ಬ್ಯಾಗ್ ಪಕ್ಕದಲ್ಲೇ ಇಡಲು ಬಿಡಿ, ಇಲ್ಲದಿದ್ದರೆ ಏರ್ ಇಂಡಿಯಾ ವಿಮಾನ ಪತನಗೊಳಿಸುತ್ತೇನೆ ಎಂದು ಬೆಂಗಳೂರು ವೈದ್ಯೆ ಭಾರಿ ಹೈಡ್ರಾಮ ನಡೆಸಿದ ಘಟನೆ ನಡೆದಿದೆ. ಬೆಂಗಳೂರು-ಸೂರತ್ ಏರ್ ಇಂಡಿಯಾ ವಿಮಾನದಲ್ಲಿ ಕಿತ್ತಾಡಿದ ವೈದ್ಯೆಗೆ ಪ್ರಯಾಣ ಮುಂದುವರಿಸಿದ್ರಾ?
ಬೆಂಗಳೂರು (ಜೂ.20) ಏರ್ ಇಂಡಿಯಾ ಎ171 ವಿಮಾನ ಪತನದ ಬಳಿಕ ವಿಮಾನ ಪ್ರಯಾಣ ಪ್ರಯಾಣಿಕರ ಉಸಿರು ಬಿಗಿ ಹಿಡಿಯುವಂತೆ ಮಾಡುತ್ತಿದೆ. ಇದರ ನಡುವೆ ನನ್ನ ಬೇಡಿಕೆ ಈಡೇರಿಸದಿದ್ದರೆ ಈ ವಿಮಾನ ಹಾರಾಡಲು ಬಿಡುವುದಿಲ್ಲ, ಪತನ ಮಾಡುತ್ತೇನೆ ಎಂದು ಬೆಂಗಳೂರು ವೈದ್ಯೆ ಎಚ್ಚರಿಕೆ ನೀಡಿ ರಂಪಾಟ ನಡೆಸಿದ ಘಟನೆ ನಡೆದಿದೆ. ಬೆಂಗಳೂರು ಸೂರತ್ ಏರ್ ಇಂಡಿಯಾದಲ್ಲಿ ಈ ಘಟನೆ ನಡೆದಿದೆ. ವಿಮಾನ ಹತ್ತಿದ ಬೆಂಗಳೂರು ವೈದ್ಯೆ ರಂಪಾಟ ಇತರ ಪ್ರಯಾಣಿಕರ ತಾಳ್ಮೆ ಪರೀಕ್ಷಿಸಿದೆ. ಕೊನೆಗೆ ವಿಮಾನ ಪತನ ಮಾಡುವುದಾಗಿ ಎಚ್ಚರಿಸಿದ್ದಾರೆ. ಈ ರಂಪಾಟದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವೈದ್ಯೆ ರಂಪಾಟ ಶುರುವಾಗಿದ್ದು ಹೇಗೆ?
ಯಲಹಂಕಾ ಶಿವನಹಳ್ಳಿ ಸಮೀಪದ 36 ವರ್ಷದ ವೈದ್ಯೆ ವ್ಯಾಸ ಹಿರಾಲ್ ಮೊಹನ್‌ಭಾಯಿ ಅನ್ನೋ ವೈದ್ಯೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಹತ್ತಿದ್ದಾರೆ. ಸೂರತ್ ಪ್ರಯಾಣಕ್ಕೆ ಎಲ್ಲರೂ ಬೋರ್ಡಿಂಗ್ ಆಗಿದ್ದಾರೆ. ಎರಡು ಲಗೇಜ್ ಬ್ಯಾಗ್‌ನೊಂದಿಗೆ ವಿಮಾನ ಹತ್ತಿದ ವ್ಯಾಸ ಹಿರಾಲ್ ಒಂದು ಬ್ಯಾಗ್‌ನ್ನು ಕ್ಯಾಬಿನ್ ಕ್ರೂ ಪಕ್ಕದಲ್ಲಿ ಇಟ್ಟರೆ, ಮತ್ತೊಂದನ್ನು ತಮ್ಮ ಕೈಯಲ್ಲಿ ಹಿಡಿದು ಕುಳಿತುಕೊಂಡಿದ್ದಾರೆ. ವಿಮಾನ ಸಿಬ್ಬಂದಿಗಳು ಆಗಮಿಸಿ ಕ್ಯಾಬಿನ್ ಕ್ರೂ ಬಳಿ ಇಟ್ಟಿರು ಲಗೇಜನ್ನು ಬ್ಯಾಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಇಡಲು ಸೂಚಿಸಿದ್ದಾರೆ. ಬೇಕಿದ್ದರೆ ಕೈಯಲ್ಲಿರುವ ಬ್ಯಾಗ್ ಕೂಡ ಕಂಪಾರ್ಟ್‌ಮೆಂಟ್‌ನಲ್ಲಿ ಇಡಲು ಮನವಿ ಮಾಡಿದ್ದಾರೆ. ಬಳಿಕ ಕ್ಯಾಬಿನ್ ಕ್ರೂ ಹಾಗೂ ಇತರರಿಗೆ ಅಡ್ಡಿಯಾಗುತ್ತಿದ್ದ ವೈದ್ಯೆಯ ಲಗೇಜ್ ಬ್ಯಾಗನ್ನು ಬ್ಯಾಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಇಡಲು ಮುಂದಾಗಿದ್ದಾರೆ. ಇದು ವೈದ್ಯೆಯನ್ನು ರೊಚ್ಚಿಗೆಬ್ಬಿಸಿದೆ. ತಾನು ಇಟ್ಟಿರುವ ಬ್ಯಾಗ್ ತೆಗೆದರೆ ಪರಿಣಾಮ ನೆಟ್ಟಗಿರಲ್ಲ ಎಂದು ವಿಮಾನ ಸಿಬ್ಬಂದಿಗಳ ಮೇಲೆ ರೇಗಾಡಿದ್ದಾರೆ. ಕ್ಯಾಪ್ಟನ್ ಬಂದು ಮನವಿ ಮಾಡಿದರೂ ವೈದ್ಯೆ ತಣ್ಣಗಾಗಿಲ್ಲ.
