ಏರ್ ಇಂಡಿಯಾ ದುರಂತದ ಕಣ್ಮೀರ ಕತೆಗಳು ಒಂದೆರೆಡಲ್ಲ. ಈ ದುರಂತದಲ್ಲಿ ವಿಮಾನದ ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿಗಳು, ಅಕ್ಕ ಪಕ್ಕದ ಕಟ್ಟದಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಗಾಯಗೊಂಡ ಅತೀ ಕಿರಿಯ ಗಾಯಾಳುವಾಗಿರುವ 8 ತಿಂಗಳ ಮಗುವಿನ ಪರಿಸ್ಥಿತಿ ಹೇಗಿದೆ?

ಅಹಮ್ಮದಾಬಾದ್(ಜೂ.19) ಏರ್ ಇಂಡಿಯಾ ವಿಮಾನ ದುರಂತ ಘಟನೆಯ ನೋವು ಮಾಸುವುದಿಲ್ಲ. ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ 241 ಮಂದಿ ಮೃತಪಟ್ಟಿದ್ದಾರೆ. ಇನ್ನು ವಿಮಾನ ಪತನಗೊಂಡ ಬಿಜೆ ಹಾಸ್ಟೆಲ್‌ನ 56ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳ ಸಂಖ್ಯೆ ಕೂಡ 50ರ ಮೇಲಿದೆ. ವಿಮಾನ ಪತನಗೊಂಡ ಹಾಸ್ಟೆಲ್ ಪಕ್ಕದ ಕಟ್ಟಡದಲ್ಲಿದ್ದ ಹಲವರು ಗಾಯಗೊಂಡಿದ್ದಾರೆ. ಹೀಗೆ ವಿಮಾನ ದುರಂತದಲ್ಲಿ ಗಾಯಗೊಂಡವರ ಪೈಕಿ ಅತೀ ಕಿರಿಯ ಗಾಳಾಯು 8 ತಿಂಗಳ ಮಗು ಧ್ಯಾಂಶ್. ಈ ಮಗುವಿನ ಪರಿಸ್ಥಿತಿ ಹೇಗಿದೆ?

ತಾಯಿ ಹಾಗೂ ಮಗು ಇಬ್ಬರಿಗೂ ಸುಟ್ಟ ಗಾಯ

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗಾಯಾಳುಗಳ ಪೈಕಿ ಅತೀ ಕಿರಿಯ ಗಾಯಾಳು 8 ತಿಂಗಳ ಗಂಡು ಮಗು ಧ್ಯಾಂಶ್. ಧ್ಯಾಂಶ್ ಹಾಗೂ ಮಗುವಿನ ತಾಯಿ ಮನೀಶಾ ಕಚ್ಚಾಡಿಯಾ ಇಬ್ಬರೂ ಗಾಯಗೊಂಡಿದ್ದಾರೆ. ವಿಮಾನ ಹಾಸ್ಟೆಲ್ ಮೇಲೆ ಪತನಗೊಂಡಿದೆ. ಬಳಿಕ ಭರ್ತಿ ಇಂಧನ ಕಾರಣದಿಂದ ವಿಮಾನ ಸ್ಪೋಟಗೊಂಡಿದೆ. ಇದರಿಂದ ಅಕ್ಕ ಪಕ್ಕದ ಕಟ್ಟಡಗಳು ಸಂಪೂರ್ಣ ಹೊತ್ತಿ ಉರಿದಿದೆ. ಹೀಗೆ ಹಾನಿಯಾದ ಕಟ್ಟಡ ಒಂದರ ಪೈಕಿ ಮನೀಶಾ ಹಾಗೂ 8 ತಿಂಗಳ ಮಗು ಗಂಭೀರವಾಗಿ ಸುಟ್ಟ ಗಾಯಗಳಾಗಿದೆ.

