ಏರ್ ಇಂಡಿಯಾ ದುರಂತ ವಿಮಾನದ ಪೈಲೆಟ್ ಸುಮೀತ್ ಸರ್ಬಾಲ್ ತಂದೆ ಜೊತೆ ಮಾತನಾಡಿದ ಕೊನೆಯ ಕರೆಯ ಮಾಹಿತಿ ಬಹಿರಂಗವಾಗಿದೆ. ಈ ಮಾತುಗಳು ಹಲವರನ್ನು ಭಾವುಕರನ್ನಾಗಿ ಮಾಡಿದೆ.

ಅಹಮ್ಮದಾಬಾದ್(ಜೂ.13) ಏರ್ ಇಂಡಿಯಾ ವಿಮಾನ ದುರಂತದ ಒಂದೊಂದೆ ಮನಮಿಡಿಯುವ ಕತೆಗಳು ಹೊರಬರುತ್ತಿದೆ. ದುರಂತ ವಿಮಾನದ ಪೈಲೆಟ್ ಕ್ಯಾಪ್ಟನ್ ಸುಮಿತ್ ಸಬರ್ವಾಲ್ ತನ್ನ ತಂದೆಯ ಜೊತೆ ಕೊನೆಯದಾಗಿ ಕರೆ ಮಾಡಿ ಮಾತನಾಡಿದ ಮಾತುಗಳು ಹಲವರನ್ನು ಭಾವುಕರನ್ನಾಗಿ ಮಾಡಿದೆ. ಸುಮೀತ್ ಸಬರ್ವಾಲ್ ತಂದೆ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ತಂದೆಗೆ ಕರೆ ಮಾಡಿ ಮಾತನಾಡಿದ್ದ ಸುಮೀತ್ ಸಬರ್ವಾಲ್ ಕೆಲ ಭರವಸೆ ನೀಡಿದ್ದರು. ಇದೀಗ ಅನಾರೋಗ್ಯ ಪೀಡಿತ ತಂದೆ ಈ ಮಾತುಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಶೀಘ್ರದಲ್ಲೇ ರಾಜೀನಾಮೆ ನೀಡುತ್ತೇನೆ ಅಪ್ಪ

ಅಪ್ಪ, ಶೀಘ್ರದಲ್ಲೇ ರಾಜೀನಾಮೆ ನೀಡುತ್ತಿದ್ದೇನೆ. ನಿಮ್ಮನ್ನು ನೋಡಿಕೊಳ್ಳಬೇಕು, ಆರೈಕೆ ಮಾಡಬೇಕು ಎಂದು ದುರಂತ ಏರ್ ಇಂಡಿಯಾ ವಿಮಾನದ ಪೈಲೆಟ್ ಸುಮೀತ ಸಬರ್ವಾಲ್ ತನ್ನ ತಂದೆಗೆ ಭರವಸೆ ನೀಡಿದ್ದರು. ದುರಂತ ನಡೆಯುವ ಮೂರು ದಿನ ಹಿಂದೆ ಅಂದರೆ ಜೂನ್ 11ರಂದು ಸುಮಿತ್ ಸಬರ್ವಾಲ್ ತಂದೆಗೆ ಕರೆ ಮಾಡಿ ಮಾತನಾಡಿದ್ದರು. 80ರ ಆಸುಪಾಸಿನಲ್ಲಿರುವ ಸುಮಿತ್ ತಂದೆ ಪುಷ್ಕರಾಜ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಪೋಷಕರನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅನ್ನೋ ಮಾತುಗಳನ್ನು ಸುಮಿತ್ ಪದೇ ಪದೇ ತನ್ನ ಆತ್ಮೀಯರೊಂದಿಗೆ ಹೇಳಿಕೊಂಡಿದ್ದರು.

ಜೂನ್ 11ರಂದು ತಂದೆಗೆ ಕರೆ ಮಾಡಿ ಮಾತನಾಡಿದ್ದ ಸುಮಿತ್, ಯಾವುದೇ ಚಿಂತೆ ಮಾಡದಂತೆ ಹೇಳಿದ್ದಾರೆ. ಇಷ್ಟೇ ಅಲ್ಲ ನಿಮ್ಮ ಆರೋಗ್ಯ, ಆರೈಕೆ ಮಾಡಲು ನಾನು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಶೀಘ್ರದಲ್ಲೇ ಮನಗೆ ಮರಳುತ್ತೇನೆ. ನಿಮ್ಮನ್ನು ನೋಡಿಕೊಳ್ಳಬೇಕು ಎಂದು ಸುಮಿತ್ ಹೇಳಿದ್ದರು. ಇದಾದ ಬಳಿಕ ತಂದೆ ಜೊತೆ ಕರೆ ಮಾಡಲು ಸುಮಿತ್‌ಗೆ ಸಾಧ್ಯವಾರಲಿಲ್ಲ. ಜೂನ್ 09 ರಂದು ಮನೆಯ ಇತರ ಸದಸ್ಯರ ಜೊತೆ ಸುಮಿತ್ ಮಾತನಾಡಿದ್ದಾರೆ. ಆದರೆ ತಂದೆ ಜೊತೆ ಮಾತನಾಡಲು ಸಾಧ್ಯವಾಗಿರಲಿಲ್ಲ. ತಂದೆಗೆ ನೀಡಿದ ಭರಸೆಯೇ ಕೊನೆಯ ಕರೆ ಆಗಲಿದೆ ಅನ್ನೋ ಯಾವುದೇ ಸುಳಿವು ಸುಮಿತ್ ಸಬರ್ವಾಲ್ ಅಥವಾ ತಂದೆಗೆ ಗೊತ್ತಿರಲಿಲ್ಲ.

