ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮೃತಪಟ್ಟಿರುವುದು ಖಚಿತವಾಗಿದೆ. ರೂಪಾನಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಹಮ್ಮದಾಬಾದ್(ಜೂ.12) ಅಹಮ್ಮದಾಬಾದ್‌ನಿಂದ ನಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದ ಏರ್ ಇಂಡಿಯಾ ಪತನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮೃತಪಟ್ಟಿರುವುದು ಖಚಿತಗೊಂಡಿದೆ. ಲಂಡನ್‌ನಲ್ಲಿ ನೆಲೆಸಿರುವ ಮಗಳನ್ನು ಭೇಟಿಯಾಗಲು ಅಹಮ್ಮದಾಬಾದ್ ಮೂಲಕ ಲಂಡನ್‌ಗೆ ಪ್ರಯಾಣ ಬೆಳೆಸಿದ್ದ ವಿಜಯ್ ರೂಪಾನಿ, ವಿಮಾನ ದುರಂತದಲ್ಲಿ ಮಡಿದಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಕನ್ವೇನರ್ ಮುರಳೀಧರ್ ರಾವ್ ಖಚಿತಪಡಿಸಿದ್ದಾರೆ. ಇತ್ತ ವಿಮಾನದಲ್ಲಿದ್ದ ಎಲ್ಲಾ 242 ಮಂದಿ ಪ್ರಯಾಣಿಕರು ಮೃತಪಟ್ಟಿರುವುದಾಗಿ ಅಹಮ್ಮದಾಬಾದ್ ಪೊಲೀಸ್ ಕಮಿಷನರ್ ಜಿಎಸ್ ಮಲಿಕ್ ಖಚಿತಪಡಿಸಿದ್ದಾರೆ.

ಪತ್ನಿಯನ್ನು ಭಾರತಕ್ಕೆ ಕರೆತರಲು ಪ್ರಯಾಣ ಬೆಳೆಸಿದ್ದ ವಿಜಯ್ ರೂಪಾನಿ

ಮಗಳ ಜೊತೆ ಲಂಡನ್‌ಗೆ ತೆರಳಿದ್ದ ವಿಜಯ್ ರೂಪಾನಿ ಪತ್ನಿ ಕೆಲ ದಿನಗಳನ್ನು ಕಳೆದಿದ್ದರು. ಮಗಳ ಜೊತೆ ಲಂಡನ್‌ನಲ್ಲಿದ್ದ ಪತ್ನಿ ಅಂಜಲಿ ರೂಪಾನಿಯನ್ನು ಕರೆತರಲು ವಿಜಯ್ ರೂಪಾನಿ ಲಂಡನ್‌ಗೆ ಪ್ರಯಾಣ ಬೆಳೆಸಿದ್ದರು. ಆದರೆ ವಿಮಾನ ಅಹಮ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಈ ಪತನದಲ್ಲಿ ವಿಜಯ್ ರೂಪಾನಿ ಕೂಡ ಮೃತಪಟ್ಟಿದ್ದಾರೆ.

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ನಿಧನರಾಗಿದ್ದರೆ ಅನ್ನೋ ಸುದ್ದಿ ಕೇಳಿ ಆಘಾತ ಹಾಗೂ ತೀವ್ರ ನೋವಾಗಿದೆ. ಕೇವಲ ಗುಜರಾತ್‌ಗೆ ಮಾತ್ರವಲ್ಲ ಈ ದೇಶಕ್ಕೆ ಆದ ದೊಡ್ಡ ನಷ್ಟ. ಇದು ಅತ್ಯಂತ ಕಠಿಣ ಹಾಗೂ ನೋವಿನ ಸಂದರ್ಭವಾಗಿದೆ. ಈ ಸಂರ್ಭದಲ್ಲಿ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿದೆ. ಇದೇ ವೇಳೆ ಈ ದುಃಖವನ್ನು ಕುಟುಂಬಸ್ಥರು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಬಿಜೆಪಿ ನಾಯಕ ಮುರಳೀಧರ್ ರಾವ್ ಸಂತಾಪ ಸೂಚಿಸಿದ್ದಾರೆ.

2016ರಿಂದ 2021ರ ವರೆಗೆ ಗುಜರಾತ್‌ನ 16ನೇ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಸೇವೆ ಸಲ್ಲಿಸಿದ್ದಾರೆ.

ಎಲ್ಲಾ ಪ್ರಯಾಣಿಕರು ಸಾವು

ಏರ್ ಇಂಡಿಯಾ ಎ171 ವಿಮಾನದಲ್ಲಿ ಪೈಲೆಟ್, ಸಿಬ್ಬಂದಿ ಸೇರಿದಂತೆ 242 ಪ್ರಯಾಣಿಕರಿದ್ದರು. ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪತನಗೊಂಡಿದೆ. ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ವಿಮಾನ ಪತನಗೊಂಡಿದೆ. ಇದು ಜನನಿಬಿಡಿ ಪ್ರದೇಶವಾಗಿದೆ. ವಿಮಾನದಲ್ಲಿ ಇಂಧನ ಭರ್ತಿಯಾಗಿದ್ದ ಕಾರಣ ಸ್ಫೋಟದ ಪ್ರಮಾಣವೂ ಹೆಚ್ಚಾಗಿದೆ. ಈ ವಿಮಾನದಲ್ಲಿದ್ದ 242 ಪ್ರಯಾಣಿಕರು ಮೃತಪಟ್ಟಿರುವುದಾಗಿ ಅಹಮ್ಮದಾಬಾದ್ ಕಮಿಷನರ್ ಖಚಿತಪಡಿಸಿದ್ದಾರೆ.

ಹಾಸ್ಟೆಲ್‌ನಲ್ಲಿ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳು ಸಾವು

ವಿಮಾನ ನೇರವಾಗಿ ಮೆಡಿಕಲ್ ಹಾಸ್ಟೆಲ್ ಮೇಲೆ ಪತನಗೊಂಡಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಊಟ ಮಾಡುತ್ತಿದ್ದ ವೇಳೆ ವಿಮಾನ ಪತನಗೊಂಡಿದೆ. ಹೀಗಾಗಿ ಹಲವು ವಿದ್ಯಾರ್ಥಿಗಳು, ವೈದ್ಯರು ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.