ಮಗುವನ್ನು ಎತ್ತಿಕೊಂಡು ಓಡಿದ ತಾಯಿ

ವಿಮಾನ ಪತನಗೊಂಡ ಬೆನ್ನಲ್ಲೇ ಏನಾಗುತ್ತಿದೆ ಅನ್ನೋವಷ್ಟರಲ್ಲೇ ಬೆಂಕಿ ಹೊತ್ತಿಕೊಂಡಿದೆ. ಮನೀಶಾ ಹಾಗೂ ಮಗೂ ಇದ್ದ ಕಟ್ಟಡ ವಿಮಾನ ಪತನ ಹಾಗೂ ಸ್ಫೋಟದಿಂದ ಹಾನಿಯಾಗಿದೆ. ಈ ಬೆಂಕಿಯ ಕೆನ್ನಾಲಗೆ ನಡುವೆ 8 ತಿಂಗಳ ಮಗುವನ್ನು ಎತ್ತಿಕೊಂಡ ತಾಯಿ ಮನೀಶಾ ಹೊರಗೆ ಓಡಿದ್ದಾಳೆ. ಆದರೆ ಬೆಂಕಿ ತೀವ್ರವಾಗಿದ್ದ ಕಾರಣ ಇಬ್ಬರು ಸುಟ್ಟಗಾಯಗಳಾಗಿದೆ. ಮಗುವನ್ನು ಅಪ್ಪಿಕೊಂಡು ಹೆಚ್ಚಿನ ಗಾಯವಾಗದಂತೆ ಓಡಿದ ಮನೀಶಾ ಕಟ್ಟದಿಂದ ಹೊರಬಂದಿದ್ದಾರೆ. ಅಷ್ಟರೊಳಗೆ ಇಬ್ಬರೂ ಗಾಯಗೊಂಡಿದ್ದಾರೆ.

ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಗು ಶೇಕಡಾ 28 ರಷ್ಟು ಸುಟ್ಟು ಗಾಯಳಾಗಿದ್ದರೆ, ತಾಯಿ ಮನೀಶಾ ಶೇಕಡಾ 30ಕ್ಕಿಂತ ಹೆಚ್ಚು ಭಾಗ ಸುಟ್ಟ ಗಾಯಗಳಾಗಿತ್ತು. ಇಬ್ಬರ ಪರಿಸ್ಥಿತಿ ಗಂಭೀರವಾಗಿತ್ತು. ಗಾಯಾಳುಗಳನ್ನು ಅಹಮ್ಮದಾಬಾದ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಮಾನ ಪತನ ವೇಳೆ ಪತಿ ಮನೆಯಲ್ಲಿ ಇರಲಿಲ್ಲ. ತಾಯಿ ಹಾಗೂ ಮಗು ಇಬ್ಬರೇ ಇದ್ದರು.

ತೀವ್ರ ನಿಘಾ ಘಟಕದಲ್ಲಿದ್ದ 8 ತಿಂಗಳ ಮಗು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇತ್ತ ತಾಯಿ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ವೈದ್ಯರ ನಿಘಾದಲ್ಲಿರುವ ಮಗು ಕೆಲ ದಿನಗಳಲ್ಲಿ ವಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ ಎಂದು ಮಗುವಿನ ತಂದೆ ಕಪಿಲ್ ಕಚ್ಚಾಡಿಯಾ ಹೇಳಿದ್ದಾರೆ. ಬಿಜೆ ಮೆಡಿಕಲ್ ಕಾಲೇಜಿನಲ್ಲಿ MCh ಮಾಡುತ್ತಿರುವ ಕಪಿಲ್ ಕಚ್ಚಾಡಿಯಾ ವಿಮಾನ ಪತನದ ವೇಳೆ ಕಾಲೇಜಿನಲ್ಲಿದ್ದರು.ಧ್ಯಾಂಶ್ ಆರೋಗ್ಯ ಚೇತರಿಕೆ ಕಾಣುತ್ತಿದೆ. ಪತ್ನಿ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಪತ್ನಿ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.