Scroll to load tweet…

ಸಾಂತ್ವನ ಹೇಳಲು ಹೋದ ಶಾಸಕ ಕಣ್ಣೀರು

ಶಿವಸೇನಾ ಶಾಸಕ ದಿಲೀಪ್ ಲಾಂಡೆ, ಕ್ಯಾಪ್ಟನ್ ಸುಮೀತ್ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಶಾಸಕ ದಿಲೀಪ್ ಲಾಂಡೆ, ಪೈಲೆಟ್ ತಂದೆಗೆ ಸಾಂತ್ವನ ಹೇಳಲು ಕಷ್ಟವಾಗಿತ್ತು. ತಂದೆಯ ಮುಖದಲ್ಲಿ ನೋವು, ಕಣ್ಣೀರು, ಅವರ ಮಾತುಗಳು ಕೇಳಿಸಿಕೊಳ್ಳುವಾಗ ನಾನು ಕೂಡ ಕಣ್ಮೀರಾದೆ. ಕೊನೆಯ ಕರೆ ಕುರಿತು ಹೇಳಿದರು. ಬೇಗನೆ ಮನೆಗೆ ವಾಪಾಸ್ಸಾಗುತ್ತೇನೆ. ದೇವರು ನಿಮ್ಮನ್ನು ನೋಡಿಕೊಳ್ಳುವಷ್ಟು ಆರ್ಥಿಕ ಶಕ್ತಿ ಕೊಟ್ಟಿದ್ದಾನೆ. ಈಗ ನಾನು ನಿಮಗೆ ಸಮಯ ನೀಡಬೇಕಿದೆ. ಅದನ್ನು ಮಾಡುತ್ತೇನೆ ಎಂದು ಕ್ಯಾಪ್ಟನ್ ಸುಮೀತ್ ಹೇಳಿದ್ದರು ಎಂದು ಪುಷ್ಕರಾಜ್ ಕಣ್ಣೀರಿಡುತ್ತಾ ಹೇಳಿದ್ದಾರೆ.

ಮುಂಬೈನ ಪೊವಾಯಿಲ್ಲಿರುವ ಸುಮಿತ್ ಸಬರ್ವಾಲ್ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಕ್ಯಾಪ್ಟನ್ ಸುಮಿತ್ ತಂದೆ ಕೂಡ ನಾಗರೀಕ ವಿಮಾನಯಾನ ವಿಭಾಗದ ಡೈರೆಕ್ಟರ್ ಜನರಲ್ ಆಗಿ ನಿವೃತ್ತಿ ಹೊಂದಿದ್ದಾರೆ.

ಅಹಮದಾಬಾದ್ ಲಂಡನ್ ಏರ್ ಇಂಡಿಯಾ ವಿಮಾನ ಎ171 ಪತನ ದುರಂತ ಭಾರತದ ಅತೀ ದೊಡ್ಡ ದುರಂತದಲ್ಲಿ ಒಂದಾಗಿದೆ. ವಿಮಾನದಲ್ಲಿ ಇಬ್ಬರು ಪೈಲೆಟ್, ಕ್ಯಾಬಿನ್ ಸಿಬ್ಬಂದಿ ಸೇರಿದದಂತೆ 242 ಮಂದಿ ಪ್ರಯಾಣಿಸಿದ್ದರು. ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ವಿಮಾನ ಪತನಗೊಂಡಿದೆ. ಈ ದುರಂತದಲ್ಲಿ 241 ಮಂದಿ ಮೃತಪಟ್ಟಿದ್ದಾರೆ. ಒಬ್ಬ ಪ್ರಯಾಣಿಕ ಬದುಕಿ ಉಳಿದಿದ್ದಾನೆ. ಇದೇ ವಿಮಾನದಲ್ಲಿ ಪ್ರಯಾಣಿಸಿದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಮೃತಪಟ್ಟಿದ್ದರು.