ ಅಧ್ಯಕ್ಷ ಎನ್. ಚಂದ್ರಶೇಖರನ್ ಹೇಳಿಕೆ ಬಿಡುಗಡೆ ಮಾಡಿ "AI171 ರ ಈ ದುರಂತ ಸುದ್ದಿ ನಮ್ಮನ್ನು ಆಘಾತಕ್ಕೆ ಒಳಪಡಿಸಿದೆ. ದುರಂತದಲ್ಲಿ ಮಡಿದವರ ಎಲ್ಲರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ನಮ್ಮ ಗಮನವು ಪೀಡಿತರಿಗೆ ಸಹಾಯ ಮಾಡುವತ್ತ ಇದೆ. ತುರ್ತು ಕೇಂದ್ರ ಸಕ್ರಿಯಗೊಂಡಿದ್ದು, ಕುಟುಂಬಗಳಿಗೆ ಮಾಹಿತಿ ನೀಡಲು ವಿಶೇಷ ತಂಡ ರಚಿಸಲಾಗಿದೆ.

ಕೈಗಾರಿಕೋದ್ಯಮಿ ಗೌತಮ್ ಅದಾನಿಯವರು ತಮ್ಮ ಟ್ವೀಟಿನಲ್ಲಿ ಸಂತಾಪ ಸೂಚಿಸಿ, "ಈ ದುಃಖದ ಸಮಯದಲ್ಲಿ ನಾವು ಪೀಡಿತರ ಕುಟುಂಬಗಳೊಂದಿಗೆ ಇದ್ದೇವೆ. ಅಗತ್ಯವಿರುವ ಎಲ್ಲಾ ಸಹಾಯ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.