ವಿಮಾನ ಪತನಗೊಳಿಸುತ್ತೇನೆ
ವೈದ್ಯಯ ರಂಪಾಟ ಮುಗಿಯುವ ಲಕ್ಷಣಗಳು ಕಾಣಲಿಲ್ಲ. ಟೇಕ್ ಆಫ್ ಆಗಬೇಕಿದ್ದ ವಿಮಾನ ಈ ಜಗಳದಲ್ಲಿ ಟೇಕ್ ಆಫ್ ಆಗದೆ ವಿಳಂಬವಾಗತೊಡಗಿತು. ಹೀಗಾಗಿ ಇತರ ಪ್ರಯಾಣಿಕರು ಮಹಿಳೆಗೆ ತಿಳಿ ಹೇಳುವ ಪ್ರಯತ್ನ ಮಾಡಿದಾಗ ವೈದ್ಯ ರೊಚ್ಚಿಗೆದ್ದಿದ್ದಾರೆ. ತನ್ನ ಬ್ಯಾಗೇಜ್ ತೆಗೆದು ಬೇರೆಡೆ ಇಟ್ಟರೆ ಈ ವಿಮಾನ ಪತನ ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ. ಬಳಿಕ ರಂಪಾಟ ಜೋರಾಗಿದೆ.
36 ವರ್ಷದ ವೈದ್ಯೆ ಅರೆಸ್ಟ್
ಸಹ ಪ್ರಯಾಣಿಕರು ವಿಮಾನ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕ್ಯಾಪ್ಟನ್ ತಕ್ಷಣವೇ ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂಧಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಐಎಸ್ಎಫ್ ಭದ್ರತಾ ಪಡೆ ಸಿಬ್ಬಂದಿ ಆಗಮಿಸಿ ಮಹಿಳೆಯನ್ನು ವಶಕ್ಕೆ ಪಡೆದಿದ್ದರೆ. ಬಳಿಕ ವಿಮಾನದಿಂದ ಕೆಳಗಿಳಿಸಿದ್ದಾರೆ. ವಿಮಾನ ವಿಳಂಬ ಮಾಡಿದ ಕಾರಣ, ಸಹ ಪ್ರಯಾಣಿಕರಿಗೆ ಬೆದರಿಕೆ, ಹಲ್ಲೆ, ಹಾಗೂ ವಿಮಾನ ಪತನಗೊಳಿಸುವುದಾಗಿ ಎಚ್ಚರಿಕೆ ನೀಡಿದ ಕಾರಣಕ್ಕೆ ಮಹಿಳೆಯನ್ನು ಅರೆಸ್ಟ್ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿಗಳ ವಿರುದ್ಧವೂ ವೈದ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ವೈದ್ಯೆಯಾಗಿರುವ ಹಿರಾಲ್ ಅರೆಸ್ಟ್ ಆಗುತ್ತಿದ್ದಂತೆ ವೈದ್ಯೆ ಪತಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಬೆಂಗಳೂರಿನ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿಯಲ್ಲಿರುವ ಪತಿ ಆಗಮಿಸಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಪತ್ನಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾರೆ. ಚಿಕಿತ್ಸೆ ನಡೆಯುತ್ತಿದೆ. ಸದ್ಯ ವೈದ್ಯ ವೃತ್ತಿ ಮಾಡುತ್ತಿಲ್ಲ. ಆರೋಗ್ಯ ಸಮಸ್ಯೆ ಇರುವ ಕಾರಣ ತವರು ಮನೆಗೆ ತೆರಳುತ್ತಿದ್ದರು. ಈ ವೇಳೆ ಘಟನೆ ನಡೆದಿದೆ ಎಂದು ಮನವಿ ಮಾಡಿದ್ದಾರೆ. ಆದರೆ ಪೊಲೀಸರು ವೈದ್ಯೆಯ ಪೂರ್ವಾಪರ ಪರಿಶೀಲಿಸಲು ಮುಂದಾಗಿದ್ದಾರೆ.
